ಜಲಾಶಯದಿಂದ ನೀರು ಪೂರೈಕೆಗೆ ರಾಜೂಗೌಡ ಆಗ್ರಹ

| Published : Mar 14 2024, 02:04 AM IST

ಸಾರಾಂಶ

ಸುರಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನದಿ ಹಾಗೂ ಹಳ್ಳ-ಕೊಳ್ಳಗಳು ಬತ್ತಿ ಹೋಗಿದ್ದು, ತಕ್ಷಣ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಮಾಜಿ ಸಚಿವ ರಾಜೂಗೌಡ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಸುರಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನದಿ ಹಾಗೂ ಹಳ್ಳ-ಕೊಳ್ಳಗಳು ಬತ್ತಿ ಹೋಗಿದ್ದು, ತಕ್ಷಣ ನಾರಾಯಣಪೂರ ಜಲಾಶಯದಿಂದ ನದಿ ಹಾಗೂ ಹಳ್ಳಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೃಷ್ಣಾ ಭಾಗ್ಯ ಜಲನಿಗಮದ ನಾರಾಯಣಪೂರ ಬಸವಸಾಗರ ಜಲಾಶಯದ ಕೃಷ್ಣಾ ನದಿಯ ಪಾತ್ರದಲ್ಲಿ ಮತ್ತು ಎಡದಂಡೆ ಕಾಲುವೆ ಗೇಟ್‌ಗಳ ಮುಖಾಂತರ ಸುರಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆ ಇಲ್ಲದೆ ನದಿ ಮತ್ತು ಹಳ್ಳಿಗಳು ಬತ್ತಿ ಹೋದ ಕಾರಣ ಸುರಪುರ ನಗರಕ್ಕೆ ಮತ್ತು ಹಳ್ಳಕ್ಕೆ ಹೊಂದಿಕೊಂಡಿರುವ ಕೆಲವು ಗ್ರಾಮಗಳಿಗೆ ಮತ್ತು ದನ-ಕರುಗಳು ಮತ್ತು ಕುರಿಮರಿಗಳಿಗೆ ಕುಡಿಯುವ ನೀರಿನ ದೊಡ್ಡ ಸಮಸ್ಯೆ ಉದ್ಭವವಾಗಿದೆ ಎಂದು ವಿವರಿಸಿದರು.

ಸುರಪುರ ನಗರಕ್ಕೆ ಹಾಗೂ ಗ್ರಾಮಗಳ ಮತ್ತು ದನ-ಕರುಗಳಿಗೆ ಕುಡಿವ ನೀರಿನ ಅವಶ್ಯಕತೆ ಇರುವುದರಿಂದ ನಾರಾಯಣಪೂರ ಜಲಾಶಯದ ಕೃಷ್ಣಾ ನದಿಯ ಗೇಟ್ ಮುಖಾಂತರ ಕೃಷ್ಣಾ ನದಿಗೆ ಹಾಗೂ ಎಡದಂಡೆ ಕಾಲುವೆಯ ಎಸ್ಕೆಪ್ ಗೇಟ್‌ಗಳ ಮುಖಾಂತರ ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ನದಿಗೆ ಮತ್ತು ಹಳ್ಳಗಳಿಗೆ ನೀರು ಬಿಟ್ಟು, ಸುರಪುರ ನಗರಕ್ಕೆ ಮತ್ತು ಗ್ರಾಮಗಳ ಪಕ್ಕದ ಹಳ್ಳಗಳಿಗೆ ನೀರು ಹರಿಸಲು ಸಂಬಂಧಪಟ್ಟ ಜಲಾಶಯದ ಅಧಿಕಾರಿಗಳಿಗೆ ಆದೇಶ ಮಾಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಯಲ್ಲಪ್ಪ ಕುರಕುಂದಿ, ಎಚ್.ಸಿ. ಪಾಟೀಲ್ ಇದ್ದರು.