ಬ್ಯಾನರ್ ವಿಚಾರವಾಗಿ ಪೌರಾಯುಕ್ತರೊಂದಿಗೆ ರಾಜೀವ್‌ಗೌಡ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ, ಅಧಿಕಾರಿಗಳ ವಿರುದ್ಧ ಈ ರೀತಿ ವರ್ತನೆ ಮಾಡಬಾರದು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಶಿಡ್ಲಘಟ್ಟದಲ್ಲಿ ಬ್ಯಾನರ್ ವಿಚಾರವಾಗಿ ಪೌರಾಯುಕ್ತರನ್ನು ಮತ್ತು ಅಲ್ಲಿನ ಶಾಸಕರನ್ನು ಕೀಳು ಮಟ್ಟದಲ್ಲಿ ಮಾತನಾಡಿರುವ ಮುಖಂಡ ರಾಜೀವ್ ಗೌಡರ ವರ್ತನೆ ಸರಿಯಲ್ಲ, ಈ ರೀತಿಯ ವರ್ತನೆ ಮಾಡಬಾರದಾಗಿತ್ತೆಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ಪ್ರತಿಕ್ರಿಯಿಸಿದರು.

ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯದಲ್ಲಿ ಕನಿಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಭೂಮಿಯನ್ನು ನೀಡಿರುವ ರೈತರಿಗೆ ಪರಿಹಾರದ ಚೆಕ್ಕುಗಳನ್ನು ವಿತರಿಸಿದ ಮಾತನಾಡಿ, ಇಂದು 81 ಕೋಟಿ ರು.ಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆಗೊಂಡಿದ್ದು ರೈತರಿಗೆ ಸರ್ಕಾರವು ಸದಾ ಸ್ಪಂದಿಸುತ್ತಿದ್ದು, ಸರ್ಕಾರದ ಉದ್ದೇಶ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶಗಳು ಮೂಲಭೂತ ಸೌಲಭ್ಯಗಳು ಕಲ್ಪಿಸುವ ನಿಟ್ಟಿನಲ್ಲಿ ರೈತರಿಂದ ಭೂಮಿಯನ್ನು ಪಡೆದುಕೊಳ್ಳುತ್ತಿದ್ದು, ಪರಿಹಾರವನ್ನು ನೀಡಲು ಅಧಿಕಾರಿಗಳು ಕೂಡ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು

ಬ್ಯಾನರ್ ವಿಚಾರವಾಗಿ ಪೌರಾಯುಕ್ತರೊಂದಿಗೆ ರಾಜೀವ್‌ಗೌಡ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ, ಅಧಿಕಾರಿಗಳ ವಿರುದ್ಧ ಈ ರೀತಿ ವರ್ತನೆ ಮಾಡಬಾರದು, ಅಧಿಕಾರಿಗಳು ಕಾನೂನು ರೀತಿ ಕ್ರಮ ತೆಗೆದುಕೊಳ್ಳುವುದರಲ್ಲಿ ಮತ್ತು ಕಾನೂನು ಚೌಕಟ್ಟಿನಲ್ಲಿ ಅಧಿಕಾರಿಗಳಿಗೆ ನ್ಯಾಯ ದೊರಕಿಸಬೇಕಾಗಿದೆಯೆಂದರು. ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು, ದಬ್ಬಾಳಿಕೆ ಮಾಡುವಂತಹುದು ಸರಿಯಲ್ಲ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು, ದಾಖಲಾಗಿರುವ ಎಫ್‌ಐಆರ್ ನಂತೆ ಅವರ ಮೇಲೆ ಕ್ರಮ ಜರುಗಿಸಬೇಕು, ಕಾಂಗ್ರೇಸ್ ಪಕ್ಷದ ಅಧ್ಯಕ್ಷರು ಈ ವಿಚಾರವಾಗಿ ಮಾತನಾಡಿದ್ದು ಈಗಾಗಲೇ ಈ ವಿಚಾರವಾಗಿ ನೋಟಿಸ್ ನೀಡಿದ್ದು ಏಕಾಏಕೀ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ತನಿಖೆ ಮಾಡಿ ನಂತರ ಕ್ರಮ ಕೈಗೊಳ್ಳಲಾಗುವುದೆಂದರು.

ಇಂತಹ ವಿಚಾರಗಳಿಂದ ನೋವಾಗಿದೆ, ನಾನಂತು ಜಿಲ್ಲಾ ಮಂತ್ರಿಯಾಗಿ ಅಧಿಕಾರಿಗಳ ಆತ್ಮ ಸ್ಥೈರ್ಯ ಕುಗ್ಗುವಂತಹ ಕೆಲಸ ಮಾಡುವುದಿಲ್ಲ. ಅವರ ರಕ್ಷಣೆ, ಅವರ ಕೆಲಸಗಳಿಗೆ ಅಡ್ಡಿ ಪಡಿಸುವುದಿಲ್ಲವೆಂದು ಅಧಿಕಾರಿಗಳ ಸಂರಕ್ಷಣೆ ಮಾಡುವುದು ನನ್ನ ಧ್ಯೇಯ. ಸಾರ್ವಜನಿಕರಿಗೆ ಕೆಲಸ ಮಾಡಿಕೊಡದ ಸಂದರ್ಭದಲ್ಲಿ ಕಾನೂನು ರೀತ್ಯಾ ಕ್ರಮಗಳ ಮೂಲಕ ಅವರಿಗೆ ಕೆಲಸ ನಿರ್ವಹಿಸುವಂತೆ ತಾಕೀತು ಮಾಡಬಹುದಾಗಿದೆ. ಅದನ್ನು ಬಿಟ್ಟು ಇಂತಹ ಮಾತುಗಳನ್ನಾಡುವುದು ಸರಿಯಲ್ಲವೆಂದರು. ವೈಯುಕ್ತಿಕವಾಗಿ ನಾನು ಅದನ್ನು ಟೀಕಿಸುತ್ತೇನೆ.

ಸಾರ್ವಜನಿಕ ಜೀವನದಲ್ಲಿದ್ದಾಗ ಸಹಜವಾಗಿ ಕೆಲವರು ನಮ್ಮ ಪರವಾಗಿ ಮಾತನಾಡುತ್ತಾರೆ ಮತ್ತು ಕೆಲವರು ನಮ್ಮ ವಿರುದ್ಧವಾಗಿ ಮಾತನಾಡುತ್ತಾರೆ, ಶಿಡ್ಲಘಟ್ಟ ಶಾಸಕರ ಮೇಲೆ ನೇರವಾಗಿ ಕೆಟ್ಟಪದಗಳನ್ನು ಬಳಸಿರುವುದು ಸರಿಯಲ್ಲ, ಅದು ನಾಗರಿಕ ಸಮಾಜ ಒಪ್ಪುವಂತಹದಲ್ಲ, ಅಧಿಕಾರಿಗಳ ಮುಂದೆ ಚುನಾಯಿತ ಪ್ರತಿನಿಧಿಗಳ ವಿರುದ್ಧ ಮಾತನಾಡುವುದು ಸರಿಯಲ್ಲ ಅದು ಸಲ್ಲುವಂತಹ ವಿಚಾರವಲ್ಲವೆಂದರು.

ರಾಜಕೀಯದಲ್ಲಿ ಬೆಳೆಯಬೇಕೆಂಬ ನಿಟ್ಟಿನಲ್ಲಿರುವವರಿಗೆ ಸಾರ್ವಜನಿಕವಾಗಿ ಯಾವ ರೀತಿ ಮಾತನಾಡಬೇಕೆಂಬುದನ್ನು ಕಲಿಯಬೇಕು. ಸಾರ್ವಜನಿಕರಲ್ಲಿ ಒಮ್ಮೆ ತಮ್ಮ ವ್ಯಕ್ತಿತ್ವದಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದರೆ ರಾಜಕೀಯವಾಗಿ ಬೆಳೆಯುವುದು ಕಷ್ಟಕರವಾಗುತ್ತದೆ. ನಾವು ಮಾತನಾಡುವಾಗ ಮಾತುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮಾತನಾಡಬೇಕು. ರಾಜಕಾರಣದಲ್ಲಿ ಸೋಲು-ಗೆಲುವು ಸಹಜವಾಗಿದ್ದು ಎರಡನ್ನು ಒಂದೇ ನಿಟ್ಟಿನಲ್ಲಿ ನೋಡಬೇಕಾಗಿದೆ. ಸೋತಾಗ ವಿಚಲಿತರಾಗಬಾರದು, ಆತ್ಮಸ್ಥೈರ್ಯ ತಾಳ್ಮೆಯನ್ನು ಕಳೆದುಕೊಳ್ಳಬಾರದು ಸಮಯಕ್ಕಾಗಿ ಕಾಯಬೇಕು, ಜನರ ವಿಶ್ವಾಸ ಗಳಿಸಬೇಕು ಆಗ ಮತ್ತೆ ನಾವು ಅಧಿಕಾರದ ಗದ್ದುಗೆಯೇರಬಹುದಾಗಿದೆ ಎಂದರು.