ರಾಮ ರಾಜ್ಯಕ್ಕೆ ಕಾಯ್ದೆ ಬೇಕಾಗಿಲ್ಲ

| Published : Jan 25 2024, 02:01 AM IST

ಸಾರಾಂಶ

ರಾಮ ರಾಜ್ಯವಾಗಲು ಕಾನೂನು ಕಾಯ್ದೆಗಳು ಬೇಕಾಗಿಲ್ಲ. ರಾಮನಲ್ಲಿದ್ದ ಗುಣ ಪ್ರತಿಯೊಬ್ಬರು ಅಳವಡಿಸಿಕೊಂಡರೆ ಅದುವೆ ನಿಜವಾದ ರಾಮ ರಾಜ್ಯ.

ಚಿತ್ರದುರ್ಗ: ರಾಮ ರಾಜ್ಯವಾಗಲು ಕಾನೂನು ಕಾಯ್ದೆಗಳು ಬೇಕಾಗಿಲ್ಲ. ರಾಮನಲ್ಲಿದ್ದ ಗುಣ ಪ್ರತಿಯೊಬ್ಬರು ಅಳವಡಿಸಿಕೊಂಡರೆ ಅದುವೆ ನಿಜವಾದ ರಾಮ ರಾಜ್ಯ ಎಂದು ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠದ ಅಧ್ಯಾಪಕ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಹೇಳಿದರು.

ಹರಿವಾಯು ಸ್ತುತಿ ಪಾರಾಯಣದ 23ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಹರಿದಾಸ ಹಬ್ಬದ 2ನೇ ದಿನದಂದು ಪ್ರವಚನ ನೀಡಿದ ಅವರು, ರಾಮನ ಸಾಲು ಸಾಲು ಪ್ರಶ್ನೆಗಳಿಗೆ ವಿಶ್ವಾಮಿತ್ರ ತಾಳ್ಮೆಗೆಡಲಿಲ್ಲ.

ಪ್ರಾಮಾಣಿಕ ಪ್ರಯತ್ನವಿದ್ದರೆ ದೈವವೂ ಸಹಾಯ ಮಾಡುತ್ತದೆ. ಶ್ರೀರಾಮಚಂದ್ರ ರಾಜನಾಗಿದ್ದರೂ ಯಾರ ಮೇಲೂ ದರ್ಪ ತೋರಲಿಲ್ಲ. ತ್ಯಾಗದ ಗುಣವಿತ್ತು. ಗುರುಗಳ ಜೊತೆ ಕಾಡಿನಲ್ಲಿ ಗೆಡ್ಡೆ ಗೆಣಸು ತಿಂದಿದ್ದುಂಟು. ರಾಮನ ಪರಿಚಯವಾಗಬೇಕಾದರೆ ರಾಮಾಯಣ ಓದಬೇಕು. ದೇಶದ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಮಥುರ, ಜಗನ್ನಾಥಪುರಿ ಇನ್ನು ಮುಂತಾದ ಕಡೆ ಹೋಗಬೇಕು. ನಮ್ಮೂರಲ್ಲಿ ನಾವೇ ಅಧಿಪತಿಗಳಾಗಬಾರದು ಎಂದು ತಿಳಿಸಿದರು.

ಹಾಲು, ಮೊಸರು, ಬೆಣ್ಣೆ, ತುಪ್ಪ, ಗೋಮೂತ್ರ ಇವುಗಳು ಎಂದಿಗೂ ವಿಷವಾಗುವುದಿಲ್ಲ. ಸಂಸ್ಕೃತಿ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಕಲಿಸಬೇಕು. ದೇಶದ ಪೂರ್ವ ಇತಿಹಾಸ ಗೊತ್ತಿಲ್ಲದವರನ್ನು ಯಾರು ನಾಶ ಮಾಡುವುದು ಬೇಡ. ಅವರೆ ನಾಶವಾಗುತ್ತಾರೆ. ಬಾಲ್ಯದಲ್ಲಿ ಒಂದು ಬಾರಿ ಕಲಿತದ್ದನ್ನು ಜೀವನವಿಡಿ ನೆನಪಿಟ್ಟುಕೊಳ್ಳುವಂತ ಶಿಕ್ಷಣ ಬೇಕು. ಆದರೆ ಇಂದಿನ ಶಿಕ್ಷಣ ಶಿಕ್ಷೆ ಎನ್ನುವಂತಾಗಿದೆ. ಮಕ್ಕಳಿಗೆ ಪೋಷಕರು ಕಣ್ಗಾವಲಾಗಬೇಕೆ ವಿನಃ ಕೈಗಾವಲಾಗಬಾರದು ಎಂದು ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಹೇಳಿದರು.