ಸಾರಾಂಶ
ಈದ್ಗಾ ಮೈದಾನಕ್ಕೆ ಆಗಮಿಸಿದ್ದ ಎಲ್ಲರಿಗೂ ತಂಪು ಪಾನೀಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ಮೈಸೂರು
ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ಈದ್ಗಾ ಮೈದಾನಗಳಲ್ಲಿ ಸೋಮವಾರ ಸಾಮೂಹಿಕ ಪ್ರಾರ್ಥನೆ (ನಮಾಜ್) ಸಲ್ಲಿಸುವ ಮೂಲಕ ಆಚರಿಸಿದರು.ಒಂದು ತಿಂಗಳ ಉಪವಾಸದ ನಂತರ ಭಾನುವಾರ ರಾತ್ರಿ ಚಂದ್ರ ದರ್ಶನವಾದ ಕಾರಣ ನಿಯಮದಂತೆ ಸೋಮವಾರ ಬೆಳಗ್ಗೆ ರಂಜಾನ್ ಹಬ್ಬದ ಸಾಮೂಹಿಕ ನಮಾಜ್ ಸಲ್ಲಿಸಲು ಇಸ್ಲಾಂ ಧರ್ಮಗುರುಗಳು ನಿರ್ಧರಿಸಿದ್ದರು. ಅದರಂತೆ ಮೈಸೂರಿನ ತಿಲಕ್ ನಗರದ ಈದ್ಗಾ, ರಾಜೀವ್ ನಗರ ಮತ್ತು ಗೌಸಿಯಾನಗರದ ಈದ್ಗಾ ಮೈದಾನಗಳಲ್ಲಿ ಈದ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಸಾನಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ನಮಾಜ್ ಸಲ್ಲಿಸಿದ ಪರಸ್ಪರ ಶುಭ ಕೋರಿದರು. ಇದೇ ವೇಳೆ ಮೈಸೂರಿನ ಸರ್ಖಾಜಿ ಮಹಮ್ಮದ್ ಉಸ್ಮಾನ್ ಷರೀಫ್ ಅವರು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಂದೇಶ ನೀಡಿದರು.ಈ ವೇಳೆ ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಸಹ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಮೈಸೂರಿನ ಸರ್ಖಾಜಿ ಮಹಮ್ಮದ್ ಉಸ್ಮಾನ್ ಷರೀಫ್ ಮತ್ತು ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು. ಮುಖಂಡರಾದ ಸೊಹೇಲ್ ಬೇಗ್, ಟಿಪ್ಪು ತೌಸಿಫ್ ಮೊದಲಾದವರು ಇದ್ದರು. ಗೌಸಿಯಾನಗರದಲ್ಲಿ ನಮಾಜ್ಗೌಸಿಯಾನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ನಮಾಜ್ ನಲ್ಲಿ 5 ಸಾವಿರಕ್ಕೂ ಹೆಚ್ಚಿನ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಮುಫ್ತಿ ಸಜ್ಜಾದ್ ಹುಸೇನ್ ವಿಶೇಷ ಪ್ರಾರ್ಥನೆಯ ನೇತೃತ್ವ ವಹಿಸಿ, ಜಗತ್ತಿನಲ್ಲಿ ಮತ್ತು ವಿಶೇಷವಾಗಿ ಭಾರತದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು.ಈದ್ಗಾ ಮೈದಾನಕ್ಕೆ ಆಗಮಿಸಿದ್ದ ಎಲ್ಲರಿಗೂ ತಂಪು ಪಾನೀಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಜಮಾತ್ ರಝಾಯೇ ಮುಸ್ತಫಾ ಮದ್ರಸಾದ ನೂರಾರು ಸ್ವಯಂ ಸೇವಕರು ನಮಾಜ್ ಸಂದರ್ಭದಲ್ಲಿ ಯಾವುದೇ ನೂಕು ನುಗ್ಗಲು ಗೊಂದಲ ಉಂಟಾಗದಂತೆ ಜಾಗ್ರತೆ ವಹಿಸಿದ್ದರು.ನಗರ ಪಾಲಿಕೆ ಮಾಜಿ ಸದಸ್ಯ ಕಮಾಲ್ ಪಾಷ, ಜಮಾತೆ ರಝಾ ಮುಸ್ತಫಾ ಅಧ್ಯಕ್ಷ ಷರೀಫ್, ಕಾರ್ಯದರ್ಶಿ ರಫಿ ಅಹಮದ್ ಮೊದಲಾದವರು ಇದ್ದರು.----ಬಾಕ್ಸ್... ಕಪ್ಪು ಪಟ್ಟಿ ಧರಿಸಿ ನಮಾಜ್ರಂಜಾನ್ ಸಾಮೂಹಿಕ ನಮಾಜ್ ವೇಳೆ ಮುಸ್ಲಿಂ ಬಾಂಧವರು ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಹಲವರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಮಾಜ್ ಮಾಡಿದರು. ಮತ್ತೆ ಕೆಲವರು ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಭಿತ್ತಿಚಿತ್ರಗಳನ್ನು ಹಿಡಿದು ಸಾಂಕೇತಿಕವಾಗಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು.----ಬಾಕ್ಸ್...-- ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್--ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನಗಳು ಹಾಗೂ ವಿವಿಧ ಮಸೀದಿಗಳ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಅಲ್ಲದೆ, ನಗರದೆಲ್ಲಡೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಎಂ. ಮುತ್ತುರಾಜು ಅವರು ನಗರದ ವಿವಿಧ ಪ್ರಾರ್ಥನ ಸ್ಥಳಗಳಿಗೆ ಭೇಟಿ ನೀಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳನ್ನು ಪರಿಶೀಲಿಸಿದರು.