ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶ್ರೀ ಹನುಮ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ಸಾವಿರಾರು ಜನರು ಶ್ರೀರಾಮನಿಗೆ ಜಯಘೋಷಗಳನ್ನು ಕೂಗುತ್ತಾ ಮೆರವಣಿಗೆಗೆ ವಿಶೇಷ ಮೆರಗು ತಂದರು.ಶ್ರೀ ಹನುಮ ಜಯಂತ್ಯುತ್ಸವ ಪ್ರಯುಕ್ತ ಪಟ್ಟಣವನ್ನು ತಳಿರು, ತೋರಣ ಹಾಗೂ ಕೇಸರಿ ಧ್ವಜಗಳಿಂದ ಸಿಂಗರಿಸಿ, ಮೈಸೂರು ದಸರಾದಂತೆ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಪ್ರಥಮ ವರ್ಷದ ಜಯಂತ್ಯುತ್ಸವ ಬಹಳ ಅದ್ಧೂರಿಯಾಗಿ ನಡೆಯಿತು. ಹನುಮ ಜಯಂತಿ ಅಚರಣಾ ಸೇವಾ ಸಮಿತಿ ವತಿಯಿಂದ ಶನಿವಾರ ಹನುಮ ಜಯಂತ್ಯುತ್ಸವ ಅಂಗವಾಗಿ ಸಂಪ್ರದಾಯದ ಆಚರಣೆಯಂತೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಿದ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಮುಂಭಾಗದಿಂದ ಪ್ರಾರಂಭವಾದ ಶ್ರೀ ವೀರ ಹನುಮಾನ್ ವೈಭವದ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತ, ರಿವರ್ ಬ್ಯಾಂಕ್ ರಸ್ತೆ, ಚೆನ್ನಾಂಬಿಕ ವೃತ್ತದ ಪೇಟೆ ಮುಖ್ಯ ರಸ್ತೆಯ ಮೂಲಕ ಡಾ. ಬಿ.ಆರ್.ಅಂಬೇಡ್ಕರ್ ವೃತ್ತ, ಡಾ. ಬಿ.ಆರ್.ಅಂಬೇಡ್ಕರ್ ನಗರ, ಹೌಸಿಂಗ್ ಬೋರ್ಡ್ ಮೂಲಕ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಶ್ರೀ ರಾಮ ಹಾಗೂ ಆಂಜನೇಯನ ಮೂರ್ತಿಗಳ ಸ್ತಬ್ಧ ಚಿತ್ರಗಳು, ವಾದ್ಯಘೋಷಗಳು ಹಾಗೂ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಶ್ರೀರಾಮನ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಮಜ್ಜಿಗೆ ನೀಡಿ ಸತ್ಕರಿಸಿದರು, ರಿವರ್ ಬ್ಯಾಂಕ್ ರಸ್ತೆಯಲ್ಲಿ ಟಿಪ್ಪು ಸುಲ್ತಾನ್ ಸಂಘದ ಸದಸ್ಯರು ಕುಡಿಯುವ ನೀರು ಹಾಗೂ ತಂಪು ಪಾನೀಯ ನೀಡಿ ಗೌರವಿಸಿದರು. ರಿವರ್ ಬ್ಯಾಂಕ್ ರಸ್ತೆಯಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಹಾಗೂ ವಿದಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಮೆರವಣಿಗೆಯ ಜತೆಯಲ್ಲಿ ಸಾಗುತ್ತಾ ಜೈ ಶ್ರೀರಾಮ್ ಘೋಷಣೆ ಕೂಗಿದರು.ನಗರದ ಗಣ್ಯರು, ಹಿರಿಯರು, ಪುರಸಭಾಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶ್ರೀ ಹನುಮ ಜಯಂತಿ ಆಚರಣೆ ಸೇವಾ ಸಮಿತಿಯ ರಾಘವೇಂದ್ರ, ಪ್ರದೀಪ್, ಹೇಮಂತ್, ಮುತ್ತುರಾಜ್, ದೀಪಕ್, ತಟ್ಟೆಬಾಬು, ಗೋವಿಂದಾ, ಭರತ್, ಕಡುವಿನಕೋಟೆಯ ನಿದರ್ಶನ್, ದರ್ಶನ್, ಲೋಕೇಶ್, ದಯಾನಂದ, ಮನೋಹರ್, ಚೇತನ್ ಮೂಡಲಹಿಪ್ಪೆ, ಅಭಿಲಾಷ್, ಶ್ರೀನಿವಾಸ, ಗುಂಡ, ವಿವಿಧ ಸಂಘಟನೆಗಳ ಮುಖಂಡರು, ಇತರರು ಇದ್ದರು.
-------