ದಾವಣಗೆರೆ ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ ಮರೀಚಿಕೆ

| Published : Oct 31 2024, 12:55 AM IST

ದಾವಣಗೆರೆ ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ ಮರೀಚಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಪತ್ರಕರ್ತರ ಪಾಲಿಗೆ ಪ್ರಶಸ್ತಿ ಕನ್ನಡಿಯೊಳಗಿನ ಗಂಟು

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರ ಆಸ್ತಿ, ಮಠ, ಮಂದಿರಗಳ ಆಸ್ತಿಗಳು ತಮ್ಮದೆಂದು ವಕ್ಫ್‌ ಮಂಡಳಿ ಕ್ಯಾತೆ ತೆಗೆದಂತೆ ಇದೀಗ ರಾಜ್ಯ ಸರ್ಕಾರ ನೀಡುವ ಪ್ರತಿಷ್ಟಿತ ರಾಜ್ಯೋತ್ಸವ ಪ್ರಶಸ್ತಿ ಕಥೆಯೂ ದಾವಣಗೆರೆ ಪಾಲಿಗೆ ಹಾಗೆಯೇ ಆಗಿದೆ. ದಾವಣಗೆರೆ ಜಿಲ್ಲೆಯ ವಾಸಿ ಅಲ್ಲದವರಿಗೆ ಈ ಜಿಲ್ಲೆಯ ಕೋಟಾದಡಿ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಸರ್ಕಾರ ಕೃತಜ್ಞತೆ ಮೆರೆದಿದೆ.

ಜಿಲ್ಲೆಯಾಗಿ 27 ವರ್ಷ ಕಳೆದರೂ ದಾವಣಗೆರೆಗೆ ಇದುವರೆಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಒಂದೇ ಒಂದು ಸಲ ಪ್ರಶಸ್ತಿ ಸಂದಿದೆ. ಅದನ್ನು ಬಿಟ್ಟರೆ ಬೇರೆ ಯಾವೊಬ್ಬ ಹಿರಿಯ ಪತ್ರಕರ್ತರಿಗೂ ಈ ಪ್ರಶಸ್ತಿ ದೊರಕಿಲ್ಲ. ಅಷ್ಟರ ಮಟ್ಟಿಗೆ ಮಧ್ಯ ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರ ಹಾಗೂ ಇಲ್ಲಿನ ಹಿರಿಯ ಪತ್ರಕರ್ತರ ಬಗ್ಗೆ ಆಳಿದ, ಆಳುತ್ತಿರುವ ಸರ್ಕಾರಗಳು ತೋರಿದ ಧೋರಣೆಗೆ ಸಾಕ್ಷಿಯಾಗಿದೆ.

ದಾವಣಗೆರೆ ನಗರವಾಣಿ ಪತ್ರಿಕೆ ಸಂಪಾದಕರಾಗಿದ್ದ ದಿವಂಗತ ಸಿ.ಕೇಶವಮೂರ್ತಿ, ಜನತಾವಾಣಿ ಸಂಪಾದಕರಾಗಿದ್ದ ದಿವಂಗತ ಎಚ್.ಎನ್.ಷಡಕ್ಷರಪ್ಪ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರು ಇಲ್ಲಿ ಪತ್ರಿಕೋದ್ಯಮಕ್ಕಾಗಿ ಜೀವ ತೇಯ್ದಿದ್ದಾರೆ. 2006ರಲ್ಲಿ ಎಚ್.ಎನ್.ಷಡಕ್ಷರಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿತ್ತು. ಆ ನಂತರ ಇಲ್ಲಿವರೆಗೆ ಈ ಜಿಲ್ಲೆಯ ಯಾವೊಬ್ಬ ಪತ್ರಕರ್ತರಿಗೂ ರಾಜ್ಯೋತ್ಸವ ಪ್ರಶಸ್ತಿ ಒಲಿದಿಲ್ಲ. 70ರ ದಶಕದಿಂದ ರಾಜ್ಯಮಟ್ಟದ ಪತ್ರಿಕೆಗಳ ಜೊತೆಗೆ ಸ್ಥಳೀಯ ಪತ್ರಿಕೆಗಳೂ ಶುರುವಾಗಿ, ಹೊಸ ಅಲೆಯನ್ನೇ ಇಲ್ಲಿ ಸೃಷ್ಟಿಸಿದವು. ಇದು ರಾಜ್ಯ ಮಟ್ಟದ ಪತ್ರಿಕೆಗಳು, ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರ ಪೈಕಿ ಅನೇಕರ ಮೂಲ ಗರಡಿ ಮನೆ ಸ್ಥಳೀಯ ಪತ್ರಿಕೆಗಳು. ಜಾಹೀರಾತುಗಳನ್ನೇ ಆದರಿಸಿ, ಕುಂಟುತ್ತಾ, ತೆವಳುತ್ತಾ ಸಾಗುತ್ತಿರುವ ಪತ್ರಿಕೆಗಳಾಗಿ ಹಗಲಿರುಳು ಪತ್ರಿಕೆಗಾಗಿ ಜೀವತೇಯ್ದ ಹಿರಿಯ ಜೀವಗಳೂ ಇಲ್ಲುಂಟು.

60 ವರ್ಷ ದಾಟಿದವರು ಹಲವರಿದ್ದರೂ, ಮತ್ತೆ ಗುರುತಿಸುವ ಕೆಲಸ ಸರ್ಕಾರ ಮಾಡಿಲ್ಲವೆಂಬುದೂ ಅಷ್ಟೇ ಸತ್ಯ. ಹಿರಿಯರಾದ ಬಕ್ಕೇಶ ನಾಗನೂರು, ಎಸ್.ಬಿ.ಜಿನದತ್‌, ಎಂ.ಶಶಿಕುಮಾರ, ಬಾ.ಮ.ಬಸವ ರಾಜಯ್ಯ, ಎಂ.ಎಸ್.ಶಿವಶರಣಪ್ಪ, ಎಸ್.ಎ.ಗಂಗರಾಜು, ಜಿ.ಗುರುಶಾಂತಪ್ಪ, ಬಸವರಾಜ ಐರಣಿ, ವೀರಪ್ಪ ಎಂ.ಭಾವಿ, ಎಚ್.ಆರ್.ನಟರಾಜ, ಜಿ.ಎಂ.ಆರ್‌.ಆರಾಧ್ಯ, ಬಿ.ಎನ್.ಮಲ್ಲೇಶ್‌ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರಿದ್ದಾರೆ. ಆದರೆ, 27 ವರ್ಷದಲ್ಲಿ ಇಲ್ಲಿನ ಒಬ್ಬರೇ ಒಬ್ಬ ಪತ್ರಕರ್ತರೂ ಸರ್ಕಾರದ ಕಣ್ಣಿಗೆ ಕಂಡಿಲ್ಲವೇ ಎಂಬುದೇ ಸೋಜಿಗ.

ಸರ್ಕಾರ ಪ್ರಶಸ್ತಿ ನೀಡುವಾಗ ಜಿಲ್ಲೆಯ ಕೋಟಾವೆಂದರೆ ಅಲ್ಲಿನವರಿಗೆ ಗುರುತಿಸಬೇಕೆ ಹೊರತು, ಎಲ್ಲೋ ಹುಟ್ಟಿ, ಎಲ್ಲೋ ಕೆಲಸ ಮಾಡಿದವರಿಗೆ ಈ ಜಿಲ್ಲೆಯ ಪ್ರಶಸ್ತಿ ನೀಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಅನೇಕ ಹಿರಿಯ ಪತ್ರಕರ್ತರದ್ದಾಗಿದೆ. ಬರೀ ದಾವಣಗೆರೆ ನಗರವಷ್ಟೇ ಅಲ್ಲ, ಜಿಲ್ಲೆಯ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು ತಾಲೂಕು, ಗ್ರಾಮೀಣ ಪ್ರದೇಶದಲ್ಲೂ ಹಿರಿಯ ಪತ್ರಕರ್ತರಿದ್ದಾರೆ. ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಜಿಲ್ಲಾ ಕೇಂದ್ರದ ಹಿರಿಯ ಪತ್ರಕರ್ತರಷ್ಟೇ ಅಲ್ಲ, ಜಿಲ್ಲೆಯ ಇತರೆ ತಾಲೂಕು, ಗ್ರಾಮೀಣ ಪ್ರದೇಶದ ಹಿರಿಯ ಪತ್ರಕರ್ತರಿಗೂ ಕನಸಿನ ಮಾತೇ ಆಗಿದೆ. ಇನ್ನಾದರೂ ಸರ್ಕಾರವು ಪ್ರಶಸ್ತಿಗೆ ಸ್ಥಳೀಯವಾಗಿರುವ, ಸ್ಥಳೀಯ ಜಿಲ್ಲೆಯಲ್ಲೇ ಕೆಲಸ ಮಾಡುವವರಿಗೆ ಗುರುತಿಸಲಿ ಎಂಬ ಕೂಗು ಕೇಳಿ ಬರುತ್ತಿದೆ.

ರಾಜ್ಯ ಪ್ರಶಸ್ತಿದಷ್ಟೇ ಅಲ್ಲ, ಇಲ್ಲೂ ಕಥೆ ಬಿಡ್ರಣ್ಣಾ

ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯ ಕಥೆ ಹೀಗಾದರೆ, ಇನ್ನು ಜಿಲ್ಲಾಡಳಿತ, ದಾವಣಗೆರೆ ಮಹಾನಗರ ಪಾಲಿಕೆ ನೀಡುವ ರಾಜ್ಯೋತ್ಸವ ಪ್ರಶಸ್ತಿ ಸಂದರ್ಭದಲ್ಲೂ ಸಾಕಷ್ಟು ಅಪಸ್ವರ ಕೇಳಿ ಬರುತ್ತವೆ.

ಆಯ್ಕೆ ಸಮಿತಿಯಂತಹ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು, ಜನ ಪ್ರತಿನಿಧಿಗಳು ಜೇಬಲ್ಲಿ ಪಟ್ಟಿ ಹಿಡಿದುಕೊಂಡು ಬರುವವರಿಗೆ ಸಭೆಗೆ ಕರೆಸುತ್ತಾರೆ. ನೈಜ, ಅರ್ಹರಿಗೆ ಅದೆಷ್ಟರ ಮಟ್ಟಿಗೆ ಪ್ರಶಸ್ತಿ ದಕ್ಕಿದೆ ಬಂದಿದೆಯೆಂಬುದು ಪಟ್ಟಿ ಗಮನಿಸಿದಾಗಲೇ ಅರಿವಿಗೆ ಬರುತ್ತದೆ.

ನೂರಾರು ಪತ್ರಕರ್ತರು ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದಲ್ಲಿದ್ದರೂ, ಗುರುತಿಸುತ್ತಿಲ್ಲ. ಕೇವಲ ದಾವಣಗೆರೆ ಕೇಂದ್ರಿತವಾಗಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಸಂಪ್ರದಾಯ ಬದಲಿಸಬೇಕೆಂಬ ಕೂಗು ಇದೆ. ಇನ್ನು ಮಹಾ ನಗರ ಪಾಲಿಕೆಯಲ್ಲಂತೂ ಪ್ರಶಸ್ತಿ ಆಯ್ಕೆ ಸಮಿತಿಗೆ ಯಾವ ಮಾನದಂಡ ಅನುಸರಿಸುತ್ತಾರೋ ದೇವರಿಗೆ ಗೊತ್ತು ಎಂಬಂತಿದೆ.

ಅರ್ಹರಿಗೆ ಪ್ರಶಸ್ತಿ ನೀಡುವಂತೆ ಯಾರಾದರೂ ತಿಳಿ ಹೇಳಿದರೆ, ಅಂತಹವರನ್ನು ಸಭೆಗೆ ಕರೆಯಬೇಡಿ. ಕಾಂಟ್ರವರ್ಸಿ ಆಗುತ್ತದೆಂಬುದಾಗಿ ಟಾಂಟಾಂ ಹೊಡೆಯುವವರೂ ಇದ್ದಾರೆ. ಅರ್ಹರಿಗೆ, ತೆರೆ ಮರೆಯಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ, ನಿಸ್ವಾರ್ಥ ಸೇವೆ ಮಾಡಿದವರಿಗೆ ಅಂತಾ ಹೆಸರು ಹೇಳಿದರೆ ತೋರಿಕೆಗೆ ಬರೆದುಕೊಂಡು, ರಾತ್ರೋರಾತ್ರಿ ಪಟ್ಟಿಗೆ ಮತ್ತಷ್ಟು ಹೆಸರು ಸೇರಿಸಿ, ಬೆಳೆಸಲಾಗುತ್ತದೆ. ಇದೊಂದು ಅಲಿಖಿತ ನಿಯಮದಂತೆ ಪಾಲಿಕೆ ಅನುಸರಿಸಿಕೊಂಡು ಬರುತ್ತಿದ್ದು, ಪಾಲಿಕೆ ಪ್ರಶಸ್ತಿ, ಸನ್ಮಾನವೆಂದರೆ ಜನ ಅನುಮಾನಪಡುವಷ್ಟರ ಮಟ್ಟಿಗೆ ಅದು ತಲುಪಿರುವುದು ಅಷ್ಟೇ ನಿಜ.