ಕನ್ನಡಪ್ರಭ ವಾರ್ತೆ ರಾಮನಗರ
ರಾಜ್ಯ ಮಾತ್ರವಲ್ಲದೆ ಅಂತಾರಾಜ್ಯಗಳಲ್ಲಿ ನಡೆದಿದ್ದ ವಾಹನಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಭರ್ಜರಿ ಬೇಟೆ ಆಡಿದ್ದಾರೆ.ಶಿವಮೊಗ್ಗ ಟೌನ್ ಟ್ಯಾಂಕ್‌ಮೊಹಲ್ಲಾದ ಶಾಹಿದ್ ಅಹಮದ್ ಹಾಗೂ ತುಮಕೂರು ಜಿಲ್ಲೆ ಕ್ಯಾತಸಂದ್ರದ ಅಪ್ಸರ್ ಅಹಮದ್ ಬಂಧಿತರು. ಈ ಆರೋಪಿಗಳಿಂದ ವಿವಿಧ ಪ್ರಕರಣಗಳಡಿ 2 ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ, 3 ಕಾರು, 10 ದ್ವಿಚಕ್ರ ವಾಹನಗಳು ಹಾಗೂ ₹4 ಲಕ್ಷ ನಗದು ಹಣವನ್ನು ವಶಕ್ಕೆ ಪಡೆದು ಒಟ್ಟು 13 ಪ್ರಕರಣಗಳನ್ನು ಬೇಧಿಸುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆ.16ರಂದು ರಾಮನಗರ ಹೊರ ವಲಯದ ವಡೇರಹಳ್ಳಿ ಗ್ರಾಮದ ದರ್ಗಾದ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ಕಳ್ಳತನ ಪ್ರಕರಣ ದಾಖಲಾಗಿತ್ತು. ಕೆಂಪೇಗೌಡನದೊಡ್ಡಿ ಗ್ರಾಮದ ಬಳಿ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ಕಳ್ಳತನವಾಗಿರುವ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣಗಳ ಪತ್ತೆಗಾಗಿ ಕಾರ್ಯಾಚರಣೆಗಿಳಿದ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರ ತಂಡ ಅನುಮಾನದ ಮೇರೆಗೆ ಶಿವಮೊಗ್ಗ ಟೌನ್ ಟ್ಯಾಂಕ್‌ಮೊಹಲ್ಲಾದ ಶಾಹಿದ್ ಅಹಮದ್ ಹಾಗೂ ತುಮಕೂರು ಜಿಲ್ಲೆ ಕ್ಯಾತಸಂದ್ರದ ಅಪ್ಸರ್ ಅಹಮದ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಪೊಲೀಸರು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ರಾಮನಗರ ಟೌನ್, ಬಿಡದಿ, ಮಂಡ್ಯ ಪಶ್ಚಿಮ, ಮದ್ದೂರು, ತುಮಕೂರು ಹೊಸ ಬಡವಾಣೆ, ಯಶವಂತಪುರ, ಸೋಲದೇವನಹಳ್ಳಿ, ಕೋಲಾರ ಟೌನ್, ಬಳ್ಳಾರಿ ಎಪಿಎಂಸಿ, ಹುಬ್ಬಳ್ಳಿ ಗ್ರಾಮಾಂತರ ಮತ್ತು ಮಹಾರಾಷ್ಟ್ರ ರಾಜ್ಯದ ಶಿರೋಳಿ ಪೊಲೀಸ್ ಠಾಣಾಗಳ ವ್ಯಾಪ್ತಿಯಲ್ಲಿನ ವಾಹನಗಳ ಕಳ್ಳತನ ಪ್ರಕರಣಗಳನ್ನು ಬೇಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಮುರುಳಿ, ಸಬ್ ಇನ್ಸ್ ಪೆಕ್ಟರ್ ಅಲ್ಲಾವುದ್ದೀನ್, ಮುಖ್ಯಪೇದೆ ಎಸ್.ಮಹೇಶ್, ಪೇದೆಗಳಾದ ನರೇಶ್, ಆಸೀಫ್ , ರವಿ, ಶಾರದಮ್ಮ, ತಾಂತ್ರಿಕ ವಿಭಾಗದ ಮಹದೇವು ಮತ್ತಿತರರು ಪಾಲ್ಗೊಂಡಿದ್ದರು.
₹75 ಲಕ್ಷ ಮೌಲ್ಯದ 750ಗ್ರಾಂ ಮಾದಕ ವಸ್ತು ವಶ :ರಾಮನಗರದ ಐಜೂರು ಠಾಣೆ ಪೊಲೀಸರು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿ ₹75 ಲಕ್ಷ ಮೌಲ್ಯದ 750 ಗ್ರಾಂ ಮಾದಕ ವಸ್ತು ವಶ ಪಡಿಸಿಕೊಂಡಿದ್ದಾರೆ. ಬೆಂಗಳೂರು ಫಾರುಕ್ ನಗರದ ಸಾಕಿಲ್‌ಪಾಷ, ಸಾಧಿಕ್ ಖಾನ್ ಹಾಗೂ ಉಗಾಂಡ ಮೂಲದ ನಾನಾಜಾನ್ಸನ್ ಬಂಧಿತರು.
ಆರೋಪಿಗಳಿಂದ ₹1.50 ಲಕ್ಷದ ಮೌಲ್ಯದ 15.25 ಗ್ರಾಂ ತೂಕದ ಮೆಥಾಂಫೆಟಮೈನ್ , ₹17.50 ಲಕ್ಷ ಮೌಲ್ಯದ 175.40 ಗ್ರಾಂ ತೂಕದ ಎಂಡಿಎಂಎ ಟ್ಯಾಬ್ಲೆಟ್, ₹1.20 ಲಕ್ಷ ಮೌಲ್ಯದ 11.74 ಗ್ರಾಂ ತೂಕದ ಮೆಥಾಂಫೆಟಮೈನ್ ಕ್ರಿಸ್ಟಲ್ , ₹54.70 ಲಕ್ಷ ಮೌಲ್ಯದ 547.60 ಗ್ರಾಂ ತೂಕದ ಮೆಥಾಂಫೆಟಮೈನ್ ಕ್ರಿಸ್ಟಲ್ , 1 ಮಾರುತಿ ಕಾರು, 1 ದ್ವಿಚಕ್ರ ವಾಹನ, 3 ಮೊಬೈಲ್ ಹಾಗೂ 2 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.ಈ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ರಮೇಶ್ , ಸಬ್ ಇನ್ಸ್ ಪೆಕ್ಟರ್ ಜಾರ್ಜ್ ಪ್ರಕಾಶ್ , ಪೇದೆಗಳಾದ ಶಿವಕುಮಾರ್ ,ಪಾಲಾಕ್ಷ ಮತ್ತಿತರರು ಪಾಲ್ಗೊಂಡಿದ್ದರು.
ರಾಮನಗರ ಗ್ರಾಮಾಂತರ ಮತ್ತು ಐಜೂರು ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮಚಂದ್ರಯ್ಯ, ರಾಜೇಂದ್ರ, ಡಿವೈಎಸ್ಪಿ ಶ್ರೀನಿವಾಸ್ , ವೃತ್ತ ನಿರೀಕ್ಷಕರಾದ ರಮೇಶ್ , ಮುರುಳಿ ಮತ್ತಿತರರು ಹಾಜರಿದ್ದರು.-------
....ಕೋಟ್ ....ರಾಮನಗರ ಗ್ರಾಮಾಂತರ ಪೊಲೀಸರು ರಾಜ್ಯ ಮಾತ್ರವಲ್ಲದೆ ಅಂತಾರಾಜ್ಯಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಬೇಧಿಸಿ, ಇಬ್ಬರು ವಾಹನ ಕಳ್ಳರನ್ನು ಬಂಧಿಸಿ 15 ವಿವಿಧ ಮಾದರಿ ವಾಹನಗಳು ಹಾಗೂ ನಗದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೆಯೇ ಐಜೂರು ಠಾಣೆ ಪೊಲೀಸರು ವಿದೇಶಿ ಪ್ರಜೆ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿ ಸುಮಾರು ₹74 ಲಕ್ಷ ಮೌಲ್ಯದ 750 ಗ್ರಾಂ ಸಂಶ್ಲೇಷಿತ ಮಾದಕ ವಸ್ತು ವಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎರಡು ಪ್ರಕರಣಗಳನ್ನು ಬೇಧಿಸಿದ ಪೊಲೀಸ್ ತಂಡವನ್ನು ಅಭಿನಂದಿಸುವ ಜೊತೆಗೆ ತಲಾ 10 ಸಾವಿರ ಬಹುಮಾನ ನೀಡಲಾಗುವುದು.
- ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂ.ದಕ್ಷಿಣ.----
2ಕೆಆರ್ ಎಂಎನ್ 2.ಜೆಪಿಜಿರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ವಶ ಪಡಿಸಿಕೊಂಡ ವಾಹನಗಳು.
---------------------------