ರಾಮನಗರ: ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಜನರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳ ಮೂಲಕ ರಾಮನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ರಾಮನಗರ ನಗರಸಭೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಹಲವು ಪ್ರಥಮಗಳಿಗೂ ಸಾಕ್ಷಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು

ರಾಮನಗರ: ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಜನರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಅಭಿವೃದ್ಧಿ ಕಾರ್ಯಗಳ ಮೂಲಕ ರಾಮನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ರಾಮನಗರ ನಗರಸಭೆ ರಾಜ್ಯದಲ್ಲಿಯೇ ಮಾದರಿಯಾಗುವಂತೆ ಹಲವು ಪ್ರಥಮಗಳಿಗೂ ಸಾಕ್ಷಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.

ನಗರಸಭೆಯಲ್ಲಿ ನೂತನವಾಗಿ ನಿರ್ಮಿಸಿರುವ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಶನಿವಾರ ಸಂಜೆ ನಗರಸಭೆಯ ಹಾಲಿ ಆಡಳಿತದ ಅವಧಿಯ ಕೊನೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ವಿದಾಯ ಭಾಷಣ ಮಾಡಿದ ಅವರು, ಸದಸ್ಯರು ಯಾರೂ ತಲೆತಗ್ಗಿಸುವ ಕೆಲಸ ಮಾಡಿಲ್ಲ. ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ನಗರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದೇವೆ ಎಂಬ ಹೆಮ್ಮೆ ಇದೆ ಎಂದರು.

ಈ ಅವಧಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಪಕ್ಷಪಾತ, ರಾಜಕೀಯ ವೈಷಮ್ಯ, ವೈಯಕ್ತಿಕ ದ್ವೇಷ, ಸ್ವಾರ್ಥ, ಅಸೂಯೆ ಎಲ್ಲವನ್ನು ಮರೆತು ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡಿದ್ದೇವೆ. ನಾನು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಲು ವಿಪಕ್ಷದವರು ಸಹಕಾರ ನೀಡಿದರು. ನಮ್ಮ ಅವಧಿಯ ಆಡಳಿತ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.

ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ. ಯುಐಡಿಎಫ್‌ ಅನುದಾನದಲ್ಲಿ ಮಂಜೂರಾಗಿದ್ದ 82 ಕೋಟಿ , ಅಲ್ಪ ಸಂಖ್ಯಾತ ಇಲಾಖೆ ಅನುದಾನ ಬಳಸಿಕೊಂಡು ನಗರದಲ್ಲಿ ಅಭಿವೃದ್ದಿ ಕಾಮಗಾರಿಗಳು ನೆರೆವೇರಿವೆ. ನಗರದ ಬಹುತೇಕ ವಾರ್ಡುಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ, ಕೆಲವು ದೊಡ್ಡ ವಾರ್ಡುಗಳಲ್ಲಿ ಮೂಲ ಸೌಕರ್ಯಗಳನ್ನು ಇನ್ನು ವೃದ್ದಿಸಬೇಕಾಗಿದೆ. ಅಭಿವೃದ್ಧಿ ವೇಳೆ ಹಲವಾರು ಸವಾಲುಗಳು ಎದುರಾಗುತ್ತವೆ, ಅವುಗಳನೆಲ್ಲ ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳ ಸಹಕಾರದಲ್ಲಿ ನಿವಾರಿಸಿಕೊಂಡು ಮುಂದುವರೆದಿದ್ದೇವೆ ಎಂದು ಹೇಳಿದರು.

ಹಲವು ಪ್ರಥಮಗಳಿಗೆ ಕಾರಣ:

ನೆಟ್ಕಲ್ ಕುಡಿಯುವ ನೀರಿಯ ಯೋಜನೆ, ರಸ್ತೆಗಳ ನಿರ್ಮಾಣ ಮುಂತಾದ ಮೂಲ ಸೌಕರ್ಯಗಳ ವೃದ್ದಿಗೆ ಆದ್ಯತೆ ಕೊಟ್ಟಿದ್ದೇವೆ. ನಗರವ್ಯಾಪ್ತಿಯ ಸುಮಾರು 11 ಸಾವಿರ ಅಸಂಘಟಿತ ಕಾರ್ಮಿಕರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಿದ್ದೇವೆ. ವಿವಿಧ ಸಮುದಾಯದವರಿಗೆ ಕುಲಕಸುಬಿಗೆ ಪೂರಕವಾಗಿ ಟೂಲ್‌ ಕಿಟ್‌ಗಳನ್ನು ವಿತರಿಸಿದ್ದೇವೆ. ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ, ಅವರ ಅನುಕೂಲಕ್ಕಾಗಿ ದೊಡ್ಡ ಗಾತ್ರದ ಛತ್ರಿಗಳನ್ನು ವಿತರಿಸಿದ್ದೇವೆ ಎಂದರು.

ಉದ್ಯಾನವಗಳ ಅಭಿವೃದ್ಧಿ, ಅದರಲ್ಲಿ ದಿನ ಪತ್ರಿಕೆಗಳು ಓದಲು ಅನುಕೂಲವಾಗುವಂತೆ ವಾಚನಾಲಯ ತೆರೆಯಲಾಯಿತು. ಬೀದಿ ಬದಿಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಕಡಿವಾಣ ಹಾಕಲು ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಸಿಸಿ ಕ್ಯಾಮೆರಾ ಅಳವಡಿಸಲಾಯಿತು. ಆನಂತರ ಆ ಬ್ಲಾಕ್ ಸ್ಪಾಟ್ ಗಳನ್ನು ಸೌಂದರ್ಯೀಕರಣ ಮಾಡಲಾಯಿತು ಎಂದು ಹೇಳಿದರು.

ನಗರದಲ್ಲಿ 20 ಸಾವಿರ ಸ್ವತ್ತಿನ ಮಾಲೀಕರಿಗೆ ಇ ಖಾತೆ ವಿತರಿಸಲಾಗಿದೆ. ಆಟೋ ಚಾಲಕರು, ಫಿಲೇಚರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಮವಸ್ತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಿದ್ದೇವೆ. ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳ ಅಭಿವೃದ್ಧಿಗೆ ಅನುದಾನ ಒದಗಿಸಿದ್ದೇವೆ. ಫುಡ್ ಕೋರ್ಟ್ , ಗೋಡೆ ಗಡಿಯಾರ, ಡಾ.ಬಿ.ಆರ್.ಅಂಬೇಡ್ಕರ್ , ಬಸವಣ್ಣ, ನಾಡಪ್ರಭು ಕೆಂಪೇಗೌಡ, ಡಿ.ದೇವರಾಜ ಅರಸು ಸಭಾಂಗಣ ಲೋಕಾರ್ಪಣೆ ಮಾಡಿದ್ದೇವೆ. ಈ ಎಲ್ಲಾ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಯೂ ಪಾಲಿಸಲಿ ಎಂಬ ಆಶಯದೊಂದಿಗೆ ಈ ಮಹತ್ವದ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಪ್ಲಾಸ್ಟಿಕ್‌ ಬ್ಯಾಗ್ ಬಳಕೆಯನ್ನು ನಿಯಂತ್ರಿಸಲು 9 ಕಡೆ ಬಟ್ಟೆ ಬ್ಯಾಗ್‌ಗಳ ವಿತರಣಾ ಯಂತ್ರಗಳನ್ನು ಸ್ಥಾಪಿಸಿದ್ದೇವೆ. ಇದನ್ನು ನೋಡಿ ಪೌರಾಡಳಿತ ಸಚಿವ ಬಾಲಕೃಷ್ಣರವರು ರಾಜ್ಯಾದ್ಯಂತ ಬಟ್ಟೆ ಬ್ಯಾಗ್ ಗಳ ವಿತರಣಾ ಯಂತ್ರಗಳನ್ನು ಅಳವಡಿಸಲು ಆಸಕ್ತಿ ವಹಿಸಿದ್ದಾರೆ. ಹೀಗೆ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವಾರು ಪ್ರಥಮಗಳಿಗೆ ರಾಮನಗರ ನಗರಸಭೆ ಕಾರಣವಾಗಿದೆ ಎಂದು ಹೇಳಿದರು.

ನಗರದ ಸಮಗ್ರ ಅಭಿವೃದ್ದಿಗೆ 772 ಕೋಟಿ ರು. ಅಗತ್ಯವಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಸರ್ಕಾರದ ಪೌರಾಡಳಿತ ಇಲಾಖೆ ಡಿಪಿಆರ್‌ ಅಪೇಕ್ಷಿಸಿತ್ತು. ಡಿಪಿಆರ್‌ ಸಿದ್ದಪಡಿಸಿ ಕಳುಹಿಸಿದ್ದೇವೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಆಸಕ್ತಿವಹಿಸಿದ್ದು, ಹಂತ ಹಂತವಾಗಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕೆ.ಶೇಷಾದ್ರಿ ತಿಳಿಸಿದರು.

ಇದೇ ವೇಳೆ ನಗರಸಭಾ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್‌ ಆರಿಫ್‌, ಆಯುಕ್ತ ಡಾ.ಜಯಣ್ಣ ಉಪಸ್ಥಿತರಿದ್ದರು.

ಕೋಟ್ .................

ನಮ್ಮ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಪರಿಪೂರ್ಣ ಎಂದು ಹೇಳಲಾಗುವುದಿಲ್ಲ. ಇದು ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ನನ್ನ ಅವಧಿಯಲ್ಲಿ 31 ಚುನಾಯಿತ ಮತ್ತು 5 ಮಂದಿ ನಾಮಾಂಕಿತ ಸದಸ್ಯರ ಸಹಕಾರದೊಂದಿಗೆ ಅಭಿವೃದ್ದಿಗೆ ಮುನ್ನುಡಿ ಬರೆದಿದ್ದೇವೆ. ಇದನ್ನು ಗರ್ವದಿಂದ ಹೇಳಿಕೊಳ್ಳುತ್ತೇವೆ.

ಮುಂದೆ ಬರುವ ಅವಧಿಯಲ್ಲಿ ನಮ್ಮ ಪೈಕಿ ಯಾರೆಲ್ಲ ಪುನಃ ನಗರಸಭಾ ಸದಸ್ಯರಾಗುತ್ತೇವೋ ಗೊತ್ತಿಲ್ಲ. ಆದರೆ, ಮುಂಬರುವ ಅವಧಿಯ ಸದಸ್ಯರಿಗೆ ನಮ್ಮೆಲ್ಲರ ಸಹಕಾರ ಇದ್ದೇ ಇರುತ್ತದೆ.

-ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

7ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ವಿಶೇಷ ಸಾಮಾನ್ಯಸಭೆಯಲ್ಲಿ ಮಾತನಾಡಿದರು.