ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣಿ: ರಾಘವೇಂದ್ರ

| Published : Aug 30 2024, 01:02 AM IST

ಸಾರಾಂಶ

ಮೌಲ್ಯಾಧಾರಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ತತ್ವಾದರ್ಶಗಳು ನಮಗೆಲ್ಲರಿಗೂ ಆದರ್ಶವಾಗಿದೆ.

ಶಿರಸಿ: ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ೯೮ನೇ ಜನ್ಮದಿನಾಚರಣೆ ಪ್ರಯುಕ್ತ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಶಿರಸಿಗೆ ಭೇಟಿ ನೀಡಿ, ನಗರದ ಯಲ್ಲಾಪುರ ನಾಕಾದಲ್ಲಿರುವ ರಾಮಕೃಷ್ಣ ಹೆಗಡೆ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ನಂತರ ಮಾತನಾಡಿದ ಅವರು, ದೇಶ ಕಂಡ ಮುತ್ಸದ್ಧಿ, ಮೌಲ್ಯಾಧಾರಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ತತ್ವಾದರ್ಶಗಳು ನಮಗೆಲ್ಲರಿಗೂ ಆದರ್ಶವಾಗಿದೆ. ರಾಮಕೃಷ್ಣ ಹೆಗಡೆ ಅವರು ಸುದೀರ್ಘ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಅಭಿವೃದ್ಧಿಶೀಲ, ಚಿಂತನಾಶೀಲ ರಾಜಕಾರಣಿಗಳ ಕೊರತೆ ಕಾಣುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ನಾವೆಲ್ಲರೂ ಅಳವಸಿಕೊಂಡಾಗ ಮಾತ್ರ ಜಯಂತಿಯಲ್ಲಿ ಪಾಲ್ಗೊಂಡಿರುವುದು ಸಾರ್ಥಕವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಧನಂಜಯ ಸರ್ಜಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್ಟ, ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಪ್ರಮುಖರಾದ ರಾಘವೇಂದ್ರ ಕಾಮತ್ ಮತ್ತಿತರರು ಇದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಧೀಮಂತ

ಮುಂಡಗೋಡ: ಸಾಮಾಜಿಕ ಕಳಕಳಿಯಿಂದ ಮೌಲ್ಯಾಧಾರಿತ ರಾಜಕಾರಣ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ತಿಳಿಸಿದರು.ಗುರುವಾರ ಪಟ್ಟಣದ ಗುರುಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫ ಶಿವಯೋಗಿಗಳ ದೇವಾಲಯ ಸಭಾಂಗಣದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಹಾಗೂ ಹಸಿರು ಸೇನೆಯ ಅಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಜಯಂತಿ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜ ಮತ್ತು ಬಡವರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದ ರಾಮಕೃಷ್ಣ ಹೆಗಡೆ ಅವರು ಸಾಕಷ್ಟು ಅಣೆಕಟ್ಟುಗಳ ನಿರ್ಮಾಣ ಮಾಡಿದರು. ಹಲವಾರು ಜನಪರವಾದ ಯೋಜನೆಗಳನ್ನು ಜಾರಿಗೆ ತಂದ ಧೀಮಂತ ನಾಯಕರಾಗಿದ್ದಾರೆ. ಪ್ರಧಾನಮಂತ್ರಿ ಸ್ಥಾನ ಅಲಂಕರಿಸುವ ಸಾಮರ್ಥ್ಯ ಹೊಂದಿದ್ದ ಅವರಿಗೆ ಕಾರಣಾಂತರಗಳಿಂದ ಆ ಅವಕಾಶ ತಪ್ಪಿತು. ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಇದೇ ಸಂದರ್ಭದಲ್ಲಿ ಮುಂಡಗೋಡ ಪಟ್ಟಣ ಪಂಚಾಯಿತಿಯ ೨೫ ಜನ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ ಅಧ್ಯಕ್ಷತೆ ವಹಿಸಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಸಾಮಾಜಿಕ ಧುರೀಣ ಬಸವರಾಜ ಓಶಿಮಠ, ನಿವೃತ್ತ ಉಪ ವಲಯಾರಣ್ಯಧಿಕಾರಿ ನಾಗರಾಜ ಕಲಾಲ, ಕೇಮಣ್ಣ ಲಮಾಣಿ, ಗೋವಿಂದ ಬೆಂಡ್ಲಗಟ್ಟಿ, ದಯಾನಂದ ಭೋವಿ, ಅಮರೇಶ ಹರಿಜನ, ರಾಮಚಂದ್ರ ಹರಿಜನ, ಜೈತುನಭಿ, ಮಾರ್ಟೀನ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.