ಸಾರಾಂಶ
- ವೀರಶೈವ ಲಿಂಗಾಯತ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
- ಗುಂಡ್ಲುಪೇಟೆ ಶಾಸಕ ಎಚ್.ಎಂ ಗಣೇಶ್ ಪ್ರಸಾದ್ ವಿಷಾದಫೋಟೋ- 14ಎಂವೈಎಸ್ 2- ಮೈಸೂ ರಿನ ರಾಜೇಂದ್ರ ಭವನದಲ್ಲಿ ಭಾನುವಾರ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ಪ್ರಸಾದ್, ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಆಲೂರು ಬಸವರಾಜ್, ಎಂ.ಕೆ. ಸ್ವಾಮಿ, ಪಿ. ಪ್ರಭುಸ್ವಾಮಿ, ಡಾ.ಡಿ.ಎಸ್. ಗುರು, ಶಿವಮೂರ್ತಿ ಕಾನ್ಯ ಇದ್ದಾರೆ.
--ಕನ್ನಡಪ್ರಭ ವಾರ್ತೆ ಮೈಸೂರು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಸಮಾಜದ ನಾಲ್ವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ನಮ್ಮವರನ್ನು ನಮ್ಮ ಸಮಾಜದವರೇ ಸೋಲಿಸಿದರು ಎಂದು ಗುಂಡ್ಲುಪೇಟೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ವಿಷಾದಿಸಿದರು.ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕವು ನಗರದ ರಾಜೇಂದ್ರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ, ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ- ಲಿಂಗಾಯತರು ಒಗ್ಗಟ್ಟಾಗದಿದ್ದರೆ ನಮ್ಮ ಧ್ವನಿಗೆ ಬೆಲೆ ಇರುವುದಿಲ್ಲ. ದಾವಣಗೆರೆಯಲ್ಲಿ ನಡೆದ ಸಮಾಜದ ಸಮಾವೇಶದಲ್ಲಿ ನಿರೀಕ್ಷಿಸಿದಷ್ಟು ಜನ ಬರಲಿಲ್ಲ. ಇನ್ನು ಗುಂಡ್ಲುಪೇಟೆಯಲ್ಲಿ ನಮ್ಮ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಜನ ಸೇರಲಿಲ್ಲ. ಆದರೆ, ಕನಕದಾಸ ಅಥವಾ ವಾಲ್ಮೀಕಿ ಜಯಂತಿಗೆ ಆ ಸಮಾಜಗಳ ಸಾವಿರಾರು ಮಂದಿ ಸೇರುತ್ತಾರೆ ಎಂದರು.ನಮ್ಮ ಸರ್ಕಾರ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿಲ್ಲ. ಸಮಾಜದ ಅಧಿಕಾರಿಗಳು ಹಾಗೂ ನೌಕರರು ಈಗ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಆದರೆ, ಅದಕ್ಕೆ ಹಲವು ಕಾರಣಗಳಿವೆ. ನಮ್ಮ ಸಮಾಜದ ಕೆಲವು ಅಧಿಕಾರಿಗಳಿಗೆ ನಾನೇ ಮೈಸೂರು, ಚಾಮರಾಜನಗರಕ್ಕೆ ವರ್ಗಾವಣೆ ಮಾಡಿಸಿಕೊಟ್ಟಿದ್ದೇನೆ. ನಮ್ಮ ಸರ್ಕಾರದಲ್ಲಿ ಯಾರನ್ನೂ ಗುರಿಪಡಿಸುವ ಕೆಲಸವನ್ನೇನೂ ಮಾಡುತ್ತಿಲ್ಲ ಎಂದು ಅವರು ಹೇಳಿದರು.
ನನ್ನ ತಂದೆ ಎಚ್.ಎಸ್. ಮಹದೇವಪ್ರಸಾದ್ ಅಕಾಲಿಕ ನಿಧನರಾದಾಗ, ನನ್ನ ತಾಯಿಗೇ ಟಿಕೆಟ್ ದೊರಕಿತು. ಸಿದ್ದರಾಮಯ್ಯ ಅವರು ನನ್ನ ತಾಯಿಯನ್ನೇ ಸಚಿವೆಯನ್ನಾಗಿಯೂ ಮಾಡಿದರು. ನಂತರ, ನನಗೆ ಟಿಕೆಟ್ ಕೊಡಿಸಿದರು. ರಾಜಕಾರಣಿಗಳಾದ ನಾವು ಒಂದು ಸಮಾಜದಿಂದ ಮುಂದೆ ಬರುವುದಕ್ಕೆ ಆಗುವುದಿಲ್ಲ. ಎಲ್ಲರ ಸಹಕಾರವೂ ಬೇಕಾಗುತ್ತದೆ ಎಂದು ಅವರು ತಿಳಿಸಿದರು.ಒಪಿಎಸ್ (ಹಳೆಯ ಪಿಂಚಣಿ ವ್ಯವಸ್ಥೆ) ಮರು ಜಾರಿಗೆ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಎನ್.ಪಿ.ಎಸ್ ನಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಮುಖ್ಯಮಂತ್ರಿಯೂ ಆ ಭರವಸೆಯನ್ನು ನೀಡಿದ್ದಾರೆ. ಸಮಯ ಬೇಕಾಗಬಹುದು. ಆದರೆ, ಒಪಿಎಸ್ ತರಲು ಬದ್ಧವಾಗಿದ್ದೇವೆ ಎಂದರು.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತ ನೌಕರರು, ವಿವಿಧ ಕ್ಷೇತ್ರದ ಸಾಧಕರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಆಲೂರು ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎಂ.ಕೆ. ಸ್ವಾಮಿ, ಪ್ರಧಾನ ಕಾರ್ಯದರ್ಶಿ ಪಿ. ಪ್ರಭುಸ್ವಾಮಿ, ಮಾನಸಗಂಗೋತ್ರಿಯ ಪ್ರಾಧ್ಯಾಪಕ ಡಿ.ಎಸ್. ಗುರು, ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಘಟಕದ ಅಧ್ಯಕ್ಷ ಶಿವಮೂರ್ತಿ ಕಾನ್ಯ ಇದ್ದರು.