ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮ್ಯಾನೇಜ್ ಮೆಂಟ್ ಅಸೋಸಿಯೇಶನ್ (ಎಂಎಂಎ) ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರ ರತ್ನ ಡಾ। ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ‘ಎಂಎಂಎ- ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ-2025’ ಪ್ರಶಸ್ತಿ ನೀಡಲಾಯಿತು.ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ। ಎಂ.ಮೋಹನ ಆಳ್ವ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ರಾಜೇಂದ್ರ ಕುಮಾರ್ ಸಹಕಾರಿ ಸಂಸ್ಥೆಯನ್ನು ದೇಶದಲ್ಲೇ ನಂ.1 ಸ್ಥಾನಕ್ಕೆ ಕೊಂಡೊಯ್ದದ್ದು ಮಹತ್ತರ ಸಾಧನೆ. ಅಜಾತಶತ್ರುವಾಗಿ ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರಿಗೆ ಪ್ರಶಸ್ತಿ ನೀಡುವ ಮೂಲಕ ಎಂಎಂಎ ಸಂಸ್ಥೆಯ ಗೌರವ ಇನ್ನಷ್ಟು ಹೆಚ್ಚಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ರಾಜೇಂದ್ರ ಕುಮಾರ್, ದೇಶ- ವಿದೇಶಗಳ ಅನೇಕ ಸನ್ಮಾನ, ಪ್ರಶಸ್ತಿಗಳನ್ನು ನಾನು ಸ್ವೀಕರಿಸಿದ್ದೇನೆ. ಮಂಗಳೂರು ಮ್ಯಾನೆಜ್‌ಮೆಂಟ್ ಎಸೋಸಿಯೇಶನ್ ನೀಡಿದ ಸನ್ಮಾನ ತಾಯ್ನಾಡಿನ ಗೌರವವಾಗಿದೆ. ನಾನು ಬಹಳ ಕಲಿತವನಲ್ಲ. ಆದರೂ ಸಿಎಗಿಂತ ಉತ್ತಮವಾಗಿ ಬ್ಯಾಲೆನ್ಸ್‌ಶೀಟ್ ನಿರ್ವಹಣೆ ಮಾಡಬಲ್ಲೆ, ಅದರಲ್ಲಿರುವ ತಪ್ಪುಗಳನ್ನು ಹುಡುಕಬಲ್ಲೆ. ನವೋದಯ ಸ್ವ-ಸಹಾಯ ಸಂಘ ಸ್ಥಾಪಿಸಿ ಮಹಿಳೆಯರ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟ ತೃಪ್ತಿ ಇದೆ ಎಂದರು.ಅಸೋಸಿಯೇಶನ್ ಅಧ್ಯಕ್ಷ ಎಡ್ವರ್ಡ್ ಜೆ.ಕೊಯೆಲ್ಹೊ, ಉಪಾಧ್ಯಕ್ಷ ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಡಾ। ರಮ್ಯಾ ಶೆಟ್ಟಿ, ಡಾ। ಅರುಣ್ ಕುಮಾರ್ ಶೆಟ್ಟಿ, ಡಾ। ಪ್ರಮೀಳಾ ಶೆಟ್ಟಿ ಇದ್ದರು. ಮಾಜಿ ಅಧ್ಯಕ್ಷ ಕೆ.ಜಯರಾಜ್ ಬಿ.ರೈ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು.ಅಸೋಸಿಯೇಶನ್ ಅಧ್ಯಕ್ಷ ಎಡ್ವರ್ಡ್ ಜೆ.ಕೊಯೆಲ್ಹೊ ಮಾತನಾಡಿ, 1979ರಲ್ಲಿ ಕರ್ಣಾಟಕ ಬ್ಯಾಂಕ್‌ನ ಆಗಿನ ಅಧ್ಯಕ್ಷ ದಿ.ಕೆ.ಎನ್.ಬಾಸ್ರಿ ಅವರು ಎಂಎಂಎ ಸಂಘಟನೆ ಆರಂಭಿಸಿದ್ದು, ಪ್ರಸ್ತುತ 600ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. 1982-84ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ದಿ.ಕೆ.ಸವಿಶ್ವನಾಥ ಕಾಮತ್ ಅವರ ಹೆಸರಿನಲ್ಲಿ 1997ರಿಂದ ಈ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ ಆರಂಭಿಸಲಾಯಿತು ಎಂದು ತಿಳಿಸಿದರು.