ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 38 ಕೋಟಿ‌ ರು. ವೆಚ್ಚದಲ್ಲಿ ಕೈಗೊಂಡಿರುವ ಪ್ರವಾಸಿಗರ ಸ್ನೇಹಿಯಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೇವಾ, ಸೌಲಭ್ಯಗಳನ್ನು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಸೋಮವಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 38 ಕೋಟಿ‌ ರು. ವೆಚ್ಚದಲ್ಲಿ ಕೈಗೊಂಡಿರುವ ಪ್ರವಾಸಿಗರ ಸ್ನೇಹಿಯಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೇವಾ, ಸೌಲಭ್ಯಗಳನ್ನು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ರಾಮಲಿಂಗಾ ರೆಡ್ಡಿ ಸೋಮವಾರ ಉದ್ಘಾಟಿಸಿದರು.

ಜೈವಿಕ ಉದ್ಯಾನವನಕ್ಕೆ ಬರುವ ಪ್ರವಾಸಿಗರಿಗೆ ಸಫಾರಿಯಲ್ಲಿ ಇನ್ನಷ್ಟು ಉತ್ತಮ ಅನುಕೂಲ ಕಲ್ಪಿಸುವ ಸಲುವಾಗಿ ಖರೀದಿಸಲಾಗಿರುವ ನೂತನ ಎಲೆಕ್ಟ್ರಿಕ್‌ ವಾಹನಗಳಿಗೆ ಚಾಲನೆ ನೀಡಿದ ಸಚಿವರು, ನಂತರ ನೂತನವಾಗಿ ನಿರ್ಮಿಸಲಾಗಿರುವ ಆಡಳಿತ ಕಚೇರಿ ‘ಅಡವಿ’ ಕಟ್ಟಡವನ್ನು ಉದ್ಘಾಟಿಸಿದರು.ಬಳಿಕ ಉದ್ಯಾನವನದ ನವೀಕೃತ ಮುಖ್ಯ ಪ್ರವೇಶ ದ್ವಾರ, ನೂತನ ಕ್ವಾರಂಟೈನ್ ಬ್ಲಾಕ್, ಲೈವ್ ಫೀಡ್ ಘಟಕ, ಕೇಂದ್ರೀಯ ನರ್ಸರಿ, ಹೊಸ ಝೂ ಶಾಪ್, ಸುವರ್ಣಮುಖಿ ಕೆಫೆ, ಅರಣ್ಯ ಸಿಬ್ಬಂದಿಗಳ ವಸತಿ ಗೃಹಗಳು, ತೋಳ, ಚಿರತೆ, ಎಮು, ರಿಯಾ ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳ ಆವರಣಗಳನ್ನು ಸಚಿವರು ಒಂದೊಂದಾಗಿ ಉದ್ಘಾಟಿಸಿದರು. ಸಮೀಕ್ಷ ಹೆಸರು ನಾಮಕರಣಕ್ಕೆ ಸೂಚನೆ:

ಶಿವಮೊಗ್ಗದಲ್ಲಿ ಹಿಪ್ಪೋಪೊಟಮಸ್ ಚಿಕಿತ್ಸಾ ಸಮಯದಲ್ಲಿ ಸಾವಿಗೀಡಾದ ಪಶುವೈದ್ಯಾಧಿಕಾರಿ ಡಾ.ಸಮೀಕ್ಷ ರವರ ನೆನಪಿಗಾಗಿ ಉದ್ಯಾನವನದ ಹಿಪ್ಪೋಪೊಟಮಸ್ ಬ್ಲಾಕ್ ಮತ್ತು ಮರಿ ಹಿಪ್ಪೋಪೊಟಮಸ್‌ವೊಂದಕ್ಕೆ ‘ಸಮೀಕ್ಷ’ ಎಂದು ನಾಮಕರಣ ಮಾಡಲು ಇದೇ ವೇಳೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ಸಫಾರಿ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಆನೆಗಳ ಆರೋಗ್ಯ, ಆರೈಕೆ ಹಾಗೂ ನಿರ್ವಹಣೆಗೆ ಮೀಸಲಾಗಿರುವ ‘ಸುವರ್ಣ ಆನೆ ಆರೈಕೆ ಕೇಂದ್ರ’ ವೀಕ್ಷಣಾ ಗೋಪುರವನ್ನು ಉದ್ಘಾಟಿಸಿದರು. ಸಫಾರಿ ವೀಕ್ಷಣೆಯ ಮೂಲಕ ಜೈವಿಕ ಉದ್ಯಾನವನದಲ್ಲಿ ಕೈಗೊಳ್ಳಲಾಗುತ್ತಿರುವ ವನ್ಯಜೀವಿ ಸಂರಕ್ಷಣೆ ಹಾಗೂ ನಿರ್ವಹಣಾ ಚಟುವಟಿಕೆಗಳನ್ನು ವೀಕ್ಷಿಸಿದರು. ಈ ವೇಳೆ ಶಾಸಕರಾದ ಬಿ. ಶಿವಣ್ಣ, ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ, ಅರಣ್ಯ ಪಡೆ ಮುಖ್ಯಸ್ಥರು ಸೇರಿದಂತೆ ಇತರೆ ಪ್ರಮುಖ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.