ಸಾರಾಂಶ
ಶ್ರೀರಾಮಕೃಷ್ಣ ಪರಮಹಂಸರು, ಮಾತೆ ಶಾರದಾದೇವಿಯವರು, ಸ್ವಾಮಿ ವಿವೇಕಾನಂದರು ಭಾರತೀಯ ಪರಂಪರೆ ಪ್ರತಿಪಾದಿಸುವ ಶ್ರೇಷ್ಠ ಚಿಂತನೆಗಳನ್ನು ಪ್ರಚಾರಗೈಯ್ಯುವ ಪವಿತ್ರ ಉದ್ದೇಶದಿಂದ ಪ್ರಾರಂಭಿಸಿದ ಆಂದೋಲನವೇ ‘ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್.
ಧಾರವಾಡ:
ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಅ. 24ರಿಂದ ಮೂರು ದಿನ ಕರ್ನಾಟಕ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್‌ನ 11ನೇ ವಾರ್ಷಿಕ ಸಮ್ಮೇಳನ ಆಯೋಜಿಸಲಾಗುತ್ತಿದೆ.ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ, ಶ್ರೀರಾಮಕೃಷ್ಣ ಪರಮಹಂಸರು, ಮಾತೆ ಶಾರದಾದೇವಿಯವರು, ಸ್ವಾಮಿ ವಿವೇಕಾನಂದರು ಭಾರತೀಯ ಪರಂಪರೆ ಪ್ರತಿಪಾದಿಸುವ ಶ್ರೇಷ್ಠ ಚಿಂತನೆಗಳನ್ನು ಪ್ರಚಾರಗೈಯ್ಯುವ ಪವಿತ್ರ ಉದ್ದೇಶದಿಂದ ಪ್ರಾರಂಭಿಸಿದ ಆಂದೋಲನವೇ ‘ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್. 2012ರಲ್ಲಿ ಪ್ರಾರಂಭವಾದ ಕರ್ನಾಟಕ ಭಾವಪ್ರಚಾರ ಪರಿಷತ್ ಕಳೆದ 13 ವರ್ಷಗಳಿಂದ ಅಮೂಲ್ಯ ಸೇವೆಗೈಯುತ್ತ ಬಂದಿದೆ ಎಂದರು.
2016ರಲ್ಲಿ ಭಾವಪ್ರಚಾರ ಪರಿಷತ್‌ನ 3ನೇ ಸಮಾವೇಶದ ಕಾರ್ಯಕ್ರಮಗಳನ್ನು ಧಾರವಾಡ ರಾಮಕೃಷ್ಣ-ವಿವೇಕಾನಂದ ಆಶ್ರಮದ ವತಿಯಿಂದ ಆಯೋಜಿಸಲಾಗಿತ್ತು. ಇದೀಗ 11ನೇ ವರ್ಷದ ಆಚರಣೆಯನ್ನು ಧಾರವಾಡದ ಆಶ್ರಮ ಆಯೋಜಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆಶ್ರಮದಿಂದ ಪ್ರಕಟಿಸುತ್ತಿರುವ ‘ನವಚಿಂತನ’ ತ್ರೈಮಾಸಿಕ ಪತ್ರಿಕೆಯ 25ನೇ ವಾರ್ಷಿಕೋತ್ಸವ ಸಂಭ್ರಮ ನಡೆಯಲಿದೆ. ಸಮಾವೇಶದಲ್ಲಿ ಪ್ರವಚನ, ಧ್ಯಾನ, ಸಂಗೀತ, ಭಜನೆ, ಯಕ್ಷಗಾನ, ಹಾಸ್ಯ, ಹೀಗೆ ವೈವಿಧ್ಯಮಯವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.ಅ. 24ರಂದು ಬೆಳಗ್ಗೆ 8.30ಕ್ಕೆ ದಿವ್ಯತ್ರಯರ ಭಾವಚಿತ್ರಗಳ ಮೆರವಣಿಗೆ, ಧ್ವಜಾರೋಹಣ ನಡೆಯಲಿದೆ. ವೀರಶೈವ ಲಿಂಗಾಯತ ಸಭಾಭವನದಲ್ಲಿ ಬೆಳಗ್ಗೆ 11.30ಕ್ಕೆ ಸಮಾವೇಶ ಹಾಗೂ ಯುವ ಸಮಾವೇಶವನ್ನು ರಾಜ್ಯಪಾಲ ಥಾವರಚಂದ ಗೆಹಲೋತ್ ಉದ್ಘಾಟಿಸುವರು. ಸ್ವಾಮಿ ಮುಕ್ತಿದಾನಂದಜಿ
ಮಹಾರಾಜ್ ಸಾನ್ನಿಧ್ಯ ವಹಿಸಲಿದ್ದು ಸ್ಮರಣ ಸಂಚಿಕೆಯನ್ನು ಡಾ. ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಬಿಡುಗಡೆ ಮಾಡುವರು. ಮೂರು ದಿನಗಳ ಸಮಾವೇಶದಲ್ಲಿ ಕರ್ನಾಟಕ ಮತ್ತು ಹೊರರಾಜ್ಯದ ಧರ್ಮ ಗುರುಗಳು, ಚಿಂತಕರು, ವಾಗ್ಮಿಗಳು, ರಾಜಕೀಯ ಮುಖಂಡರು, ಕಲಾವಿದರು ವಿವಿಧ ವಲಯಗಳಲ್ಲಿನ ಗಣ್ಯರು ಭಾಗವಹಿಸುವರು ಎಂದರು.ಮುಖಂಡರಾದ ಪಿ.ಎಚ್. ನೀರಲಕೇರಿ, ಲಕ್ಷ್ಮಣ ಉಪ್ಪಾರ, ಸಿದ್ದಣ್ಣ ಕಂಬಾರ, ಬಸವರಾಜ ಕೌಜಲಗಿ, ಮೋಹನ ರಾಮದುರ್ಗ ಇತರರು ಸುದ್ದಿಗೋಷ್ಠಿಯಲ್ಲಿದ್ದರು.