ರಾಮನಗರ ರಸ್ತೆಗಳು ಎರಡು ಹಂತದಲ್ಲಿ ಅಭಿವೃದ್ಧಿ: ಇಕ್ಬಾಲ್ ಹುಸೇನ್

| N/A | Published : Jul 11 2025, 01:49 AM IST / Updated: Jul 11 2025, 12:38 PM IST

ಸಾರಾಂಶ

 ರಾಮನಗರ ಟೌನಿನಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಯುಐಡಿಎಫ್ ಅನುದಾನದಡಿ 83 ಕೋಟಿ ರು. ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ 63 ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ರಾಮನಗರ: ರಾಮನಗರ ಟೌನಿನಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಯುಐಡಿಎಫ್ ಅನುದಾನದಡಿ 83 ಕೋಟಿ ರು. ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ 63 ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ 10 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿರುವ ಹುಣಸನಹಳ್ಳಿ ರಸ್ತೆ ಉದ್ಘಾಟನೆ ಮತ್ತು ಅರ್ಕೇಶ್ವರ ಕಾಲೋನಿ ಶ್ರೀ ಅತ್ತಿಮರದ ಆಂಜನೇಯ ಸ್ವಾಮಿ ದೇವಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರದ ಹಲವು ವಾರ್ಡುಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆಷಾಡ ಮಾಸ ಮುಗಿದ ಮೇಲೆ ಉಳಿದ 20 ಕೋಟಿ ರು.ವೆಚ್ಚದಲ್ಲಿ ಐಜೂರು ಭಾಗದ ವಾರ್ಡುಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ನಗರೋತ್ಥಾನ ಯೋಜನೆಯಲ್ಲಿ 12.50 ಕೋಟಿ ರು.ಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಚೇಂಚ್ ಆಫ್ ವರ್ಕ್ ಮಾಡಿ ಆಕ್ಷನ್ ಪ್ಲಾನ್ ಮಾಡಲಾಗುತ್ತಿದೆ. 8 ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಮತ್ತೊಂದು ಸುತ್ತಿನ ಡಾಂಬರೀಕರಣ :

ರಾಮನಗರದಿಂದ ಹುಣಸನಹಳ್ಳಿ, ಬನ್ನಿಕುಪ್ಪೆ, ಕೈಲಾಂಚ ಸೇರಿದಂತೆ ಬಹಳಷ್ಟು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಹುಣಸನಹಳ್ಳಿ ರಸ್ತೆ ಡಾಂಬಾರು ಕಾಣದೆ ಸುಮಾರು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಶಾಲಾ ಮಕ್ಕಳು, ಜನರು ನಡೆದಾಡಲು ಹಾಗೂ ವಾಹನಗಳ ಸಂಚಾರಕ್ಕೂ ತೊಡಕಾಗಿತ್ತು. ರಸ್ತೆ ಒತ್ತುವರಿ ಆಗಿದ್ದರಿಂದ ರಸ್ತೆ ಚಿಕ್ಕದಾಗಿತ್ತು. ಅದೆಲ್ಲವನ್ನು ತೆರವುಗೊಳಿಸಿ ಸುಸಜ್ಜಿತವಾದ ರಸ್ತೆ , ಚರಂಡಿ ನಿರ್ಮಾಣ ಮಾಡಲಾಗಿದೆ ಎಂದರು.

ಈ ರಸ್ತೆ ಅಭಿವೃದ್ಧಿಗೆ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ಮನವಿ ಮಾಡಿದಾಗ 10 ಕೋಟಿ ರುಪಾಯಿ ಬಿಡುಗಡೆ ಮಾಡಿದರು. ಈ ರಸ್ತೆ ಕಾಮಗಾರಿ ಇನ್ನಷ್ಟು ಗುಣಮಟ್ಟದಿಂದ ಕೂಡಿರಸಬೇಕಿತ್ತು. ಹಾಗಾಗಿ ರಸ್ತೆ ಮೇಲೆ ಮತ್ತೊಂದು ಸುತ್ತಿನ ಡಾಂಬರೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 12.50 ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ಪ್ರದೇಶದಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದ್ದು, ಈಗ ಮತ್ತೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ರವರು 25 ಕೋಟಿ ರು. ಅನುದಾನ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಮನಗರದಿಂದ - ಹುಣಸನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ದೇವಸ್ಥಾನವಿದ್ದು, ಅಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವೂ ಇದೆ. ಆ ಜಾಗದಲ್ಲಿ ಸೌದೆ, ಜಲ್ಲಿಕಲ್ಲು, ಕಸ ಹಾಕುತ್ತಿದ್ದಾರೆ. ದೇವಸ್ಥಾನದ ಭಕ್ತರು ದೇಗುಲದ ದ್ವಾರವನ್ನು ಸರಿಪಡಿಸಿಕೊಡುವ ಜೊತೆಗೆ ಚಿಕ್ಕದಾದ ಗರ್ಭ ಗುಡಿ ನಿರ್ಮಿಸಿ , ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಮಾಜಿ ಶಾಸಕ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ , ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ನಿಜಾಮುದ್ದೀನ್ ಷರೀಫ್ , ಅಜ್ಮತ್ , ಆರೀಫ್ , ಸಮದ್, ರಮೇಶ್ , ಅಣ್ಣು, ಮುಖಂಡರಾದ ಷಫಿ, ಆಯುಕ್ತ ಜಯಣ್ಣ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಪಳನಿಸ್ವಾಮಿ ಮತ್ತಿತರರು ಹಾಜರಿದ್ದರು.

ಸ್ಲಂ ಬೋರ್ಡಿನಿಂದ ರಾಮನಗರ ಕ್ಷೇತ್ರಕ್ಕೆ 888 ಮನೆಗಳು ಮಂಜೂರು - ಇಕ್ಬಾಲ್ ಹುಸೇನ್

ಕನ್ನಡಪ್ರಭ ವಾರ್ತೆ ರಾಮನಗರ

ಸ್ಲಂ ಬೋರ್ಡಿನಿಂದ ರಾಮನಗರ ಕ್ಷೇತ್ರಕ್ಕೆ 888 ಮನೆಗಳು ಮಂಜೂರಾಗಿದ್ದು, ಅವುಗಳನ್ನು ನಿರ್ಮಿಸಬೇಕೆಂದು ಶೀಘ್ರದಲ್ಲಿಯೇ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಲಂ ಬೋರ್ಡ್ ನಿಂದ ಮಂಜೂರಾದ ಮನೆಗಳನ್ನು ಎಲ್ಲೆಲ್ಲಿ ನಿರ್ಮಾಣ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳೊಂದಿಗೆ ಚರ್ಚೆ ನಡೆಸುತ್ತೇವೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ಹಂಚಿಕೆ ಮಾಡಲಾಗುವುದು ಎಂದರು.

ತಾಲೂಕಿನಲ್ಲಿ 146 ಎಕರೆ ಸರ್ಕಾರಿ ಜಮೀನು ಗುರುತಿಸಿದ್ದು, ಅದನ್ನು ಬಡಾವಣೆಯನ್ನಾಗಿ ಅಭಿವೃದ್ಧಿ ಪಡಿಸಲು ವಸತಿ ಖಾತೆ ಸಚಿವ ಜಮೀರ್ ಅಹಮದ್ ಖಾನ್ ರವರು 20 ಕೋಟಿ ರು. ಅನುದಾನ ನೀಡಿದ್ದಾರೆ. ಆ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ. 2 - 3 ತಿಂಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

ಇನ್ನು ದೊಡ್ಡಮಣ್ಣುಗುಡ್ಡೆ - ಕೆಂಗಲ್ ನಡುವೆ ಇರುವ 243 ಮನೆಗಳು ಶಿಥಿಲ ಗೊಂಡಿದ್ದು, ಅವುಗಳ ದುರಸ್ಥಿ ಕಾರ್ಯಕ್ಕೆ ವಸತಿ ಇಲಾಖೆ 3 ಕೋಟಿ ರು. ಅನುದಾನ ಬಂದಿದೆ. ಈ ಹಿಂದೆ 5100 ರು. ಪಾವತಿಸಿದವರಿಗೆ ಮೊದಲು ಆದ್ಯತೆ ನೀಡಿ, ಉಳಿದವರಿಗೆ ನಿವೇಶನ ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.

ಅರ್ಕಾವತಿ ನದಿ ದಡದಲ್ಲಿ 157 ಕೋಟಿ ರು.ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಮನೆ ಮನೆಗೆ ನೀರು ಒದಗಿಸಲಾಗಿದ್ದು, ಸ್ಮಾರ್ಟ್ ಮೀಟರ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ರಾಮದೇವರ ಬೆಟ್ಟದಲ್ಲಿ ಭಕ್ತರ ಅನುಕೂಲಕ್ಕಾಗಿ ರಸ್ತೆ, ಕುಡಿಯುವ ನೀರು, ಶೌಚಾಲಯ, ರೈಲಿಂಗ್ಸ್ , ದಾಸೋಹ ಭವನ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ರೇವಣಸಿದ್ದೇಶ್ವರ ಬೆಟ್ಟದಲ್ಲೂ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಸೀದಿ, ಮದ್ರಾಸಗಳ ಅಭಿವೃದ್ಧಿಗೂ ಅನುದಾನ ನೀಡಿದ್ದು, ಅರ್ಕೇಶ್ವರ ದೇವಸ್ಥಾನಕ್ಕೆ 50 ಲಕ್ಷ ಅನುದಾನ ನೀಡಲಾಗಿದೆ. ಸಣ್ಣ ದೇಗುಲಗಳಿಗೆ 96 ಲಕ್ಷ ನೀಡಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಘಟಕಗಳ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು. 

Read more Articles on