ಸಾರಾಂಶ
ಜಿಲ್ಲಾಡಳಿತದಿಂದ ರಾಜ್ಯೋತ್ಸವ ಆಚರಣೆ । ಕನ್ನಡ ಭುವನೇಶ್ವರಿಗೆ ಪುಷ್ಪನಮನ
ಕನ್ನಡಪ್ರಭ ವಾರ್ತೆ ಚಾಮರಾಜನಗರಕರ್ನಾಟಕ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗರ ನಿತ್ಯೋತ್ಸವವಾಗಬೇಕು ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ರಾಜ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು.ಸ್ವಾತಂತ್ರ‍್ಯ ಪೂರ್ವ ಕಾಲದಲ್ಲಿ ವಿವಿಧ ಭಾಗಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರ ವಿವಿಧ ಪ್ರದೇಶಗಳು ಒಂದುಗೂಡಿ ಕರ್ನಾಟಕ ರಾಜ್ಯವಾಗಿ ಉದಯವಾದ ಈ ಶುಭ ದಿನವನ್ನು ಪ್ರತಿ ವರ್ಷ ನಾಡಹಬ್ಬವನ್ನಾಗಿ ಆಚರಿಸುತ್ತಿದ್ದೇವೆ. ಕನ್ನಡ ರಾಜ್ಯೋತ್ಸವ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಪ್ರಗತಿಗೆ ಪೂರಕ ಹಾಗೂ ಪ್ರೇರಕವಾಗಿದೆ. ನಾಡಿನ ಎಲ್ಲೆಡೆ ಕನ್ನಡ ಧ್ವಜವನ್ನು ಹಾರಿಸಿ ಸಹಬಾಳ್ವೆಯ ಸಂದೇಶ ನೀಡಿ ಸೌಹಾರ್ದತೆ ಪಸರಿಸುವ ಶುಭದಿನವೂ ಆಗಿದೆ ಎಂದು ತಿಳಿಸಿದರು.
ಕನ್ನಡ, ಕರ್ನಾಟಕ, ಕರುನಾಡು ಎಂಬುದು ನೆಲ ಮತ್ತು ಭಾಷೆಯಲ್ಲದೇ ಅದೊಂದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯ ಎನಿಸಿಕೊಂಡಿದೆ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ಕನ್ನಡ ನಾಡಲ್ಲಿ ಹುಟ್ಟಿರುವ ನಾವು ಎಲ್ಲೇ ಇದ್ದರೂ ಸಹ ಕನ್ನಡ ನಾಡು-ನುಡಿಯ ಘನತೆಯನ್ನು ಎತ್ತಿ ಹಿಡಿಯುವುದು ನಮ್ಮ ಹಿರಿಮೆ ಎನಿಸಿದೆ. ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಸಾವಿರಾರು ಕನ್ನಡಿಗರು ದುಡಿದಿದ್ದಾರೆ. ಈ ಎಲ್ಲಾ ಮಹಾನ್ ಚೇತನಗಳು ಸದಾ ಸ್ಮರಣೀಯರಾಗಿದ್ದಾರೆ ಎಂದರು.ಕನ್ನಡ ಭಾಷೆ, ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ವಿಶ್ವದಲ್ಲೇ ವಿಶೇಷ ಮನ್ನಣೆಗೆ ಪಾತ್ರವಾಗಿದೆ. ಕವಿಗಳು, ದಾಸಶ್ರೇಷ್ಠರು, ಬಸವಾದಿ ಶರಣರು ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಭಾಷಾ ಬೆಳಕನ್ನು ಮುಗಿಲೆತ್ತರಕ್ಕೆ ಬೆಳಗಿಸಿದ್ದಾರೆ. ಕೀರ್ತನೆ, ವಚನಗಳು, ಭಕ್ತಿಪಂಥ ಮೂಲಕ ಕನ್ನಡ ನಾಡಿನಲ್ಲಿ ನಾಡು ನುಡಿಯನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ರಾಜ್ಯಕ್ಕಿದೆ ಎಂದು ತಿಳಿಸಿದರು.
ಗಡಿ ಜಿಲ್ಲೆ ಚಾಮರಾಜನಗರ ಅನ್ಯಭಾಷೆಗಳ ನಡುವೆಯೂ ಭಾಷಾ ಸಾಮರಸ್ಯವನ್ನು ಕಾಪಾಡಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಾಹಿತ್ಯಕ್ಕೆ ತನ್ನದೇ ಕೊಡುಗೆ ನೀಡಿರುವ ಇಲ್ಲಿನ ನೆಲದಲ್ಲಿ ಜಗತ್ತಿನ ಜಾನಪದ ಕಾವ್ಯದಲ್ಲೇ ಅತ್ಯುನ್ನತ ಎನಿಸಿರುವ ಮಲೆ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗ, ಸಿದ್ದಪ್ಪಾಜಿ ಮಹಾ ಕಾವ್ಯಗಳು ಗಮನಾರ್ಹವಾಗಿವೆ. ಜಾನಪದ ಕಲೆಯ ತವರೂರು ಎಂದೇ ಕರೆಸಿಕೊಂಡಿರುವ ಜಿಲ್ಲೆಯು ಗೊರವರ ಕುಣಿತ, ಕಂಸಾಳೆ, ತಂಬೂರಿ, ನೀಲಗಾರರು, ವೀರಭದ್ರಕುಣಿತ, ಸೋಬಾನೆ ಪದಗಳು ಸೋಲಿಗರು, ಬುಡಕಟ್ಟು ಪರಂಪರೆಯ ದೇಸಿ ಸೊಬಗಿನಿಂದ ತನ್ನದೇ ಆದ ವೈಶಿಷ್ಟ್ಯ ಸ್ಥಾನವನ್ನು ಪಡೆದುಕೊಂಡಿದೆ ಎಂದರು.ಚಾಮರಾಜನಗರ ಜಿಲ್ಲೆ ಶೇ.50ಕ್ಕೂ ಹೆಚ್ಚು ಅರಣ್ಯ ಹೊಂದಿರುವ ಪ್ರಾಕೃತಿಕ ಸಂಪತ್ತು ಹೊಂದಿದ್ದು, ಧಾರ್ಮಿಕ ಕ್ಷೇತ್ರಗಳು ಸಾಕಷ್ಟು ಇವೆ. ಬಂಡೀಪುರ, ಬಿಳಿಗಿರಿ ರಂಗನಾಥ ಸ್ವಾಮಿ, ಹುಲಿ ಸಂರಕ್ಷಿತ ಪ್ರದೇಶಗಳಿವೆ. ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ ಸೇರಿ ಹಲವಾರು ಧಾರ್ಮಿಕ ಯಾತ್ರಾ ಸ್ಥಳಗಳು, ಭರಚುಕ್ಕಿ ಜಲಪಾತ ಸೇರಿದಂತೆ ಹಲವು ವೈವಿದ್ಯಮಯ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿದ್ದು, ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳನ್ನು ಹೊಂದಿದೆ. ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಪರಂಪರೆ, ಸಂಸ್ಕಾರ, ಜಾನಪದ ವೈದ್ಯ, ವಿಜ್ಞಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ ಕನ್ನಡಿಗರು ಸಾಕಷ್ಟು ಇದ್ದಾರೆ ಎಂದು ತಿಳಿಸಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಎಸ್.ಸುರೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನ), ನಗರಸಭಾ ಉಪಾಧ್ಯಕ್ಷ ಎಚ್.ಎಸ್. ಮಮತ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ.ಲಕ್ಷ್ಮಿಇದ್ದರು.