ಅಂಧ ಕಲಾವಿದ ಸಿದ್ದಪ್ಪ ಕುರಿಗೆ ರಾಜ್ಯೋತ್ಸವ ಗರಿ

| Published : Oct 31 2024, 01:03 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಲೋಕಾಪುರ ಸಮೀಪದ ದಾದನಟ್ಟಿ ಗ್ರಾಮದ ಪಾರಿಜಾತ ಹಿಮ್ಮೇಳ ಹಿರಿಯ ಅಂಧ ಕಲಾವಿದ ಸಿದ್ದಪ್ಪ ಕರಿಯಪ್ಪ ಕುರಿಯವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕು ಲೋಕಾಪುರ ಸಮೀಪದ ದಾದನಟ್ಟಿ ಗ್ರಾಮದ ಪಾರಿಜಾತ ಹಿಮ್ಮೇಳ ಹಿರಿಯ ಅಂಧ ಕಲಾವಿದ ಸಿದ್ದಪ್ಪ ಕರಿಯಪ್ಪ ಕುರಿಯವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕಲೆಯನ್ನೇ ಜೀವನವಾಗಿಸಿಕೊಂಡು ಕಲೆಗಾಗಿ ಬದುಕು ಸವೆಸಿದ ಸಿದ್ದಪ್ಪ ಕುರಿ ೧೯೫೩, ಜೂ.೧ರಂದು ಕರಿಯಪ್ಪ ಮತ್ತು ಯಲ್ಲವ್ವ ದಂಪತಿ ಉದರದಲ್ಲಿ ದಾದನಟ್ಟಿಯಲ್ಲಿ ಜನಿಸಿದರು. ೭ನೇ ತರಗತಿಯವರಿಗೆ ವಿದ್ಯಾಭ್ಯಾಸ ಮಾಡಿದ ಸಿದ್ದಪ್ಪ ತಮ್ಮ ೧೪ನೇ ವಯಸ್ಸಿನಲ್ಲಿ ಕಲಾದೇವತೆ ಅರಿಸಿ ಅಂದಿನಿಂದ ಇದುವರೆಗೂ ಭಜನಾ ಕಲೆಯಲ್ಲಿ ತೊಡಗಿದ್ದಾರೆ. ಕಲೆಯಲ್ಲಿ ಇನ್ನೂ ಹೆಚ್ಚಿನ ಸಾಧನೆಗಾಗಿ ಶ್ರೀಕೃಷ್ಣ ಪಾರಿಜಾತ ಕಂಪನಿಗೆ ಸೇರಿಕೊಂಡ ಅವರು, ಪಾರಿಜಾತದ ಎಲ್ಲ ಪಾತ್ರಗಳಿಗೂ ಜೀವಕಳೆ ತುಂಬಿ ಸೈ ಎನಿಸಿಕೊಂಡರು. ಸಿದ್ದಪ್ಪರು ಪಾರಿಜಾತದಲ್ಲಿ ಗೌಳಗಿತ್ತಿ, ಸತ್ಯಭಮೆ, ಕೊರವಂಜಿ, ಶ್ರೀಕೃಷ್ಣ ಪರಮಾತ್ಮನ ಪಾತ್ರಧಾರಿಯಲ್ಲಿಯೂ ಛಾಪು ಮೂಡಿಸಿದ್ದಾರೆ.

ಪಾರಿಜಾತಗಳಲ್ಲಿ ದೊಡ್ಡ ಕಲಾವಿದರಾಗಿ ಬೆಳೆಯಲು ಕುಟುಂಬದ ಸಹಕಾರ ನೆನೆದು ಭಾವುಕರಾದ ಸಿದ್ದಪ್ಪ, ತಂದೆಯಾದ ಕರೆಯಪ್ಪರ ಪ್ರೋತ್ಸಾಹವೇ ನನ್ನ ಈ ಮಟ್ಟಿಗೆ ಬೆಳೆಸಿದ್ದು. ಅಣ್ಣ ಬೀರಪ್ಪ ಮತ್ತು ತಮ್ಮ ಹನಮಂತ ಸಹಕಾರ ಸಹಾಯ ನೆನೆದಿದ್ದಾರೆ. ಇನ್ನೂ ಇವರ ಕಲೆಗೆ ನೀರೆರೆದು ಪೋಷಿಸಿದ್ದು ಗುರುಗಳಾದ ಶ್ರೀ ಲೋಕಯ್ಯ ಸಾ.ಲೋಕಾಪೂರವರು. ಶ್ರೀ ಕೃಷ್ಣಾಜಿ ದೇಶಪಾಂಡೆಯವರ ಗರಡಿಯಲ್ಲಿ ಬೆಳೆದ ಒಬ್ಬ ಪರಿಪೂರ್ಣ ಕಲಾವಿದರಾಗಿ ಹೆಸರು ಮಾಡುವಲ್ಲಿ ಕೃಷ್ಣಾಜಿವರ ಹೆಸರೆ ನನಗೆ ಉಸಿರಾಗದೆ ಎಂದು ಹೇಳುತ್ತಾರೆ.

ಶ್ರೀಕೃಷ್ಣಾಜಿ ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಪಾರಿಜಾತ ಕಲಿತು ನೆರೆಯ ರಾಜ್ಯಗಳಾದ ಮಧ್ಯಪ್ರದೇಶ, ಮಹಾರಾಷ್ಟಾ, ಆಂಧ್ರಪ್ರದೇಶ, ಗೋವಾ, ತಮಿಳುನಾಡು, ಆಸ್ಸಾಂ, ಮುಂತಾದ ರಾಜ್ಯಗಳಲ್ಲಿ ತಮ್ಮ ಕಲೆ ಪ್ರದರ್ಶಸಿ ಅನೇಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಲಭಿಸಿರುವ ಪ್ರಶಸ್ತಿಗಳು:

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪತ್ರ ಬೆಂಗಳೂರು೧೯೯೭, ಪಾರಿಜಾತ ಪ್ರತಿಷ್ಠಾನ ಲೋಕಾಪೂರ ಪ್ರಶಸ್ತಿ ಪತ್ರ ೧೯೯೭, ಶ್ರೀ ಮೋಟಗಿ ಬಸವೇಶ್ವರ ಜಾತ್ರೆ ಕಮಿಟಿ ೧೯೯೮, ವಿಜಾಪೂರ ಜಿಲ್ಲಾ ಸಾಂಸ್ಕೃತಿಕ ಪರಿಷತ್‌ ಪ್ರಶಸ್ತಿ ಪತ್ರ-೧೯೯೦, ವಿಜಾಪೂರ ಜಿಲ್ಲಾ ೭ನೇ ಕನ್ನಡ ಸಾಸಹಿತ್ಯ ಸಮ್ಮೇಳನ ಸಮೀರವಾಡಿ ಪ್ರಸಸ್ತಿ ಪತ್ರ ೧೯೯೭, ವಿಚಾರ ಸಂಕಿರಣ ರಂಗಗೀತೆ ನಾಟಕ ಪ್ರದರ್ಶನ ಪ್ರಶಸ್ತಿ ಪತ್ರ ೧೯೯೭, ಅಖಿಲ ಭಾರತ ೬೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಪ್ಪಳದಿಂದ ಪ್ರಶಸ್ತಿ ಪತ್ರ ೧೯೯೩, ನೀನಾಸಂ ಪ್ರಶಸ್ತಿ ಪತ್ರ ೧೯೮೬, ವಿಜಾಪೂರ ಜಿಲ್ಲಾ ಜಾನೆಪದ ಮೇಳ ೧೯೮೮ ಬಾಗೇವಾಡಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಪ್ರಶಸ್ತಿ ಪತ್ರ ೧೯೮೯, ಬಳ್ಳಾರಿ ಜಿಲ್ಲಾ ಜಾನಪದ ಕಲಾ ಮಹೋತ್ಸವ ೧೯೮೭ ಹೋಸಪೇಟೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ವಿಜಾಪೂರ, ಬಾಗಲಕೋಟ ಜಿಲ್ಲೆಗಳ ನಾಟಕೋತ್ಸವ ಪ್ರಶಸ್ತಿ ೧೯೯೮, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ನವದೆಹಲಿ ಪ್ರಶಸ್ತಿ ೧೯೯೮, ಬೆಳ್ಳಿಹಬ್ಬ ಆಚರಣೆ ಹಾಗೂ ಶ್ರೀಕೃಷ್ಣ ಪಾರಿಜಾತ ನಾಟಕ ಉತ್ಸವ ಪ್ರಶಸ್ತಿ ದಾದನಟ್ಟಿ ೧೯೯೭, ಕಪ್ಪರ ಪಡಿಯಪ್ಪನ ಜಾತ್ರಾ ಮಹೋತ್ಸವ ನಾಗರಾಳ ೨೦೦೯, ಶ್ರೀ ಜಗದ್ಗುರು ಶ್ರೀ ಹೊಳೆ ಆಲೂರ ಪ್ರಶಸ್ತಿ ೨೦೦೭ ಲಭಿಸಿವೆ.

ಕರ್ನಾಟಕ ರಾಜ್ಯೋತ್ಸವ ಪ್ರಶಿಸ್ತಿ ಬಂದಿದ್ದು ತುಂಬಾ ಸಂತೋಷದ ವಿಷಯ. ಇದು ಬಯಸದೆ ಬಂದ ಭಾಗ್ಯವಾಗಿದೆ. ಶಿವಭಜನೆ ಪದ ಹಾಡುತ್ತಿದ್ದ ನನಗೆ ಲೋಕಾಪುರ ದೇಶಪಾಂಡೆ ಮತ್ತು ಸಗರಪ್ಪ ಯಾದವಾಡ ಮಾಸ್ತರ ಪಾರಿಜಾತದ ರುಚಿ ಹಚ್ಚಿಸಿದರು. ನಂತರ ನಾನಾ ಪಾತ್ರಗಳನ್ನು ಮಾಡುತ್ತ ಬಂದಿದ್ದೇನೆ. ನನ್ನ ಕಲೆ ಗುರುತಿಸಿ ಪ್ರಶಶ್ತಿ ನೀಡಿ ಗೌರವಿಸಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆಗಳು.

ಸಿದ್ದಪ್ಪ ಕ. ಕುರಿ, ಪಾರಿಜಾತ ಕಲಾವಿದ ದಾದನಟ್ಟಿ

ರಾಜ್ಯದಲ್ಲಿ ಎಲೆಮರೆ ಕಾಯಿಯಂತೆ ಸಾಕಷ್ಟು ಕಲಾವಿದರಿದ್ದು ಇಂಥ ಕಲಾವಿದರನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಸಿದ್ದಪ್ಪ ಕ. ಕುರಿಯವಿರಗೆ ಗ್ರಾಮೀಣ ಕಲಾವಿದನಾಗಿದ್ದು ರಾಜ್ಯೋತ್ಸವ ಪ್ರಶಸ್ತಿ ಸಿಕ್ಕದು ತುಂಬಾ ಖುಷಿಯಾಗಿದೆ.

ಆರ್.ಬಿ.ತಿಮ್ಮಾಪುರ, ಜಿಲ್ಲಾ ಉಸ್ತುವಾರಿ ಸಚಿವರು,