ರಾಜೀವ್ ಗಾಂಧಿ ಯುವಕರಿಗೆ ಸ್ಫೂರ್ತಿ, ಅರಸು ನಾಡಿನ ಕಣ್ಮಣಿ: ಎನ್.ರಮೇಶ್

| Published : Aug 22 2024, 01:02 AM IST

ರಾಜೀವ್ ಗಾಂಧಿ ಯುವಕರಿಗೆ ಸ್ಫೂರ್ತಿ, ಅರಸು ನಾಡಿನ ಕಣ್ಮಣಿ: ಎನ್.ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದೇವರಾಜು ಅರಸ್‍ರವರ ಜನ್ಮ ದಿನಾಚರಣೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜೀವ್ ಗಾಂಧಿಯವರು ಕಂಪ್ಯೂಟರ್, ಟೆಲಿಫೋನ್, ಕ್ರಾಂತಿಯ ಜೊತೆಗೆ ಯುವಕರಿಗೆ ಸ್ಫೂರ್ತಿ ನೀಡಿದರೆ, ದೇವರಾಜು ಅರಸ್ ಅವರು ಕನ್ನಡ ನಾಡಿನ ಕಣ್ಮಣಿ ಆಗಿದ್ದವರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದೇವರಾಜು ಅರಸುರವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿ, ಭಾರತಕ್ಕೆ ಆಧುನಿಕ ಸ್ಪರ್ಶ ನೀಡಿದವರು, ರಾಜೀವ್ ಗಾಂಧಿಯವರು. 21ನೇಯ ಶತಮಾನವನ್ನು ಸದೃಢ ಭಾರತದತ್ತ ಕೊಂಡೊಯ್ದರು ಎಂದರು.

ವಿಧಾನ ಪರಿಷತ್ ಸದಸ್ಯೆ ಬಿಲ್ಕೀಷ್‍ಬಾನು ಮಾತನಾಡಿ, ದೇವರಾಜು ಅರುಸು ಅವರು ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪರಿಪೂರ್ಣ ವಾಗಿ ಜಾರಿಗೆ ತಂದವರು. ಅದರಲ್ಲೂ ಜೀತ ಪದ್ಧತಿ ಮತ್ತು ಮಲಹೊರುವ ಪದ್ಧತಿಯನ್ನು ನಿಷೇದಿಸಿದವರು, ಧಮನಿತರ ಧ್ವನಿಯಾಗಿದ್ದವರು ಎಂದರು.

ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಬಿಜೆಪಿಯವರ ಹಗರಣಗಳು ಸಾಕಷ್ಟಿವೆ. ಮುಂದಿನ ದಿನದಲ್ಲಿ ಈ ಹಗರಣಗಳ ಮೆರವಣಿಗೆ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ದೇವರಾಜು ಅರಸು ಅವರು ಉತ್ತಮ ರಾಜಕಾರಣಿಯಾಗಿದ್ದವರು, ಸಣ್ಣ ಸಣ್ಣ ಜಾತಿಗಳಿಗೆ ಗೌರವ ನೀಡಿದರು. ದಿ.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅಂತಹವರು ಸಹ ಅರಸು ಅವರ ಗರಡಿಯಲ್ಲಿಯೇ ಬೆಳೆದು ಬಂದವರು, ಭೂ ಸುಧಾರಣೆ ಕಾಯ್ದೆಗೆ ಹೆಚ್ಚು ಹೊತ್ತು ಕೊಟ್ಟವರು, ಬಡವರ ಪರವಾಗಿಯೇ ಇದ್ದವರು. ಈಗ ಸಿದ್ದರಾಮಯ್ಯವರು ಕೂಡ ಅರಸು ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಇಕ್ಕೇರಿ ರಮೇಶ್, ಎನ್. ಉಮಾಪತಿ, ಎಸ್.ಟಿ.ಹಾಲಪ್ಪ, ಮುಂತಾದವರು ಮಾತನಾಡಿದರು.

ಸಿ.ಎಚ್.ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್, ಶರತ್ ಮರಿಯಪ್ಪ, ಎಸ್.ಪಿ.ಶೇಷಾದ್ರಿ, ಎಂ.ಎಸ್.ಸಿದ್ದಪ್ಪ, ಯು.ಶಿವಾನಂದ್, ಮೋಹನ್, ನಾಜೀಮಾ, ಸ್ಟೇಲಾ ಮಾರ್ಟಿನ್, ನಯಾಜ್ ಅಹಮ್ಮದ್‍ಖಾನ್, ಶಿ.ಜು.ಪಾಶಾ, ಪದ್ಮನಾಭ್, ಶಿವಣ್ಣ, ಗಂಗಾಧರ್, ಚಿನ್ನಪ್ಪ ಸೇರಿದಂತೆ ಹಲವರಿದ್ದರು.

‘ನಾಗರೀಕ ಸೇವೆಗಳಿಗೆ ನೇರ ನೇಮಕಾತಿ ಸಲ್ಲ’

ನಾಗರೀಕ ಸೇವೆಗಳಿಗೆ ಲ್ಯಾಟರರ್ ಎಂಟ್ರಿ ಮೂಲಕ ನೇಮಕ ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರ ಖಂಡನೀಯ. ನಾಗರೀಕ ಸೇವೆಗಳಿಗೆ ಕೇಂದ್ರ ಸರ್ಕಾರ ಖಾಸಗಿ ವಲಯದ ವ್ಯಕ್ತಿಗಳನ್ನು ನೇರ ನೇಮಕ ಮಾಡಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಇದು ಪರಿಶಿಷ್ಟ ವರ್ಗಕ್ಕೆ ಮತ್ತು ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಂತಾಗುತ್ತದೆ ಅಲ್ಲದೇ, ಆರ್‌ಎಸ್‍ಎಸ್ ಕಚೇರಿ ಮೂಲಕ ನೇಮಕ ಮಾಡಿಕೊಳ್ಳುವ ಹುನ್ನಾರ ಅಡಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ದೂರಿದರು.