ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವು ಅತ್ಯಂತ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಪಟ್ಟಣದಲ್ಲಿ ಪಟ್ಟಣದ ಅಂಜುಮನ್-ಏ-ಇಸ್ಲಾಂ ಸಮಿತಿ ಆಶ್ರಯದಲ್ಲಿ ಶಾಂತಿಯುತವಾಗಿ ನೆರವೇರಿತು.
ಬ್ಯಾಡಗಿ: ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವು ಅತ್ಯಂತ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಪಟ್ಟಣದಲ್ಲಿ ಪಟ್ಟಣದ ಅಂಜುಮನ್-ಏ-ಇಸ್ಲಾಂ ಸಮಿತಿ ಆಶ್ರಯದಲ್ಲಿ ಶಾಂತಿಯುತವಾಗಿ ನೆರವೇರಿತು.
ಕಳೆದ 30 ದಿನಗಳಿಂದ ಕಟ್ಟುನಿಟ್ಟಾಗಿ ಆಚರಿಸಿಕೊಂಡು ಬಂದಿದ್ದ ಉಪವಾಸ ವ್ರತವನ್ನು ಎರಡು ದಿನದ ಹಿಂದಷ್ಟೇ ಪೂರ್ಣಗೊಳಿಸಿದ್ದ ಮಸ್ಲಿಂ ಬಾಂಧವರು, ಮಾ.20ರಂದು ಸಂಜೆ ಚಂದ್ರನ ದರ್ಶನವಾದ ಬಳಿಕ ಶನಿವಾರ ರಂಜಾನ್ ಹಬ್ಬದಾಚರಣೆಯಲ್ಲಿ ತೊಡಗಿದರು.ಹಬ್ಬದ ಅಂಗವಾಗಿ ಶನಿವಾರ ಮುಂಜಾನೆ 10 ಗಂಟೆಗೆ ಪಟ್ಟಣದ ರಟ್ಟೀಹಳ್ಳಿ ರಸ್ತೆಯಲ್ಲಿರುವ ಈದಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಲೋಕ ಕಲ್ಯಾಣಕ್ಕಾಗಿ ಧಾರ್ಮಿಕ ಸಂದೇಶಗಳು: ಈದಗಾ ಮೈದಾನಕ್ಕೆ ತೆರಳಿದ ಮಾಜಿ ಶಾಸಕ ಸುರೇಶಗೌಡ ಪಾಟೀಲ ಮುಸ್ಲಿಂ ಬಾಂಧವರಿಗೆ ಶುಭಾಶಯಗಳನ್ನು ಕೋರಿದರು. ಬಳಿಕ ಮಾತನಾಡಿದ ಅವರು ಮನುಕುಲದ ಶ್ರೇಯೋಭಿವೃದ್ಧಿಗೆ ಸಾಧು, ಸಂತರ ರೂಪದಲ್ಲಿ ಪರಮಾತ್ಮ ಧರೆಗಿಳಿದು ಧಾರ್ಮಿಕ ಸಂದೇಶಗಳ ಸಾರುವ ಮೂಲಕ ಲೋಕ ಕಲ್ಯಾಣಕ್ಕಾಗಿ ಮಾನವ ಹಿತ ಕಾಪಾಡುತ್ತಾನೆ, ಆದರೆ ಇದು ಮಾನವನ ಸ್ಪರ್ಷ, ದರ್ಶನ ಮತ್ತು ಶ್ರವಣಕ್ಕೆ ಸಿಗದಿದ್ದರೂ ಇಂತಹದ್ದೊಂದು ಪರಂಪರೆ ಎಲ್ಲಾ ಧರ್ಮಗಳಲ್ಲಿಯೂ ನಡೆದುಕೊಂಡು ಬಂದಿದೆ ಎಂದರು.ತಪ್ಪು ಸಂದೇಶಗಳು ಹರಡದಂತೆ ನೋಡಿಕೊಳ್ಳಿ: ಗ್ಯಾರಂಟಿ ಯೋಜನೆಗಳರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ,ಮೋಸ ವಂಚನೆ ವ್ಯಭಿಚಾರ ಇವುಗಳಿಂದ ದೂರವಿರುವುದು, ನೆರೆಹೊರೆಯವರನ್ನು ಬೆಳಕು ನೆರಳಿನಂತೆ ರಕ್ಷಿಸುವುದು, ಕೋಪ ಗೆದ್ದು ಬಲಶಾಲಿಯಾಗುವುದು, ಮಾನವ ಜನಾಂಗಕ್ಕೆ ಕರುಣೆ ತೋರಿ ಕೃತಜ್ಞರಾಗುವಂತೆ ಖುರಾನ್ ಗ್ರಂಥದಲ್ಲಿ ಉಲ್ಲೆಖಿಸಲಾಗಿದೆ. ತನ್ನಲ್ಲಿದ್ದ ಪ್ರಸಾದದಲ್ಲಿ ಹಸಿದವರ ಹಸಿವು ನೀಗಿಸುವುದು, ಇಂತಹ ಮಾನವೀಯ ಮೌಲ್ಯಗಳನ್ನು ತುಂಬಿಕೊಂಡಿರುವ ಇಸ್ಲಾಂ ಧರ್ಮಕ್ಕೆ ಅಪಚಾರ ಬರುವಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ, ಇದರಿಂದ ಮುಸ್ಲಿಂ ಸಮುದಾಯದ ವಿರುದ್ಧ ವಿಶ್ವದಾದ್ಯಂತ ಒಂದು ತಪ್ಪು ಸಂದೇಶ ರವಾನೆಯಾಗುತ್ತಿದ್ದು ಇದನ್ನು ಇನ್ನಷ್ಟು ಹರಡದಂತೆ ಎಚ್ಚರಿಕೆ ವಹಿಸುವಂತೆ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಂಜುಮನ್ -ಎ-ಇಸ್ಲಾಂ ಪದಾಧಿಕಾರಿಗಳು ಸೇರಿದಂತೆ ಮುಸ್ಲಿಂ ಸಮಾಜ ಬಾಂಧವರು ಉಪಸ್ಥಿತರಿದ್ದರು.