ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಇಡೀ ದೇಶದ ಚಿತ್ತವೇ ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯತ್ತ ನೆಟ್ಟಿದೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ದೇಶವೇ ಸಂಭ್ರಮದಲ್ಲಿದೆ. ಅದರಂತೆ ಕುಂದಾನಗರಿ ಬೆಳಗಾವಿ ನಗರ ಕೂಡ ದೀಪಾವಳಿಯಂತೆ ಕಂಗೊಳಿಸುತ್ತಿದೆ. ರಾಮ ನಾಮ ಜಪದೊಂದಿಗೆ ಎಲ್ಲೆಡೆ ಕೇಸರಿ ಧ್ವಜಗಳೇ ರಾರಾಜಿಸುತ್ತಿವೆ.ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಬೆಳಗಾವಿ ಸಂಪೂರ್ಣವಾಗಿ ಕೇಸರಿಮಯವಾಗಿ ಪರಿವರ್ತನೆಗೊಂಡಿದೆ. ಶ್ರೀರಾಮಚಂದ್ರನ ಹೆಸರಿನಲ್ಲಿ ಮತ್ತೊಮ್ಮೆ ದೀಪಾವಳಿ ಹಬ್ಬದ ಸಂಭ್ರಮ ಜನರಲ್ಲಿ ಮನೆ ಮಾಡಿದೆ. ಪ್ರಮುಖ ಮಾರುಕಟ್ಟೆಗಳಾದ ಗಣಪತಿ ಗಲ್ಲಿ, ಕಾಕತಿವೇಸ್ ರಸ್ತೆ, ರವಿವಾರ ಪೇಟೆ, ಪಾಂಗೂಳಗಲ್ಲಿ, ಮಾರುತಿ ಗಲ್ಲಿ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಬೀದಿ ಬೀದಿಗಳೆಲ್ಲವೂ ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಮಾರುಕಟ್ಟೆಗಳಲ್ಲಿ ಕೇಸರಿ ಧ್ವಜಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ. ಇದರ ಜೊತೆಗೆ ಕೇಸರಿ ಶಾಲು, ಕೇಸರಿ ಬಟ್ಟೆಗಳನ್ನು ಖರೀದಿ ಮಾಡಲಾಗುತ್ತಿದೆ. ಮಾರುಕಟ್ಟೆಗಳಲ್ಲಿ ಜನರು ಮುಗಿಬಿದ್ದು ಕೇಸರಿ ಬಟ್ಟೆಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇದರ ನಡುವೆ ಪ್ರಭು ಶ್ರೀರಾಮಚಂದ್ರನ ಹೆಸರಿನಲ್ಲಿ ರಾಮಮಂದಿರಗಳು ಮೌಲ್ಯಬಿತ್ತುವ ಕಲೆ, ಸಂಸ್ಕೃತಿಯ ಆಗರವಾಗಿವೆ. ಧಾರ್ಮಿಕ ಕೇಂದ್ರಗಳು ವಿಶೇಷ ಅಲಂಕಾರದಿಂದ ಕಂಗೊಳಿಸುತ್ತಿವೆ. ಮಂದಿರದಲ್ಲಿ ಪೂಜೆ, ಆರಾಧನೆ, ಜಪ, ಭಜನೆ, ನಡೆಯುತ್ತಿವೆ.ಜನರು ರಾಮನನ್ನು ಆರಾಧಿಸುತ್ತಾ ಮುಕ್ತಿ ಮತ್ತು ಭಕ್ತಿ ಮಾರ್ಗದಲ್ಲಿ ಸಾಗುತ್ತಿದ್ದಾರೆ. ರಾಮದೇವ ಗಲ್ಲಿಯಲ್ಲಿರುವ ಶ್ರೀರಾಮ ಮಂದಿರ ಸೇರಿದಂತೆ ಇತರೆ ಮಂದಿರಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂದಿರಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ಶ್ರೀರಾಮನ ಬೃಹತ್ ಕಟೌಟ್‌ಗಳು ತಲೆ ಎತ್ತಿವೆ.
ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯನ್ನೇ ಎದುರು ನೋಡುತ್ತಿರುವ ಶ್ರೀರಾಮನ ಭಕ್ತರು ಮನೆ ಮನೆಗಳಲ್ಲಿ ಮತ್ತೊಮ್ಮೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮಿಂದೆಳಲಿದ್ದಾರೆ. ಪ್ರತಿ ಮನೆಗಳಲ್ಲಿ ಐದು ದೀಪಗಳನ್ನು ಬೆಳಗಿಸಲು ಸಜ್ಜುಗೊಂಡಿದ್ದಾರೆ. ಮಾರುಕಟ್ಟೆಯಲ್ಲಿ ದೀಪಗಳ ಖರೀದಿಯೂ ಭರ್ಜರಿಯಾಗಿತ್ತು.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ನಗರದಲ್ಲಿ ಹನುಮಾನ ಚಾಲೀಸಾ ಪಠಣ ಸಮರ್ಪಣೆ ಕಾರ್ಯಕ್ರಮವನ್ನೂ ಕಳೆದ 45 ದಿನಗಳಿಂದಲೂ ನಡೆಸುತ್ತ ಬಂದಿದೆ. ಹನುಮಾನ ಚಾಲೀಸಾ ಪಠಣ ಮೂಲಕ ಪ್ರಭು ಶ್ರೀರಾಮನ ನಾಮ ಜಪ ಮಾಡಲಾಗುತ್ತಿದೆ. ಮನೆ, ಮನಗಳಲ್ಲಿ ರಾಮನದ್ದೇ ಜಪ ಮಾಡಲಾಗುತ್ತಿದೆ.