ರಾಜಶೇಖರ ಕೋಟಿ ಅವರ ವ್ಯಕ್ತಿತ್ವ ಘನವಾದದ್ದು: ಶಾಸಕ ಕೆ.ಹರೀಶ್‌ಗೌಡ

| Published : Feb 21 2025, 12:50 AM IST

ರಾಜಶೇಖರ ಕೋಟಿ ಅವರ ವ್ಯಕ್ತಿತ್ವ ಘನವಾದದ್ದು: ಶಾಸಕ ಕೆ.ಹರೀಶ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಮಾನವ ಹೆಸರಿಗೆ ಚ್ಯುತಿ ಬರದಂತೆ ವಿಶ್ವಮಾನವ ಮೈಸೂರು ವಿಶ್ವ ವಿದ್ಯಾನಿಲಯದ ನೌಕರರ ವೇದಿಕೆ ಕಾರ್ಯನಿರ್ವಹಿಸುತ್ತಿವೆ. ಮೈಸೂರು ವಿವಿ ಇರುವವರೆಗೂ ವೇದಿಕೆ ಅಸ್ತಿತ್ವದಲ್ಲಿದ್ದು, ಸಮಾಜ ಮುಖಿ ಕೆಲಸ ಮಾಡಬೇಕು. ಕೋಟಿ ಅವರ ವ್ಯಕ್ತಿತ್ವ ಘನವಾದದ್ದು. ಅವರ ಬಗ್ಗೆ ಅಪಾರ ಗೌರವವಿದೆ. ಇಂದು ನಾನು ಅಲ್ಪಸ್ವಲ್ಪ ವಿದ್ಯಾವಂತನಾಗಿದ್ದೇನೆ ಎಂದರೆ ಅದಕ್ಕೆ ಕೋಟಿ ಅವರ ಚಿಕ್ಕ ಸೋದರಿ ಅವರೇ ಕಾರಣ.

ಕನ್ನಡಪ್ರಭ ವಾರ್ತೆ ಮೈಸೂರು

‘ಆಂದೋಲನ’ ದಿನ ಪತ್ರಿಕೆಯ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರ ಸ್ಮರಣಾರ್ಥ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯದ ನೌಕರರ ವೇದಿಕೆ ವತಿಯಿಂದ 6ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಮಾನಸ ಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಐತಿಚಂಡ ರಮೇಶ್‌ ಉತ್ತಪ್ಪ, ಕೆ.ನರಸಿಂಹಮೂರ್ತಿ, ಗಿರೀಶ್‌ ಹುಣಸೂರು, ಎಂ.ಟಿ.ಮಹದೇವ, ಆರ್.ವಿರೇಂದ್ರ ಪ್ರಸಾದ್, ಶೇಖರ್ ಗೋಪಿನಾಥಂ, ಎಂ.ಬಿ.ಪವನಮೂರ್ತಿ, ಪತ್ರಿಕಾ ಛಾಯಾಗ್ರಾಹಕ ಕೆ.ಎಚ್‌. ಚಂದ್ರು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪಿ.ಶಿವರಾಜು ಅವರಿಗೆ ರಾಜಶೇಖರ ಕೋಟಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮತ್ತೊರ್ವ ಪ್ರಶಸ್ತಿ ಪುರಸ್ಕೃತ ಎಂ.ಆರ್‌. ಸತ್ಯನಾರಾಯಣ ಗೈರಾಗಿದ್ದರು.

ಇದೇ ಸಂದರ್ಭದಲ್ಲಿ ಯುವರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೆ.ಮಹೇಶ್‌, ಪ್ರಧಾನ ಅರ್ಚಕ ಲಕ್ಷ್ಮೀಶ್‌ ಶರ್ಮ, ಮೈಸೂರು ವಿವಿಯಿಂದ ಚಿನ್ನದ ಪದಕ ಪಡೆದ ಎಂ.ಆರ್.ಭೂಮಿಕಾ, ಯು.ಎ.ಕಾವ್ಯಶ್ರೀ, ಪಿ.ಕೆ.ಸಂಗೀತಾ, ಎನ್.ಹರ್ಷಿತ್, ಶ್ರೀನಿವಾಸ್, ಸ್ಪೂರ್ತಿ ಮಹೇಶ್, ಬಸಮ್ಮ ಮ್ಯಾಧೂಡ್, ಎ.ಎನ್.ಸುಮತಿ, ಆರ್.ದೇವಾನಂದ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ಎನ್.ರಕ್ಷಿತಾ, ಯು.ಲಿಖಿತಶ್ರೀ, ನಿರ್ಮತ ಮಹೇಶ್, ಎಸ್.ಭೂಮಿಕಾ, ಎ.ಎಸ್.ಪ್ರಾರ್ಥನಾ, ಲಿಖಿತ ಶಿವಕುಮಾರಸ್ವಾಮಿ, ಎಸ್.ವರುಣ್ ಅವರನ್ನು ಮೈಸೂರು ಪೇಟ ಮತ್ತು ಶಾಲು ಹೊದಿಸಿ ಸ್ಮರಣಿಕೆ ನೀಡಿ, ಅಭಿನಂದಿಸಲಾಯಿತು.

ನವ ವಿಶ್ವಮಾನವ ಟ್ರಸ್ಟ್ ಉದ್ಘಾಟಿಸಿದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ವಿಶ್ವಮಾನವ ಹೆಸರಿಗೆ ಚ್ಯುತಿ ಬರದಂತೆ ವಿಶ್ವಮಾನವ ಮೈಸೂರು ವಿಶ್ವ ವಿದ್ಯಾನಿಲಯದ ನೌಕರರ ವೇದಿಕೆ ಕಾರ್ಯನಿರ್ವಹಿಸುತ್ತಿವೆ. ಮೈಸೂರು ವಿವಿ ಇರುವವರೆಗೂ ವೇದಿಕೆ ಅಸ್ತಿತ್ವದಲ್ಲಿದ್ದು, ಸಮಾಜ ಮುಖಿ ಕೆಲಸ ಮಾಡಬೇಕು ಎಂದರು.

ಕೋಟಿ ಅವರ ವ್ಯಕ್ತಿತ್ವ ಘನವಾದದ್ದು. ಅವರ ಬಗ್ಗೆ ಅಪಾರ ಗೌರವವಿದೆ. ಇಂದು ನಾನು ಅಲ್ಪಸ್ವಲ್ಪ ವಿದ್ಯಾವಂತನಾಗಿದ್ದೇನೆ ಎಂದರೆ ಅದಕ್ಕೆ ಕೋಟಿ ಅವರ ಚಿಕ್ಕ ಸೋದರಿ ಅವರೇ ಕಾರಣ. ನಾನು ಅವರ ಬಳಿ ಮನೆ ಪಾಠಕ್ಕೆ ಹೋಗುತ್ತಿದ್ದೆ ಎಂದು ಸ್ಮರಿಸಿದರು.

ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಮಾಕತನಾಡಿ, ಮನುಷ್ಯರ ಹುಟ್ಟು ಆಕಸ್ಮಿಕ. ಆದರೆ, ಜೀವನವನ್ನು ಸಾರ್ಥಕ ಮಾಡಿ ಸಾಧನೆ ಮಾಡದರೆ ಸಾರ್ಥಕವಾಗಲಿದೆ ಎಂದರು.

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತನಿಖಾ ಪತ್ರಿಕೋದ್ಯಮ ಬಹಳ ಕಡಿಮೆಯಾಗಿದೆ. ಇಂದು ಸಮಾಜ ಮುಖಿ ಕೆಲಸ ಕೇವಲ ಮಾಧ್ಯಮಗಳಿಂದ ಮಾತ್ರ ಸಾಧ್ಯವಾಗದು. ಇವುಗಳೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

‘ಆಂದೋಲನ’ ದಿನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ ಮಾತನಾಡಿ, ಪತ್ರಿಕೋದ್ಯಮ ಉದ್ಯೋಗವಷ್ಟೇ ಅಲ್ಲ. ಸಮಾಜಕ್ಕೆ ಧ್ವನಿಯಾಗಿ ದೊಡ್ಡ ಜವಾಬ್ದಾರಿ ಹೊಂದಿದೆ. ಪ್ರತಿಕೋದ್ಯಮ ಸತ್ಯ, ನ್ಯಾಯ ಪರ ನಿಲ್ಲಬೇಕು. ಕೇವಲ ಸುದ್ದಿ ಪ್ರಕಟಿಸುವ ಮಾಧ್ಯಮವಾಗಬಾರದು. ಸಮಾಜ ಕನ್ನಡಿಯಾಗಬೇಕು ಎಂದು ಹೇಳಿದರು.

ಇಂದಿನ ಪತ್ರಿಕೋದ್ಯಮ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಮಾಹಿತಿ ಯುಗದಲ್ಲಿ ಕೆಲವೇ ಕ್ಷಣದಲ್ಲಿ ಸುದ್ದಿಗಳು ದೇಶದ ಮೂಲೆ ಮೂಲೆಗೆ ತಲುಪಲಿದೆ. ಇಂತಹ ತ್ವರಿತ ಪ್ರವಾಹದ ನಡುವೆ ಸತ್ಯಾತ್ಯತೆಗಳನ್ನು ಪರಿಷ್ಕರಿಸುವುದು ಮುಖ್ಯವಾಗಿದೆ. ದೃಶ್ಯ ಮಾಧ್ಯಮಗಳು ತಮ್ಮ ವಿಶ್ವಾರ್ಹತೆಗಳನ್ನು ಕಳೆದುಕೊಳ್ಳುತ್ತಿವೆ. ಇಂದಿಗೂ ಮುದ್ರಣ ಮಾಧ್ಯಮಗಳು ಜನರ ವಿಶ್ವಾರ್ಹತೆಯೊಂದಿಗೆ ಅಸ್ತಿತ್ವ ಉಳಿಸಿಕೊಂಡಿವೆ ಎಂದರು.

ತ್ವರಿತ ಸುದ್ದಿ ಪ್ರವಾಹದಲ್ಲಿ ಸ್ಪರ್ಧೆಯಲ್ಲಿ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಇವು ಜನರ ಭಾವನೆಗೆ ತೀವ್ರ ಪ್ರಭಾವ ಬೀರುತ್ತಿವೆ. ಇತ್ತೀಚೆಗೆ ನಡೆದ ಉದಯಗಿರಿಯ ಪ್ರಕರಣ ಇದಕ್ಕೆ ಸಾಕ್ಷಿ. ಸಾಮಾಜಿಕ ಜಾಲತಾಣಗಳಲ್ಲಿ ಕೋಮುಗಲಭೆ ಸೃಷ್ಟಿಸುವ ಸುದ್ದಿಗಳು ಹರಿದಾಡಿದವು. ಆದರೆ, ಪತ್ರಿಕೆಗಳು ಜವಾಬ್ದಾರಿಯುತವಾಗಿ ಘಟನೆಯ ವರದಿ ಪ್ರಕಟಿಸಿ ಕೋಮು ಗಲಭೆಯಾಗದಂತೆ ಕಾರ್ಯನಿರ್ವಹಿಸಿದವು ಎಂದು ಅವರು ಹೇಳಿದರು.

ಪತ್ರಕರ್ತ ಲೇಖನಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು ಹೊರತು ಮಾರಾಟ ವಸ್ತುವಾಗಿಸಬಾರದು. ಇಂದು ಮಾಧ್ಯಮ ಸಂಸ್ಥೆಗಳ ಮೇಲೆ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಪ್ರಭಾವವಿದೆ. ಆದರೆ, ಪತ್ರಿಕೋದ್ಯಮ ಜನ ಪಕ್ಷಿಯಾಗಿ ಇರಬೇಕು. ವ್ಯಕ್ತಿ ಅಥವಾ ಪಕ್ಷದ ಪ್ರಭಾವಕ್ಕೆ ಸಿಲುಕಬಾರದು ಎಂದು ಅವರು ಹೇಳಿದರು.

ಪತ್ರಕರ್ತರಾಗುವುದು ಸುಲಭದ ವಿಷಯವಲ್ಲ. ನಿಂದನೆ, ಬೆದರಿಕೆ, ತೀವ್ರವಾದ ಅವಮಾನವನ್ನು ಎದುರಿಸಬೇಕಾಗುತ್ತದೆ. ಅದು ಹಿಂದಿಗಿಂತಲೂ ಇಂದು ಹೆಚ್ಚಾಗಿದೆ. ಪತ್ರಕರ್ತ ಮೇಲಿನ ಹಲ್ಲೆ, ವರದಿಗಳ ಮೇಲೆ ನಡೆಯುತ್ತಿರುವ ಟ್ರೋಲ್‌ಗಳು, ನಕಲಿ ಪ್ರಕರಣಗಳು ಗಾಬರಿ ಹುಟ್ಟಿಸುತ್ತಿವೆ. ಪತ್ರಿಕೆ ಸ್ವಾತಂತ್ರ್ಯವನ್ನು ಹರಣ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಒಕ್ಕೊರಲಿನಿಂದ ಪ್ರತಿಭಟಿಸಬೇಕು ಎಂದರು.

ಪತ್ರಕರ್ತ ಜನರ ನಿಜವಾದ ಧ್ವನಿ. ಸತ್ಯವನ್ನು ಬೆಳಕಿಗೆ ತರುವ ಅವರ ಶ್ರಮ ಅನ್ಯನವಾದದ್ದು. ಹೀಗಾಗಿ ಪತ್ರಕರ್ತ ಸ್ವಾತಂತ್ರ್ಯ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಆಗಬೇಕು. ಸತ್ಯ, ನ್ಯಾಯ, ಜನತೆ ಹಕ್ಕುಗಳ ಪರವಾಗಿ ನಿಲ್ಲುವ ಪತ್ರಕರ್ತರ ಜೊತೆ ನಿಲ್ಲಬೇಕು. ಪತ್ರಕರ್ತರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ ಎಂದರು.

ಪ್ರಶಸ್ತಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾಷೆಯಲ್ಲಿ ಪಿಎಚ್.ಡಿ ಪದವಿ ಪಡೆದ ಕಾರಣ ನನ್ನನ್ನು ಇಂದು ಸನ್ಮಾನಿಸಿ ವಿದ್ಯೆಗೆ ಘನತೆ ಮತ್ತು ಅಭಿಮಾನವನ್ನು ತೋರಿದ್ದಾರೆ. ಪತ್ರಕರ್ತರೊಂದಿಗೆ ನನಗೆ ಸನ್ಮಾನವಾಗಿದ್ದು, ಸಂತಸ ತಂದಿದೆ ಎಂದರು.

ಮೈಸೂರಿನಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ರಾಜಶೇಖರ್ ಕೋಟಿ ಅವರ ಬಗ್ಗೆ ಯಾರನ್ನೆ ಮಾತನಾಡಿಸಿದರು ಒಳ್ಳೆಯ ಅಭಿಮಾನದ ನುಡಿಗಳನ್ನೆ ಹಾಡುತ್ತಾರೆ. ಅವರ ವ್ಯಕ್ತಿತ್ವ ಹೆಸರಿನಲ್ಲಿರುವ ಕೋಟಿ ಅಂತೆ ಬೆಳೆಬಾಳುವಂತದ್ದು. ಅವರ ಆದರ್ಶಗಳು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ ಮಾತನಾಡಿ, ಯುವ ಸಮೂಹವನ್ನು ಒಳ್ಳೆಯ ದಾರಿಯೆಡೆಗೆ ಕಂಡ್ಯೊಯುವ ಜವಾಬ್ದಾರಿ ಪತ್ರಿಕೋದ್ಯಮದ ಮೇಲೆ ಇದೆ. ಆದರೆ, ಇಂದು ಪತ್ರಿಕೋದ್ಯಮದ ಆಯಾಮ ಬದಲಾವಣೆ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳ ಸತ್ಯಾತ್ಯತೆಗಳನ್ನು ಪರಿಷ್ಕರಣೆ ಮಾಡಬೇಕಿದೆ. ದೇಶದ ಪ್ರಗತಿಗೆ ಪೂರಕವಾದ ವರದಿಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳನ್ನು ಸರಿದಾರಿಗೆ ಕರೆದ್ಯೊಯಬೇಕು ಕೆಲಸ ಪತ್ರಿಕೋದ್ಯಮ ಮಾಡಬೇಕು ಎಂದರು.

ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಕೆ. ನರಸಿಂಹಮೂರ್ತಿ, ಸಮಾಜ ಕಾರ್ಯವಿಭಾಗದ ಪ್ರಾಧ್ಯಾಪಕಿ ಡಾ.ಎಚ್‌.ಪಿ. ಜ್ಯೋತಿ ಮಾತನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ಎಸ್.ಸಪ್ನಾ, ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯ ಅಧ್ಯಕ್ಷ ಆರ್.ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ಎಸ್.ವಿನೋದ್, ಖಜಾಂಚಿ ಕೆ.ಗಣೇಶ್‌, ಚೆಲುವಾಂಬಿಕೆ, ಡಾ,ಗಿರೀಶ್‌, ಹರೀಶ್‌ ಮೊದಲಾದವರು ಇದ್ದರು. ಡಾ. ಬಿ.ಎಸ್.ದಿನಮಣಿ ಸ್ವಾಗತಿಸಿದರು. ಮಂಜುನಾಥ್‌ ಸುಬೇದಾರ್‌ ನಿರೂಪಿಸಿ, ವಂದಿಸಿದರು. ಅಮ್ಮ ರಾಮಚಂದ್ರ ಗೀತಗಾಯನ ನಡೆಸಿಕೊಟ್ಟರು.