ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ರಾಜ್ಯೋತ್ಸವ, ಮಕ್ಕಳ ದಿನಾಚರಣೆ

| Published : Dec 04 2023, 01:30 AM IST

ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ರಾಜ್ಯೋತ್ಸವ, ಮಕ್ಕಳ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಗಳು, ಮದೆನಾಡಿನ ಬಿಜಿಎಸ್ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮಡಿಕೇರಿ

ಪಾಠ- ಪ್ರವಚನಗಳೊಂದಿಗೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಆ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಪ್ರಮುಖರು ಕರೆ ನೀಡಿದರು.

ಶ್ರೀ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಗಳು, ಮದೆನಾಡಿನ ಬಿಜಿಎಸ್ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಪುಟಾಣಿ ಮಕ್ಕಳೊಂದಿಗೆ ಉದ್ಘಾಟಿಸಿದ ಶಕ್ತಿ ದಿನಪತ್ರಿಕೆ ಹಿರಿಯ ಉಪ ಸಂಪಾದಕ ಕುಡೆಕಲ್ ಸಂತೋಷ್ ಮಾತನಾಡಿ, ಮಕ್ಕಳಲ್ಲಿ ಸಾಧಿಸುವ ಛಲ ಇರಬೇಕು, ಜೀವನದಲ್ಲಿ ಮುಂದೆ ಬರಬೇಕಾದರೆ ವಿದ್ಯೆಯೊಂದಿಗೆ ಇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ, ಅದನ್ನು ಹೊರ ಹಾಕುವದರ ಮೂಲಕ ಸಾಧನೆ ಮಾಡಬೇಕು. ಮಕ್ಕಳೆಂದ ಮೇಲೆ ತುಂಟಾಟ ಇದ್ದೇ ಇರುತ್ತದೆ, ಅದನ್ನೆಲ್ಲ ಮೆಟ್ಟಿ ನಿಂತು ಮುಂದೆ ಬರಬೇಕು ಎಂದು ಹೇಳಿದರು. ತಾಯಿ- ಮಕ್ಕಳ ಹಬ್ಬ: ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಕ್ಲಸ್ಟರ್‌ನ ಸಿಆರ್‌ಪಿ ಶ್ರುತಿಶ್ರೀ ಮಾತನಾಡಿ, ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ನೆಹರು ಜನ್ಮ ದಿನಾಚರಣೆ ಇದ್ದು, ಒಂದು ರೀತಿಯಲ್ಲಿ ತಾಯಿ ಹಾಗೂ ಮಕ್ಕಳ ದಿನಾಚರಣೆಯನ್ನು ಒಂದೇ ತಿಂಗಳಲ್ಲಿ ಆಚರಣೆ ಮಾಡುವ ಸೌಭಾಗ್ಯ ದೊರೆತಿದೆ. ಮಕ್ಕಳು ಭವ್ಯ ಭಾರತದ ಪ್ರಜೆಗಳು, ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಿ ದೇಶದ ಉಜ್ವಲ ಭವಿಷ್ಯ ರೂಪಿಸುವವರಾಗಬೇಕು. ವಿದ್ಯಾಭ್ಯಾಸ ಹಂತದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಸೋಲೇ ಗೆಲುವಿನ ಮೊದಲ ಮೆಟ್ಟಿಲು. ಉತ್ತಮ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಗುರಿ ಮುಟ್ಟುವ ಛಲ ಇರಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಬಿಜಿಎಸ್ ಸ್ಕೂಲ್ ಆಡಳಿತಾಧಿಕಾರಿ ಸುಧಾಕರ್ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವನ್ನು ಬಳಸಿ, ಬೆಳೆಸಿ ಗೌರವಿಸುವದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳು ಈಗಿನಿಂದಲೇ ಕನ್ನಡ ಭಾಷೆಯಲ್ಲಿ ಮಾತನಾಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಹಾಗೂ ಉದ್ಯೊಗಕ್ಕಾಗಿ ಇಂಗ್ಲಿಷ್ ಭಾಷೆ ಅನಿವಾರ್ಯವಾಗಿದೆ. ಜೊತೆಗೆ ಹಿಂದಿಯೂ ಬೇಕು. ಆದರೆ ಮಾತೃಭಾಷೆಯನ್ನು ಮಾತ್ರ ಮರೆಯಬಾರದು. ವಿದ್ಯಾವಂತರಾಗಿ ಸಮಾಜದಲ್ಲಿ ಮುಂದೆ ಬಂದು ಶಿಕ್ಷಕರು, ಶಿಕ್ಷಣ ನೀಡಿದ ಸಂಸ್ಥೆಗೆ ಕೀರ್ತಿ ತರುವಂತಾಗಬೇಕೆಂದು ಹೇಳಿದರು. ಸನ್ಮಾನ: ಕುಡೆಕಲ್ ಸಂತೋಷ್, ಶ್ರುತಿಶ್ರೀ, ವಿದ್ಯಾಸಂಸ್ಥೆಯ ಮೇಲ್ವಿಚಾರಕ ಮುದ್ಯನ ಕಿಶನ್ ಅವರನ್ನು ಸನ್ಮಾನಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಕ್ರಿಡಾಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಿದ್ದಾಪುರ ಬಿಜಿಎಸ್ ಸಂಸ್ಥೆಯ ಮೇಲ್ವಿಚಾರಕ ಮಂಜುನಾಥ್, ಶಾಲಾ ನಾಯಕ ಭವನ್ ಇದ್ದರು. ಶಾಲಾ ಮುಖ್ಯ ಶಿಕ್ಷಕಿ ಎಂ.ಬಿ.ಪುನಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪಿ.ಜಿ. ಸವಿತಾ ಸ್ವಾಗತಿಸಿದರೆ, ಶಿಕ್ಷಕಿಯರಾದ ಶ್ರುತಿ ಹಾಗೂ ಕೆ.ಆರ್. ಜೀವಿತಾ ನಿರೂಪಿಸಿದರು. ವಿದ್ಯಾರ್ಥಿನಿ ಪುನರ್ವಿ ಸ್ವಾಗತ ನೃತ್ಯ ಮಾಡಿದರು. ಶಿಕ್ಷಕಿ ಕೆ.ಎಸ್. ನಯನ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.