ಕುಶಾಲನಗರ: ಕುಶಾಲನಗರ ಬೈಚನಹಳ್ಳಿ ಬಳಿ ನಿರ್ಮಾಣಗೊಂಡಿರುವ ಬಸ್ ತಂಗುದಾಣದ ಫಲಕ ಬದಲಾಯಿಸದಿರುವ ಪುರಸಭೆ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.ವೇದಿಕೆಯ ನಗರ ಅಧ್ಯಕ್ಷ ಡಿ.ಆರ್. ಯೋಗೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ದೀಪಕ್, 1985ರಲ್ಲಿ ತಂಗುದಾಣದಲ್ಲಿ ಅಳವಡಿಸಿರುವ ಹಳೆಯ ಫಲಕವನ್ನು ಇನ್ನೂ ಬದಲಾವಣೆ ಮಾಡುವಲ್ಲಿ ಅಧಿಕಾರಿಗಳು ತಾತ್ಸಾರ ಮನೋಭಾವನೆ ತಳೆದಿದ್ದಾರೆ ಎಂದು ಆರೋಪಿಸಿದರು. ನಾಲ್ಕು ದಶಕಗಳ ನಡುವೆ ಮಂಡಲ ಪಂಚಾಯಿತಿಯಿಂದ ಪುರಸಭೆಯಾಗಿ ಪಟ್ಟಣ ಮೇಲ್ದರ್ಜೆಗೆ ಏರಿದರೂ ಅಧಿಕಾರಿಗಳು ಫಲಕಗಳನ್ನು ಬದಲಾಯಿಸಲು ಯಾವುದೇ ರೀತಿಯ ಗಮನಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು ಕಂದಾಯ ಅಧಿಕಾರಿ ರಾಮು ಅವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಿಎಂ ಆಸಿಫ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸಂಧ್ಯಾ ಗಣೇಶ್ ಜಿಲ್ಲಾ ಪದಾಧಿಕಾರಿಗಳಾದ ಆನಂದ ಗೌಡ, ಶೃತಿ ಗಿರೀಶ್, ವೇದಿಕೆಯ ವಿವಿಧ ಘಟಕಗಳ ಪದಾಧಿಕಾರಿಗಳು. ಸದಸ್ಯರು ಇದ್ದರು.