ಮೂಡುಬಿದಿರೆಯಲ್ಲಿ ರಾಮ ಜಪ, ಕಥಾ, ಉತ್ಸವ

| Published : Jan 22 2024, 02:15 AM IST

ಸಾರಾಂಶ

ಅಯೋಧ್ಯೆಯಲ್ಲಿ ಜ.೨೨ರಂದು ರಾಮ ಪ್ರಾಣಪ್ರತಿಷ್ಠಾ ಸಂಭ್ರಮ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಪೇಟೆಯ ತುಂಬೆಲ್ಲ ರಾಮ ಸಂಭ್ರಮ ಮನೆ ಮಾಡಿದೆ. ದೇವಾಲಯಗಳು ವಿದ್ಯುತ್‌ ದೀಪಾಲಂಕೃತಗೊಂಡಿದ್ದು, ಪರಿಸರ ಕೇಸರಿ ಧ್ವಜ, ಪತಾಕೆ, ಫ್ಲೆಕ್ಸುಗಳಿಂದ ರಾರಾಜಿಸುತ್ತಿದೆ. ಕಳೆದೆರಡು ವಾರಗಳಿಂದಲೇ ಪೇಟೆಯ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಪರಿಸರದಲ್ಲಿ ರಾಮ ಸಂಭ್ರಮ ಗರಿಗೆದರಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುಬಿದಿರೆಯ ಪೇಟೆಯ ತುಂಬೆಲ್ಲ ರಾಮ ಸಂಭ್ರಮ ಮನೆ ಮಾಡಿದೆ. ದೇವಾಲಯಗಳು ವಿದ್ಯುತ್‌ ದೀಪಾಲಂಕೃತಗೊಂಡಿದ್ದು, ಪರಿಸರ ಕೇಸರಿ ಧ್ವಜ, ಪತಾಕೆ, ಫ್ಲೆಕ್ಸುಗಳಿಂದ ರಾರಾಜಿಸುತ್ತಿದೆ.

ಕಳೆದೆರಡು ವಾರಗಳಿಂದಲೇ ಪೇಟೆಯ ಶ್ರೀ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಪರಿಸರದಲ್ಲಿ ರಾಮ ಸಂಭ್ರಮ ಗರಿಗೆದರಿದೆ.ಜ.7ರಂದು ದೇವಸ್ಥಾನದಿಂದ ಅಭಿನವ ಅಯೋಧ್ಯೆ ಖ್ಯಾತಿಯ ಅಶ್ವತ್ಥಪುರಕ್ಕೆ ಶ್ರೀ ರಾಮ ನಾಮ ಸಂಕೀರ್ತನೆ ನಡೆದಿತ್ತು. ಜ.8ರಿಂದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಜೆ ಪ್ರತೀ ದಿನ ರಾಮ ನಾಮ ಜಪ ನಡೆದಿದ್ದು, ಭಾನುವಾರ ಬೆಳಗ್ಗೆಯಿಂದ ಸಂಜೆ ವರೆಗೆ ಅಖಂಡ ರಾಮಜಪದೊಂದಿಗೆ ಸಮಾಪನ ಕಂಡಿದೆ. ಜ.15ರಿಂದ ಉಡುಪಿಯ ವಿದ್ವಾನ್ ಹರಿಪ್ರಸಾದ್ ಶರ್ಮ ಅವರಿಂದ ರಾಮಕಥಾ ನಡೆದಿದ್ದು, ಭಾನುವಾರ ಸಮಾಪನಗೊಂಡಿದೆ.ಈ ನಡುವೆ ಅಯೋಧ್ಯೆ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ತೆರಳಿರುವ ಜೈನ ಮಠದ ಭಟ್ಟಾರಕ ಶ್ರೀಗಳು ಜ.18ರಂದು ಮೂಡುಬಿದಿರೆಯ ಕರಸೇವಕರನ್ನು ಮಠದಲ್ಲಿ ಗೌರವಿಸಿದ್ದಾರೆ.ಜ.22ರಂದು ಮಧ್ಯಾಹ್ನ ವೆಂಕಟರಮಣ ದೇವರಿಗೆ ವಿಶೇಷ ಪೂಜೆ, ಬಳಿಕ ಶ್ರೀ ಹನುಮಂತ ದೇವಸ್ಥಾನಕ್ಕೆ ಭಜಕರಿಂದ ನದರು ಕಾಣಿಕೆ, ಅಲ್ಲಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಸಾರ್ವಜನಿಕ ನೆಲೆಯಲ್ಲಿ ಮಹಾ ಅನ್ನಪ್ರಸಾದ ವಿತರಣೆ ಜರುಗಲಿದೆ.* ಪ್ರಧಾನಿಗಾಗಿ ರಂಗಪೂಜೆ!ಮೂಡುಬಿದಿರೆಯ ಕಾರಣೀಕ ಸೀಯಾಳಾಭಿಷೇಕ ಪ್ರಿಯ ಹನುಮಂತ ದೇವಸ್ಥಾನದಲ್ಲಿ ರಾತ್ರಿ ವಿಶೇಷ 9 ರಂಗಪೂಜೆ ನಡೆಯಲಿದೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸಿಗಾಗಿ ರಂಗಪೂಜೆ ಸೇವೆ ನಿಗದಿಯಾಗಿದೆ. ಕರಸೇವಕರಿಂದ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದಲ್ಲಿ ಹೂವಿನಪೂಜೆ ಇದೆ.ಸಂಜೆ ಮಹಿಳಾ ಮಂಡಳಿಯವರಿಂದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಜನೆ, ಬಳಿಕ ಕಾರ್ಕಳದ ಆದರ್ಶ ಗೋಖಲೆ ಅವರಿಂದ ಉಪನ್ಯಾಸ, ಕರ ಸೇವಕರಿಗೆ ಪ್ರಸಾದ ಕಾರ್ಯಕ್ರಮವಿದೆ.* ದೊಡ್ಮನೆ ಈಶ್ವರ ದೇವಸ್ಥಾನ: ಈಶ್ವರ ದೇವಸ್ಥಾನದಲ್ಲಿ ಮಂದಿರ ಲೋಕಾರ್ಪಣೆಯ ಸಂಭ್ರಮದ ಅಂಗವಾಗಿ ಸಂಜೆ ಶ್ರೀ ರಾಮತಾರಕ ಮಂತ್ರ ಯಜ್ಞ, ದೀಪಾರಾಧನೆ, ರುದ್ರಾಭಿಷೇಕ, ಮಹಾಪೂಜೆ, ಬಂಡಿ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ಅಶ್ವತ್ಥಪುರದಲ್ಲಿ ಸಂಭ್ರಮೋತ್ಸವ:ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಭಾನುವಾರ ಏಕಾಹ ಶ್ರೀ ರಾಮನಾಮ ಪಠಣ ಸೋಮವಾರ ಮುಂಜಾನೆ ವರೆಗೆ ನಡೆಯಲಿದೆ. ನಂತರ ವಿವಿಧ ಮಂಡಳಿಗಳ ಭಜನೆ, ರಾತ್ರಿ ದೀಪೋತ್ಸವ, ಪಲ್ಲಕ್ಕಿ ಉತ್ಸವ, ವಿಶೇಷ ಪೂಜೆ ನಡೆಯಲಿದೆ.ಪುತ್ತಿಗೆ ಎಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ಸಹಿತ ವಿಶೇಷ ಪೂಜೆ ನಡೆಯಲಿದೆ.