ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯೋತ್ಸವ ಎಂಬುದು ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಆಚರಣೆ, ಇದು ಕನ್ನಡಿಗರ ಭಾವನಾತ್ಮಕ ಅನುಸಂಧಾನ. ಜಾತಿ, ಮತ, ಧರ್ಮ, ಲಿಂಗದೆಲ್ಲೆಗಳ ಮೀರಿದ ನಿರಂತರ ನಿತ್ಯೋತ್ಸವ ಎಂದು ಕುವೆಂಪು ವಿವಿ ಪ್ರಾಧ್ಯಾಪಕಿ ಡಾ. ಹಸೀನಾ ಎಚ್.ಕೆ ಅಭಿಪ್ರಾಯಪಟ್ಟರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಬೆಂಗಳೂರು, ತಾಲೂಕು ಘಟಕ ಅರಸೀಕೆರೆ ವತಿಯಿಂದ ಜಾವಗಲ್ ಪಟ್ಟಣದ ಹಳೇಬೀಡು ರಸ್ತೆಯಲ್ಲಿರುವ ಖಾದ್ರಿಯಾ ಕಾಂಪ್ಲೆಕ್ಸ್ ಹೊರಾಂಗಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಘಟಕ ಉದ್ಘಾಟನೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನಿರಂತರವಾಗಿ ವರ್ಷದುದ್ದಕ್ಕೂ ಕನ್ನಡದ ಕೈಂಕರ್ಯವನ್ನು ಮಾಡುತ್ತಾ ಬಂದಿದೆ. ನಾಡು, ನುಡಿಯ ಬಗೆಗಿನ ಪ್ರೀತಿ ಪ್ರತಿಯೊಬ್ಬ ಕನ್ನಡಿಗನಲ್ಲಿಯೂ ಅಂತರ್ಗತವಾದ ಅಂಶ. ಕೆಲವು ಸಂಸ್ಥೆಗಳು ಪ್ರತಿವರ್ಷ ನವೆಂಬರ್ ಬಂದಾಗ ಮಾತ್ರ ಕನ್ನಡ ಧ್ವಜಹಾರಿಸಿ, ಆಚರಣೆ ಮಾಡಿ ಮತ್ತೆ ಮಾರನೇ ವರ್ಷದ ನವೆಂಬರ್ ವರೆಗೆ ಸುಮ್ಮನಾಗಿಬಿಡುತ್ತಾರೆ. ಉತ್ಸವ ಎಂದರೆ ಸೀಮಿತವಲ್ಲ. ಅದು ನಮ್ಮೊಳಗಿನ ನಿರಂತರತೆ, ನಿತ್ಯೋತ್ಸವವಾಗಲಿ ಎಂದು ಕರೆ ನೀಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ನಾನು, ನಾಗರಾಜ್ ದೊಡ್ಡಮನಿ, ಎಚ್.ಎಸ್.ಬಸವರಾಜ, ವಾಸು ಸಮುದ್ರವಳ್ಳಿ ನಾಲ್ಕು ಜನರು ಸೇರಿ ಹಾಸನದ ಸುಧಾ ಹೋಟೆಲ್ನಲ್ಲಿ ಕೂತು ಚಹಾ ಕುಡಿಯುವಾಗ ಹೊಳೆದು ಸಂಸ್ಥಾಪಿಸಿದ ಸಂಘಟನೆ. ಇಂದು ಚಳವಳಿಯಂತೆ ರಾಜ್ಯದ ಅಷ್ಟೂ ಜಿಲ್ಲೆಗಳಲ್ಲಿ ಹಾಗೂ ಪಕ್ಕದ ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ನೂರಾರು ಘಟಕಗಳನ್ನು ಹೊಂದಿದ್ದು ಸಹಸ್ರಾರು ಸದಸ್ಯರು ಇಂದು ನಮ್ಮ ಸಂಘಟನೆಯಲ್ಲಿ ಕಾಯ, ವಾಚಾ, ಮನಸಾ ಕನ್ನಡ ನಾಡು, ನುಡಿಗಾಗಿ ನಿರಂತರವಾಗಿ ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೇ ತಾಲೂಕು ಸಮ್ಮೇಳನ, ಜಿಲ್ಲಾ ಸಮ್ಮೇಳನ ಹಾಗೂ ಸಕಲೇಶಪುರ, ಬೀದರ್ ಹಾಗೂ ಬಸವನ ಬಾಗೇವಾಡಿಯಲ್ಲಿ ಮೂರು ಅಖಿಲ ಕರ್ನಾಟಕ ಕವಿಕಾವ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಮಾಡಿದ್ದೇವೆ. ಜನವರಿ ೧೨, ೨೦೨೫ ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಾಲ್ಕನೇ ಸಮ್ಮೇಳನ ನಡೆಯಲಿದ್ದು ಬರುವ ಏಪ್ರಿಲ್ ತಿಂಗಳಲ್ಲಿ ಮುಂಬೈಯಲ್ಲಿ ಅಖಿಲ ಭಾರತ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಾವು ಇಲ್ಲಿ ನಿಮಿತ್ತ ಮಾತ್ರ. ನಮ್ಮ ವೇದಿಕೆಯ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಹಂತದ ಸದಸ್ಯರು ನಿಸ್ವಾರ್ಥವಾಗಿ ನಾಡು- ನುಡಿಯ ಕೆಲಸ ಮಾಡುವುದರಿಂದ ವೇದಿಕೆಯಿಂದ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಗಟ್ಟಿಯಾಗಿ ಬೆಳೆಯುತ್ತಿದೆ ಎಂದರು.
ಸಾಹಿತಿ ಹಾಗೂ ಪತ್ರಕರ್ತ ನಾಗರಾಜ್ ಹೆತ್ತೂರು ೨೦೨೪ನೇ ಸಾಲಿನ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನಾನೂ ಒಬ್ಬ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಭಾಗವಾಗಿದ್ದು ಮೊದಲಿನಿಂದಲೂ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸಿ ಸನ್ಮಾನಿಸಿ, ಗೌರವಿಸುವ ಕಾರ್ಯವನ್ನು ವೇದಿಕೆ ನಿರಂತರವಾಗಿ ಮಾಡುತ್ತಾ ಬರುತ್ತಿದೆ. ಅರ್ಜಿ, ಜಾತಿ, ಧರ್ಮ, ರಾಜಕಾರಣ ಹೀಗೆ ಅನೇಕ ಕಾರಣಗಳಿಂದ ಅರ್ಹರಿಗೆ ಸಲ್ಲುವ ರಾಜ್ಯೋತ್ಸವ ಪ್ರಶಸ್ತಿಗಳಿಂದು ಲಾಬಿ ಮಾಡಿದವರ ಪಾಲಾಗುತ್ತಿರುವುದು ದುರಂತ. ನಿಷ್ಪಕ್ಷಪಾತವಾಗಿ ನೈಜ ಸಾಧಕರನ್ನು ಯಾವುದೇ ಅರ್ಜಿಗಳನ್ನು ನಿರೀಕ್ಷಿಸಿದೇ ಗುರುತಿಸಿ, ಗೌರವಿಸುವುದು ಸಾಧಕರಿಗೆ ಉತ್ತೇಜನ ನೀಡುವುದರ ಜೊತೆಗೆ ಅವರ ವೈಯಕ್ತಿಕ ಆಸಕ್ತಿಗಳನ್ನು ದ್ವಿಗುಣಗೊಳಿಸುತ್ತದೆ ಎಂದರು.೨೦೨೪ ನೇ ಸಾಲಿನ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸಿ ಪುರಸ್ಕೃತರು:
2೦೨೪ ನೇ ಸಾಲಿನ ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಎ. ಎಂ. ಜಯರಾಂ. ಚನ್ನರಾಯಪಟ್ಟಣ.; ಕೃಷ್ಣ ಎಚ್. ಎನ್, ಹೊಳೆನರಸೀಪುರ.; ರೇಖಾ ಪ್ರಕಾಶ್, ಹಾಸನ.; ಹೆಬ್ಬಾಳು ಹಾಲಪ್ಪ, ಬೇಲೂರು.; ಎಂ. ಬಾಲಕೃಷ್ಣ, ಆಲೂರು.; ಮಲ್ನಾಡ್ ಮೆಹಬೂಬ್, ಸಕಲೇಶಪುರ.; ರಾಜೇಶ್ ಪಿ.ಸಿ., ಅರಕಲಗೂಡು ಇವರು ಭಾಜನರಾದರು.ಪದಗ್ರಹಣ:
ಜಾವಗಲ್ ಹೋಬಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹಮ್ಮದ್ ಫೈರೋಜ್ ಗಾಂಧಿ ಅವರಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜ ದೊಡ್ಡಮನಿ ಪದಗ್ರಹಣ ಮಾಡಿದರು.ವೇದಿಕೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ಅರಸೀಕೆರೆ ತಾಲೂಕು ಘಟಕದ ಅಧ್ಯಕ್ಷ ಕೆ. ಎಸ್. ಮಂಜುನಾಥ್, ಬಾಣಾವರ ಗುರುಕುಲ ಇಂಟರ್ ನ್ಯಾಷನಲ್ ಶಾಲೆಯ ಉಪಾಧ್ಯಕ್ಷರಾದ ದೇಶಾಣಿ ಆನಂದ್, ಕೇ.ಕಾ.ಸವೇ. ಹೊಳೆನರಸೀಪುರ ತಾಲೂಕು ಅಧ್ಯಕ್ಷೆ ಕಾವ್ಯಶ್ರೀ ಕೃಷ್ಣ, ಪಾರಂಪರಿಕ ವೈದ್ಯರಾದ ಡಾಕ್ಟರ್ ಮುಹಿಬುಲ್ಲಾ ಖಾದ್ರಿ, ಸಮಾಜ ಸೇವಕರಾದ ಅಬ್ದುಲ್ ಸಮದ್ ಸೇರಿದಂತೆ ಹಲವರು ಮಾತನಾಡಿದರು.
ವಿಶೇಷ ಸನ್ಮಾನ:ಸುಭೇದಾರ ಕೆ. ಚಂದ್ರಪ್ಪ, ೧೯೭೧ ಬಾಂಗ್ಲಾ ವಿಮೋಚನಾ ವಾರ್ ಫೈಟರ್, ಜಾವಗಲ್ ಹಾಗೂ ಜೆ.ಎಚ್. ಶಿವಣ್ಣ, ಮಾಜಿ ಸೈನಿಕರು, ಜಾವಗಲ್ ಇವರನ್ನು ರಾಜ್ಯೋತ್ಸವ ನಿಮಿತ್ತ ವಿಶೇಷವಾಗಿ ಸನ್ಮಾನಿಸಲಾಯಿತು.
ಜಿಲ್ಲಾ ಮಟ್ಟದ ರಾಜ್ಯೋತ್ಸವ ಕವಿಗೋಷ್ಠಿ:ನಂತರ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಸಾವಿತ್ರಮ್ಮ ಓಂಕಾರ್, ಅರಸೀಕೆರೆ.; ಕೆ. ಸಿ. ನಟರಾಜು, ಅರಸೀಕೆರೆ.; ಮಾರುತಿ ಕೆ. ಬಿ.ದೊಡ್ಡಕೋಡಿಹಳ್ಳಿ; ಪಾರ್ವತಿ ಜಿನಗರವಳ್ಳಿ. ಆಲೂರು.; ವಿಶ್ವಾಸ್ ಡಿ. ಗೌಡ, ಸಕಲೇಶಪುರ.; ರೇಷ್ಮಾಶೆಟ್ಟಿ ಗೊರೂರು, ಹಾಸನ.; ನೀಲಾವತಿ ಸಿ.ಎನ್, ಹಾಸನ.; ಎಚ್.ಬಿ.ಚೂಡಾಮಣಿ, ಹಾಸನ.; ಪರಮೇಶ್ವರಪ್ಪ ಎಚ್, ಬೇಲೂರು.; ಪದ್ಮಾವತಿ ವೆಂಕಟೇಶ್; ಅಮೃತ್ ಅರಸೀಕೆರೆ ಕಾವ್ಯ ವಾಚನ ಮಾಡಿ ಗಮನ ಸೆಳೆದರು.