ರಕ್ಷಾಬಂಧನ ಸ್ನೇಹ, ಪ್ರೀತಿಯ ಸಂಕೇತ

| Published : Aug 10 2025, 01:30 AM IST

ಸಾರಾಂಶ

ರಕ್ಷಾಬಂಧನ ಸ್ನೇಹದ, ಪ್ರೀತಿಯ ಭ್ರಾತೃತ್ವದ, ಶಕ್ತಿಯ ಸಂಕೇತವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗ: ರಕ್ಷಾಬಂಧನ ಸ್ನೇಹದ, ಪ್ರೀತಿಯ ಭ್ರಾತೃತ್ವದ, ಶಕ್ತಿಯ ಸಂಕೇತವಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾಯಿಂದ ಶನಿವಾರ ಹಮ್ಮಿಕೊಂಡಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಕ್ಷಾ ಬಂಧನದ ನೂಲಿನಲ್ಲಿ ಸಂಘಟನೆಯ ಶಕ್ತಿಯಿದೆ. ನಮ್ಮ ಸಂಸ್ಕೃತಿ ದೇಶದ ನೆಲೆಗಟ್ಟು, ಭಾವೈಕ್ಯತೆ ಅಡಗಿದೆ. ಪ್ರಪಂಚ ಒಂದು ಕುಟುಂಬ ಎನ್ನುವ ಸಂಸ್ಕೃತಿಯ ರಾಷ್ಟ್ರೀಯ ಹರಿಕಾರರು ನಾವು. ದೇಶವನ್ನು ಸಂಕ್ಷರಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ರಕ್ಷಾಬಂಧನ ಬರೀ ಅಣ್ಣತಂಗಿಯ ಸಂಬಂಧ ಮಾತ್ರವಲ್ಲ, ಅದರಲ್ಲಿ ಉದಾತ್ತ ಧ್ಯೇಯೋದ್ದೇಶಗಳಿವೆ ಎಂದು ತಿಳಿಸಿದರು.

ಪ್ರತಿ ಮನೆಮನೆಗಳಲ್ಲಿ ರಕ್ಷಾಬಂಧನದ ಕಾರ್ಯಕ್ರಮ ನಡೆಯಬೇಕಿದೆ. ಹಿರಿಯರು ಸುಮ್ಮನೆ ಇದನ್ನೆಲ್ಲಾ ಮಾಡಿಲ್ಲ. ಅದರ ಹಿಂದೆ ಒಳ್ಳೆಯ ಉದ್ದೇಶವಿದೆ ಎಂದರು.

ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಅವರು ಭಯೋತ್ಪಾದಕರೇ ಎಂದು ಪ್ರಶ್ನೆ ಕೇಳಿದವರು ನಮ್ಮ ನಡುವೆ ಇದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ನಾಳೆ ಅವರು ಸುಬ್ರಹ್ಮಣ್ಯಕ್ಕೂ ಬರುತ್ತಾರೆ. ತಿರುಪತಿಯಿಂದ ವಿವಾದ ಹುಟ್ಟುಹಾಕಿ, ಶಬರಿಮಲೈಗೆ ಕೈಹಾಕಿದರು. ಗೋಕರ್ಣದಲ್ಲೂ ಪ್ರಯತ್ನ ನಡೆದಿತ್ತು. ಒಳ್ಳೆಯವರು ಸುಮ್ಮನಿದ್ದಾಗ ಇಂತಹ ಘಟನೆಗಳು ನಡೆಯುತ್ತವೆ. ಗೊಂದಲ ಸೃಷ್ಟಿಮಾಡುವ ಕಾರ್ಯಮಾಡುತ್ತಾರೆ. ಎಸ್‌ಐಟಿ ಬ್ರಹ್ಮನಿಂದ ಹುಟ್ಟಿದ್ದಲ್ಲ, ಸಿಎಂ ಮೂಗಿನ ಕೆಳಗೆ ಇರುವ ಒಂದು ಸಂಸ್ಥೆ ಅವರು ಹೇಳಿದ್ದನ್ನೇ ಇವರು ಮಾಡುತ್ತಾರೆ ಎಂದು ವಿವರಿಸಿದರು.

ವೀರೇಂದ್ರ ಹೆಗ್ಗಡೆ ಅವರು ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಇಂದಲ್ಲಾ ನಾಳೆ ಧರ್ಮಸ್ಥಳದ ಸತ್ಯ ಹೊರಬರುತ್ತದೆ. ಯಾವ ಎಸ್‌ಐಟಿ ಕೂಡ ಏನೂ ಮಾಡಲಾಗುವುದಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಪ್ರಧಾನಿ ಮೋದಿಯವರು ಆಪರೇಷನ್ ಸಿಂದೂರದ ಮೂಲಕ ನಮ್ಮ ದೇಶದ ಹೆಣ್ಣು ಮಕ್ಕಳಿಗೆ ಅನ್ಯಾಯ ಮಾಡಿದರೆ, ಏನಾಗುತ್ತದೆ ಎಂಬುದನ್ನು ವಿಶ್ವಕ್ಕೆ ತೋರಿಸಿದ್ದಾರೆ. ಸಂಸ್ಕೃತಿಯ ಚಿಂತನೆಯನ್ನು ಎತ್ತಿಹಿಡಿಯುವ ಪಕ್ಷ ಬಿಜೆಪಿಯಾಗಿದೆ. ಅದನ್ನು ಕಾರ್ಯಕರ್ತರು ಮುಂದುವರೆಸಿ, ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ನಗರಾಧ್ಯಕ್ಷ ಮೋಹನ್ ರೆಡ್ಡಿ ಮಾತನಾಡಿ, ಶ್ರಾವಣ ಮಾಸದ ಮತ್ತು ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಜೆಪಿ ನಗರ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ.11ರಂದು ನಗರದ ಎಲ್ಲಾ ಪುತ್ಥಳಿಗಳನ್ನು ಸ್ವಚ್ಛತೆ ಮಾಡಿ ಅರ್ಚನೆ ಮಾಡುವ ಕಾರ್ಯವಿದ್ದು, ಬೆಳಗ್ಗೆ 9 ಗಂಟೆಗೆ ಗಾಂಧಿಪಾರ್ಕ್‌ನಿಂದ ಪ್ರಾರಂಭವಾಗುತ್ತದೆ. ಆ.14ರ ಸಂಜೆ 5 ಗಂಟೆಗೆ ಲಕ್ಷ್ಮೀ ಚಿತ್ರಮಂದಿರದಿಂದ ಗೋಪಿವೃತ್ತದವರೆಗೆ ಮೌನ ಮೆರವಣಿಗೆ ನಡೆಯಲಿದ್ದು, ಆ.15ರಂದು ಎಲ್ಲಾ ಕಾರ್ಯಕರ್ತರ ಮನೆಯ ಮೇಲೆ ರಾಷ್ಟ್ರಧ್ವಜಾರೋಹಣ ಇರುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮಹಿಳಾ ಮೋರ್ಚಾದಿಂದ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಮತ್ತು ಶಾಸಕರಿಗೂ ತಿಲಕವಿಟ್ಟು, ರಕ್ಷಾಬಂಧನವನ್ನು ಕಟ್ಟಿ ಸಿಹಿ ಹಂಚಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಅಧ್ಯಕ್ಷೆ ರಶ್ಮಿ ಶ್ರೀನಿವಾಸ್, ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಅಶೋಕ್ ನಾಯ್ಕ, ಪ್ರಮುಖರಾದ ಸುರೇಖಾ ಮುರುಳೀಧರ್, ಮಂಗಳಾ ನಾಗೇಂದ್ರ, ಜ್ಞಾನೇಶ್ವರ್, ನಾಗರಾಜ್, ದೀನ್‌ದಯಾಳ್, ಮಂಜುನಾಥ್, ಅನಿತಾ ರವಿಶಂಕರ್, ಯಶೋಧ, ಚೈತಾ ಪೈ, ಶಾಂತಾ ಸುರೇಂದ್ರ, ಪ್ರಭಾಕರ್ ಮತ್ತಿತರರಿದ್ದರು.