ಸಾರಾಂಶ
ದಾರಿಯುದ್ದಕ್ಕೂ ಘೋಷಣೆ ಕೂಗುತ್ತ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು. ಬಳಿಕ ವೇದ ಮೂರ್ತಿ ವೀರಯ್ಯಸ್ವಾಮಿ ನೇತೃತ್ವದಲ್ಲಿ ರಾಮಲಿಂಗೇಶ್ವರ ಮೂರ್ತಿ ಮತ್ತು ನೂತನ ಕಳಸವನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಮಹಿಳೆಯರು, ಭಕ್ತರು ವಿವಿಧ ಸಂಗೀತ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಗಂಗಾ ಸ್ನಾನಕ್ಕೆ ತೆರಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ರಾಮಲಿಂಗೇಶ್ವರ ಜಾತ್ರೆ ಪ್ರತಿ ವರ್ಷದಂತೆ ಮಹಾಶಿವರಾತ್ರಿ ದಿನದಂದು ಸಹಸ್ರಾರು ಭಕ್ತರ ಮಧ್ಯೆ ಶ್ರದ್ಧಾ, ಭಕ್ತಿಯಿಂದ ಜರುಗಿತು.ಬೆಳಿಗ್ಗೆ 10 ಗಂಟೆಗೆ ದೇವಸ್ಥಾನದಲ್ಲಿ ಸೇರಿದ ಗ್ರಾಮಸ್ಥರು ವೇದ ಮೂರ್ತಿ ವೀರಯ್ಯಸ್ವಾಮಿ ನೇತೃತ್ವದಲ್ಲಿ ರಾಮಲಿಂಗೇಶ್ವರ ಮೂರ್ತಿ ಮತ್ತು ನೂತನ ಕಳಸವನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ಮಹಿಳೆಯರು, ಭಕ್ತರು ವಿವಿಧ ಸಂಗೀತ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಗಂಗಾ ಸ್ನಾನಕ್ಕೆ ತೆರಳಿದರು.
ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಯುವಕರು ಶ್ರೀ ರಾಮಲಿಂಗೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆ ಕೂಗುತ್ತ ಪಟಾಕಿ ಸಿಡಿಸಿ, ಸಂಭ್ರಮದಿಂದ ತೆರಳಿದರು.ಅಲ್ಲಿ ದೇವರ ಮೂರ್ತಿಗೆ ಹಾಗೂ ನೂತನ ಕಳಸಕ್ಕೆ ಗುರುಗಳಿಂದ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದ ನಂತರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು, ಮಹಿಳೆಯರು ತುಂಬಿದ ಕೊಡ ನೀರು ಸಮರ್ಪಿಸಿ, ನಮಿಸಿದರು. ಮಧ್ಯಾಹ್ನ 3 ಗಂಟೆಗೆ ಮೆರವಣಿಗೆ ಮೂಲ ದೇವಸ್ಥಾನಕ್ಕೆ ಆಗಮಿಸಿದ ನಂತರ ಶಿವಲಿಂಗಕ್ಕೆ ಹಾಗೂ ಕಾಲಭೈರವನಿಗೆ ರುದ್ರಾಭಿಷೇಕ ಜರುಗಿತು.
ಗ್ರಾಮದ ಮುಖಂಡರಾದ ಶರಣಪ್ಪಗೌಡ ಮಾಲಿ ಪಾಟೀಲ್, ಅಮೃತರಡ್ಡಿ ಪಾಟೀಲ್, ಬಸವರಾಜ ಕೊಡ್ಲಾ, ಭೀಮರಡ್ಡಿ ರಾಂಪೂರಹಳ್ಳಿ, ಶರಣು ಬಿಳ್ಹಾರ, ರಾಮರಡ್ಡಿ ಕೌಳೂರ, ಯಂಕಾರಡ್ಡಿ ಜಟ್ಟೂರ್, ದೇವಿಂದ್ರಪ್ಪಗೌಡ, ರವಿ ಕೌಳೂರ, ಮಲ್ಲಾರಡ್ಡಿ ಹೊಸಳ್ಳಿ, ಗುರುನಾಥರಡ್ಡಿ ಗಡೇದ್, ಚಂದ್ರಕಾಂತ್ ಸಿಂಪಿಗೆರ್, ರವಿ ಪಾಟೀಲ್, ಶರಣು ಮಾಲಿ ಪಾಟೀಲ್, ನಾರಾಯಣರಡ್ಡಿ, ಮಂಜುನಾಥ ಗಡೇದ್, ಮಹಿಪಾಲರಡ್ಡಿ ನಾಯ್ಕಲ್, ಶರಣು ಗಡೇದ್, ಸಾಬಣ್ಣ ಹೂಗಾರ್, ಕಮಲರಡ್ಡಿ ಬೂದಿ ಸೇರದಂತೆ ಗ್ರಾಮಸ್ಥರು ಇದ್ದರು.ರಾತ್ರಿ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಶಿವನ ಆರಾಧನೆ ಕುರಿತು ಭಜನೆ ಕಾರ್ಯಕ್ರಮ ಜರುಗಿತು.