ಈದ್ಗಾದಲ್ಲಿ ರಂಜಾನ್‌ ಸಾಮೂಹಿಕ ಪ್ರಾರ್ಥನೆ

| Published : Apr 01 2025, 12:45 AM IST

ಸಾರಾಂಶ

ಸಾಮೂಹಿಕ ಪ್ರಾರ್ಥನೆ ನಂತರ ಅಲಿರಜ ಮೌಲಾನ ನಡೆಸಿಕೊಟ್ಟ ಪ್ರವಚನದಲ್ಲಿ ಫಿತರ್(ಉಪವಾಸ), ಜಕಾತ್(ದಾನ ಧರ್ಮ) ಬಗ್ಗೆ ತಿಳಿಸಿಕೊಟ್ಟರು. ಉಳ್ಳವರು ಬಡವರಿಗೆ ದಾನವನ್ನು ಮಾಡಿ, ಅವರು ಸಹ ಹಬ್ಬವನ್ನು ನೆಮ್ಮದಿ ಮತ್ತು ನಿಶ್ಚಿಂತೆಯಿಂದ ಆಚರಣೆ ಮಾಡುವಂತೆ ಅವಕಾಶ ಕಲ್ಪಿಸಬೇಕು. ಫಿತರ್ ಆಚರಣೆಯಿಂದ ಬಡವರ ಸಂತೋಷದಲ್ಲಿ ದೇವರನ್ನು ಕಾಣಬಹುದು ಮತ್ತು ಅಲ್ಲಾಹ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಅರಕಲಗೂಡು ರಸ್ತೆಯ ಈದ್ಗಾ ಮೈದಾನದಲ್ಲಿ ಈದ್-ಉಲ್-ಫಿತರ್ (ಪವಿತ್ರ ರಂಜಾನ್ ಹಬ್ಬ) ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣದ ಈದ್ಗಾ ಮೈದಾನದಲ್ಲಿ ಸೋಮವಾರ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ನಂತರ ಅಲಿರಜ ಮೌಲಾನ ನಡೆಸಿಕೊಟ್ಟ ಪ್ರವಚನದಲ್ಲಿ ಫಿತರ್(ಉಪವಾಸ), ಜಕಾತ್(ದಾನ ಧರ್ಮ) ಬಗ್ಗೆ ತಿಳಿಸಿಕೊಟ್ಟರು. ಉಳ್ಳವರು ಬಡವರಿಗೆ ದಾನವನ್ನು ಮಾಡಿ, ಅವರು ಸಹ ಹಬ್ಬವನ್ನು ನೆಮ್ಮದಿ ಮತ್ತು ನಿಶ್ಚಿಂತೆಯಿಂದ ಆಚರಣೆ ಮಾಡುವಂತೆ ಅವಕಾಶ ಕಲ್ಪಿಸಬೇಕು. ಫಿತರ್ ಆಚರಣೆಯಿಂದ ಬಡವರ ಸಂತೋಷದಲ್ಲಿ ದೇವರನ್ನು ಕಾಣಬಹುದು ಮತ್ತು ಅಲ್ಲಾಹ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಸಿದರು.

ಖ್ಯಾತ ಮೆಕ್ಯಾನಿಕ್ ಮುಜಾಹಿದ್ ಖಾನ್ ಮಾಧ್ಯಮದ ಜತೆ ಮಾತನಾಡಿ, ಮುಸ್ಲೀಮರ ಪವಿತ್ರ ಹಾಗೂ ದೊಡ್ಡ ಹಬ್ಬಗಳಲ್ಲಿ ರಂಜಾನ್ ಮೊದಲನೆಯದು ಮತ್ತು ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಪ್ರವಾದಿ ಮೊಹಮ್ಮದ್ ಈ ತಿಂಗಳು ಪವಿತ್ರ ಕುರಾನ್‌ನ ಬಹಿರಂಗ ಪಡಿಸಿದರು ಎಂದು ನಂಬಲಾಗಿದೆ. ಈ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ ದೇವರ ಜತೆಯಲ್ಲಿ ನಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ ಮತ್ತು ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತದೆ ಎಂಬ ನಂಬಿಕೆ ನಮ್ಮಲಿದೆ. ಈ ತಿಂಗಳಲ್ಲಿ ಉಪವಾಸ ಮಾಡಿದ್ರೆ ಸಂಕಷ್ಟಗಳು ಕಡಿಮೆಯಾಗುತ್ತವೆ ಹಾಗೂ ಬಡವರಿಗೆ ದಾನ, ಧರ್ಮ ಮಾಡುವುದು ಮತ್ತು ಹಸಿದವರಿಗೆ ಆಹಾರ ನೀಡುವಂಥ ಪುಣ್ಯ ಕಾರ್ಯ ಮಾಡುವ ಮೂಲಕ ಪವಿತ್ರ ಈದ್-ಉಲ್-ಫಿತರ್ ಹಬ್ಬವನ್ನು ಬಾಂಧವ್ಯದ ಜತೆಗೆ ಸಂಭ್ರಮದಿಂದ ಆಚರಣೆ ಮಾಡುತ್ತೇವೆ ಎಂದರು.

ಪ್ರಾರ್ಥನೆಯಲ್ಲಿ ಜಬೀರ್, ಇಮ್ರಾನ್, ಅಹಮದ್, ರಿಯಾಜ್, ಮಹಮದ್ ಖಾಲೀದ್, ನವಾಬ್ ಖಾನ್, ಇಲಿಯಾಜ್ ಹಾಗೂ ಇತರರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.