ರಾಜೀವ್ ತಾರಾನಾಥ್ ಜೀವನವೇ ಒಂದು ಕೌತುಕ

| Published : Jun 17 2024, 01:32 AM IST

ಸಾರಾಂಶ

ಸಂಗೀತ ಕ್ಷೇತ್ರದ ದಿಗ್ಗಜ ಸರೋದ್ ವಾದಕ ಪ್ರೊ. ರಾಜೀವ್ ತಾರಾನಾಥ್ ಬೆಳೆದು ಬಂದ ಹಾದಿಯೇ ಒಂದು ಕೌತುಕ ಎಂದು ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ. ಹನುಮಂತು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂಗೀತ ಕ್ಷೇತ್ರದ ದಿಗ್ಗಜ ಸರೋದ್ ವಾದಕ ಪ್ರೊ. ರಾಜೀವ್ ತಾರಾನಾಥ್ ಬೆಳೆದು ಬಂದ ಹಾದಿಯೇ ಒಂದು ಕೌತುಕ ಎಂದು ಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ. ಹನುಮಂತು ಹೇಳಿದರು. ನಗರದಲ್ಲಿರುವ ರೆಡ್‌ಕ್ರಾಸ್ ಭವನದಲ್ಲಿ ಅಸೋಸಿಯೇಷನ್ ಆಫ್ ಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಆಯೋಜಿಸಿದ್ದ ಸರೋದ್ ವಾದಕ ಪ್ರೊ.ರಾಜೀವ್ ತಾರಾನಾಥ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸಿನಿಮಾ ಸಂಗೀತ ಕ್ಷೇತ್ರದಲ್ಲೂ ಇವರು ಸಾಕಷ್ಟು ಕೃಷಿ ಮಾಡಿದ್ದು, ಕನ್ನಡ ಸಿನಿಮಾಗಳಾದ ಸಂಸ್ಕಾರ, ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ, ಅನುರೂಪ, ಪೇಪರ್ ಬೋಟ್ಸ್, ಶೃಂಗಾರ ಮಾಸ, ಆಗಂತುಕ ಮತ್ತು ಮಲಯಾಳಂನಲ್ಲಿ ಕಡವು, ಪೊಕ್ಕುವೇಯಿಲ್, ಕಾಂಚನಸೀತೆ ಸಿನಿಮಾಗಳಲ್ಲಿ ಸಂಗೀತ ನಿರ್ದೇಶಿಸಿ, ಪುರಸ್ಕಾರಗಳನ್ನು ಪಡೆದು ಮಾರ್ಗದರ್ಶಕರಾಗಿದ್ದರು ಎಂದು ನುಡಿದರು. ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ವಿಶ್ವಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರಾಗಿದ್ದ ರಾಜೀವ್ ತಾರಾನಾಥ್ ೧೯೩೨ರ ಅಕ್ಟೋಬರ್ ೧೭ರಂದು ಜನಿಸಿದ್ದರು. ಮೈಸೂರಿನಲ್ಲಿ ವಾಸವಿದ್ದರು. ಇವರ ಸರೋದ್ ವಾದನಕ್ಕೆ ಪ್ರಪಂಚದಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ, ಇವರ ನಿಧನದಿಂದ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸ್ಮರಿಸಿದರು. ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ. ಡೇವಿಡ್, ಸಂಗೀತ ಮಾಂತ್ರಿಕ ರಾಜೀವ್ ತಾರಾನಾಥ್ ೯ನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಛೇರಿ ನೀಡಿದ ಅವರು, ಕೊಲ್ಕತಾದ ಪಂಡಿತ್ ಅಲಿ ಅಕ್ಬರ್ ಖಾನ್ ಅವರಿಂದಾಗಿ ಸರೋದ್ ವಾದನದತ್ತ ಆಕರ್ಷಿತರಾದರು. ಅಕ್ಬರ್‌ಖಾನ್ ಅವರ ಶಿಷ್ಯರಾಗಿ ಶಿಕ್ಷಣ ಪಡೆದ ಅವರು ಖ್ಯಾತ ಸರೋದ್ ವಾದಕರಾಗಿ ದೇಶ-ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ ಹೆಸರು ಗಳಿಸಿದವರು ಎಂದು ಹೇಳಿದರು.೨೦೨೩ರಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ವೇಳೆ ಅರಮನೆ ಅಂಗಳದಲ್ಲಿ ಕಾರ್ಯಕ್ರಮ ನೀಡಿ ಸರೋದ್ ವಾದನದಲ್ಲಿ ನಾದಮೇಳದ ಮೋಡಿಯನ್ನೇ ಮಾಡಿದರು. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ (೧೯೯೩), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೬), ಕರ್ನಾಟಕ ಸರ್ಕಾರದ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ (೧೯೯೮) ಮತ್ತು ಗಾಯನ ಸಮಾಜದ ಸಂಗೀತ ಕಲಾರತ್ನ ಜ್ಯೋತಿ ಸುಬ್ರಮಣ್ಯ ಪ್ರಶಸ್ತಿಗೆ ಇವರು ಭಾಜನರಾಗಿದ್ದರು ಎಂದು ಸ್ಮರಿಸಿದರು.ಈ ವೇಳೆ ವಿಕಸನ ಸಂಸ್ಥೆ, ಮಹೇಶ್‌ಚಂದ್ರಗುರು ಕಾರಸವಾಡಿ ಮಹದೇವ್, ಡ್ಯಾಪೋಡಿಲ್ಸ್ ಸಂಸ್ಥೆಯ ಸುಜಾತ ಕೃಷ್ಣ, ರಂಗಸ್ವಾಮಿ, ಉಪನ್ಯಾಸಕ ಮುತ್ತೇಗೆರೆ ಮಂಜು, ಲೋಕೇಶ್, ಕೀಲಾರ ಕೃಷ್ಣೆಗೌಡ, ಕೆಂಪರಾಜು ಮತ್ತಿತರರು ಇದ್ದರು.