ಧಾರವಾಡ:
ಸಮುದಾಯಕ್ಕೆ ಅದರಲ್ಲೂ ಯುವ ಜನಾಂಗಕ್ಕೆ ಉತ್ತಮ ವ್ಯಕ್ತಿತ್ವ ಬೆಳವಣಿಗೆ ಹಾಗೂ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮವು ಫೆ. 20ರಿಂದ 22ರ ವರೆಗೆ ಶ್ರೀರಾಮಕೃಷ್ಣ ಮಂದಿರದ 21ನೇ ವಾರ್ಷಿಕೋತ್ಸವದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಿದೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಶ್ರಮದ ಅಧ್ಯಕ್ಷ ಸ್ವಾಮಿ ವಿಜಯಾನಂದ ಸರಸ್ವತಿ, ಫೆ. 20ರಂದು ಬೆಳಗ್ಗೆ 10ಕ್ಕೆ ಎಲ್‌ಐಸಿ ಸಮೀಪದ ಸರ್ಕಾರಿ ನೌಕರರ ಭವನದಲ್ಲಿ ಯುವ ಸಮ್ಮೇಳನ ನಡೆಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಚಾಲನೆ ನೀಡಲಿದ್ದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿಎಸ್‌ವಿ ಪ್ರಸಾದ, ಉದ್ಯಮಿ ಎಂ.ವಿ. ಕರಮರಿ ಆಗಮಿಸುವರು. ನಿರ್ಭಯತೆ ಮತ್ತು ಯಶಸ್ಸಿನ ಬದುಕು'''''''' ಕುರಿತು ಮಹೇಶ ಮಾಶ್ಯಾಳ ಉಪನ್ಯಾಸ ನೀಡುವರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವಿದೆ. ಬಳಿಕ ಸ್ವಾಮಿ ಸುಮೇಧಾನಂದಜಿ ಮಹಾರಾಜ್ ಅವರಿಂದ ಭಜನೆ ನಡೆಯಲಿದೆ ಎಂದರು.
ಫೆ. 21ರಂದು ಬೆಳಗ್ಗೆ 9.30ಕ್ಕೆ ನೌಕರರ ಭವನದಲ್ಲಿ ಶಿಕ್ಷಕರ ಸಮ್ಮೇಳನ ಜರುಗಲಿದ್ದು, ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸಮ್ಮೇಳನ ಉದ್ಘಾಟಿಸುವರು. ಜ್ಞಾನದ ಮೇಲಿನ ಅಭಿರುಚಿ ಕುರಿತು ಸ್ವಾಮಿ ಮಂಗಳನಾಥಾನಂದಜಿ ಉಪನ್ಯಾಸವಿದೆ. ನಂತರ "ಸದೃಢ ಸಮಾಜಕ್ಕೆ ಶಿಕ್ಷಣ ಮತ್ತು ಶಿಕ್ಷಕನ ಪಾತ್ರ'''''''' ಕುರಿತು ಸ್ವಾಮಿ ನಿರ್ಭಯಾನಂದಜಿ ಸರಸ್ವತಿ ಉಪನ್ಯಾಸ ನೀಡಲಿದ್ದಾರೆ. ಕ್ಲಾಸಿಕ್ ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ ಆಗಮಿಸಲಿದ್ದು, ಸ್ವಾಮಿ ಸುಮೇಧಾನಂದಜಿ ಅವರಿಂದ ಭಜನೆ ನಡೆಯಲಿದೆ ಎಂದು ತಿಳಿಸಿದರು.ಫೆ. 21 ಹಾಗೂ 22ರಂದು ಸಂಜೆ 5ರ ನಂತರ ಆಶ್ರಮದ ಆವರಣದಲ್ಲಿ ವಿವೇಕಾನಂದರ ಸ್ಮರಣೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನಾಂಗ ಭಾಗವಹಿಸಲು ವಿಜಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಮಿ ಬುದ್ಧಿಯೋಗಾನಂದಜಿ, ಅಶೋಕ ಕಾತೆಣ್ಣವರ, ಚಂದ್ರಶೇಖರ ಪಾಟೀಲ ಇದ್ದರು.