ಸಾರಾಂಶ
ಹೊಸಪೇಟೆ: ನಗರದ ರೈಲು ನಿಲ್ದಾಣದಲ್ಲಿ ಗುರುವಾರ ರಾತ್ರಿ ಅಯೋಧ್ಯಾ ಧಾಮದಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿನಲ್ಲಿ ರಾಮಭಕ್ತರಿದ್ದ ಕಾಯ್ದಿರಿಸಿದ ಬೋಗಿಯಲ್ಲಿ ಹತ್ತಿದ್ದ ವ್ಯಕ್ತಿಯೋರ್ವ ಆಕ್ಷೇಪಾರ್ಹ ಹೇಳಿಕೆ ಹೇಳಿದ್ದಲ್ಲದೇ ಬೆದರಿಕೆ ಒಡ್ಡಿ ದಾಂಧಲೆ ಎಬ್ಬಿಸಿದ ಹಿನ್ನೆಲೆಯಲ್ಲಿ ಶುಕ್ರವಾರವೂ ಅಯೋಧ್ಯೆಯಿಂದ ಮೈಸೂರಿನತ್ತ ತೆರಳಿದ ಮತ್ತೊಂದು ರೈಲಿನ ರಾಮಭಕ್ತರು ಹೊಸಪೇಟೆ ನಿಲ್ದಾಣದಲ್ಲಿ ಇಳಿದು ಸುಮಾರ ಅರ್ಧ ಗಂಟೆಗಳ ಕಾಲ ಘೋಷಣೆ ಕೂಗಿ, ಜೈ ಶ್ರೀರಾಮ, ಜೈ ಮೋದಿ, ಜೈ ಭಾರತ ಎಂದು ಕೂಗಿ ಒಗ್ಗಟ್ಟು ಪ್ರದರ್ಶಿಸಿದರು.
ಅಯೋಧ್ಯೆಯಿಂದ ಹೊಸಪೇಟೆಗೆ ಬಂದ ಅಯೋಧ್ಯಾ ಧಾಮ ರೈಲಿನ ಪ್ರಯಾಣಿಕರೆಲ್ಲ ರೈಲಿನಿಂದ ಕೆಳಗಿಳಿದು ಗುರುವಾರ ನಡೆದ ಘಟನೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಸ್ನೇಹಕ್ಕೂ ಸಿದ್ಧ... ಸಮರಕ್ಕೂ ಬದ್ಧ, ಮನಸ್ಸು ಮಾಡಿದರೆ ಇಡೀ ಜಗತ್ತನ್ನೇ ಕೈವಶ ಮಾಡಿಕೊಳ್ಳುವ ಶಕ್ತಿ ಭಾರತ ಯುವಶಕ್ತಿಗೆ ಇದೆ ಎಂದು ಘೋಷಣೆ ಮೊಳಗಿಸಿದರು.ಗುರುವಾರದ ಘಟನೆ ಹಿನ್ನೆಲೆಯಲ್ಲಿ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ರೈಲ್ವೆ ಪೊಲೀಸರ ಜೊತೆ ಸ್ಥಳೀಯ ಪೊಲೀಸರು, ಹಿರಿಯ ಅಧಿಕಾರಿಗಳು ಇದ್ದರು. ರೈಲಿನಲ್ಲೂ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರೈಲಿನಲ್ಲಿ ಬಂದ ರಾಮ ಭಕ್ತರು ರೈಲಿನಿಂದ ಕೆಳಕ್ಕಿಳಿದು, ಗರ್ವ ಕೀ ಮಾತಾ, ಭಾರತ್ ಕೀ ಮಾತಾ ಅಂತ ಜಯಘೋಷ ಮೊಳಗಿಸಿದರು. ಜೈ ಮೋದಿ, ಜೈ, ಜೈ ಮೋದಿ ಎಂದು ರಾಮಭಕ್ತರು ಜಯಘೋಷ ಮೊಳಗಿಸಿದರು.
ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಹೊಸಪೇಟೆಯ ರೈಲು ನಿಲ್ದಾಣದಲ್ಲಿ ರೈಲು ನಿಂತಿತ್ತು. ಬಳಿಕ ಪೊಲೀಸ್ ಬಂದೋಬಸ್ತ್ ನಲ್ಲಿ ಅಯೋಧ್ಯೆ ಧಾಮ ರೈಲು ತೆರಳಿತು.ಆಕ್ಷೇಪಾರ್ಹ ಪದ ಬಳಕೆ: ವ್ಯಕ್ತಿ ವಶಕ್ಕೆ
ಹೊಸಪೇಟೆ: ಅಯೋಧ್ಯೆಯಿಂದ ಮೈಸೂರಿಗೆ ತೆರಳುವ ರೈಲಿನ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಶೇಕ್‌ಸಾಬ್ ವಲಿ(58) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಸಿ ಗ್ರೂಪ್ ನೌಕರನಾಗಿದ್ದಾನೆ ಎಂದು ತಿಳಿದುಬಂದಿದೆ. ಒಂದು ಫ್ಲಾರ್ಟ್ ಫಾರಂನಿಂದ ಇನ್ನೊಂದು ಫ್ಲಾರ್ಟ್ ಫಾರಂನಲ್ಲಿ ನಿಂತಿದ್ದ ರೈಲು ಏರಲು ಅಯೋಧ್ಯೆಯಿಂದ ಬಂದ ರೈಲು ಏರಲು ಹೊರಟಾಗ ಈ ಅಚಾತುರ್ಯ ನಡೆದಿದೆ. ಈ ವೇಳೆ ಶ್ರೀರಾಮ ಭಕ್ತರು ಪ್ರತಿಭಟನೆ ನಡೆಸಿ ಖಂಡಿಸಿದ್ದರು. ವಿಜಯನಗರ ಎಸ್ಪಿ ಶ್ರೀಹರಿಬಾಬು ಅವರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಈ ಕುರಿತು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿಗೆ ತೆರಳುವ ರೈಲು 3ನೇ ಪ್ಲಾಟ್ ಫಾರಂನಲ್ಲಿ ನಿಂತಿದ್ದು, ಒಂದನೇ ಪ್ಲಾಟ್ ಫಾರಂಗೆ ಅಯೋಧ್ಯೆಯಿಂದ ಬಂದಿದ್ದ ರೈಲು ನಿಂತಿತ್ತು. ಮೇಲ್ಸೇತುವೆ ಮೂಲಕ ಹೋದರೆ ರೈಲು ಹಿಡಿಯುವುದು ಕಷ್ಟವಾಗುತ್ತದೆ ಎಂದು ಅಯೋಧ್ಯೆ ರೈಲಿನ ಮೂಲಕ ಹೋಗಲು ಈ ವ್ಯಕ್ತಿ ಯತ್ನಿಸಿದ್ದಾನೆ. ಆಗ ರೈಲಿನಲ್ಲಿದ್ದ ಹಿಂದೂಪರ ಕಾರ್ಯಕರ್ತರ ಜತೆಗೆ ವಾಗ್ವಾದವಾಗಿದೆ. ಅಲ್ಲದೇ ಆ ವ್ಯಕ್ತಿಯು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಅದನ್ನು ಖಂಡಿಸಿ ಶ್ರೀರಾಮಭಕ್ತರು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಮಧ್ಯೆಪ್ರವೇಶಿಸಿ ಪ್ರಕರಣವನ್ನು ತಿಳಿಗೊಳಿಸಿದ್ದರು.