ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ ರಲ್ಲಿ ಕೇವಲ ೩೨ ಕಿ ಮೀ ಅಂತರದಲ್ಲಿ ವಳಾಲು ಮತ್ತು ಬ್ರಹ್ಮರಕೂಟ್ಲು ಎಂಬಲ್ಲಿ ಎರಡು ಟೋಲ್ ಗೇಟುಗಳನ್ನು ಸ್ಥಾಪಿಸಿರುವುದು ನಾಗರಿಕರನ್ನು ಸುಲಿಯುವ ಕಾರ್ಯತಂತ್ರವಾಗಿದೆ. ಹೆದ್ದಾರಿ ಇಲಾಖೆಯ ನಿಯಮದಂತೆ ಸೂಕ್ತ ಅಂತರದಲ್ಲಿ ಟೋಲ್ ಗೇಟು ಸ್ಥಾಪಿಸದೇ ಮನಸ್ಸೋ ಇಚ್ಚೆ ಟೋಲ್ ಗೇಟು ಸ್ಥಾಪಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಮಾಜಿ ಸಚಿವ ಬಿ ರಮಾನಾಥ ರೈ ಎಚ್ಚರಿಸಿದರು.

ಅವರು ಬುಧವಾರ ಬಜತ್ತೂರು ಗ್ರಾಮ ವಳಾಲು ಎಂಬಲ್ಲಿ ನಿರ್ಮಾಣವಾಗಿರುವ ಟೋಲ್ ಗೇಟು ಬಳಿ ಪರಿಶೀಲನಾ ಸಭೆ ನಡೆಸಿ ನಿಯಮಾನುಸಾರ ೬೦ ಕಿ ಮೀ ವ್ಯಾಪ್ತಿಯನ್ನು ಪಾಲಿಸದೆ ಟೋಲ್ ಗೇಟು ನಿರ್ಮಿಸಿರುವುದು ತಪ್ಪೆಂದು ಪ್ರತಿಪಾದಿಸಿದರು. ಸಭೆಯಲ್ಲಿ ಮಾತನಾಡಿದ ಮುನೀರ್ ಕಾಟಿಪಳ್ಳ, ಜಿಲ್ಲೆಯಲ್ಲಿ ಈಗಾಗಲೇ ೪ ಟೋಲ್ ಗೇಟು ಇದ್ದು, ಇನ್ನು ಮುಂದಕ್ಕೆ ಮತ್ತೆ ೩ ಟೋಲ್ ಗೇಟು ಆರಂಭವಾಗಲಿದೆ. ಇದು ಜನರ ಹಿತಕ್ಕೋ ಜನರ ಸುಲಿಗೆಗೋ ಎಂದು ಪ್ರಶ್ನಿಸಿದರು. ಸಭೆಯಲ್ಲಿ ಕಾಂಗ್ರೆಸ್‌ ಮುಂದಾಳುಗಳಾದ ಯು ಟಿ ಮಹಮ್ಮದ್ ತೌಷಿಪ್, ಡಾ. ರಾಜಾರಾಮ ಕೆ ಬಿ, ಶಬೀರ್ ಕೆಂಪಿ, ಪಿ ಪಿ ವರ್ಗೀಸ್ , ಕೆ ಕೆ ಸಾಹುಲ್ ಹಮೀದ್, ಶೇಖರ್, ಮೋಹನ್ ಬಿ, ಬಿ ಎಂ ಭಟ್, ಉಷಾ ಅಂಚನ್ , ಅಭಿಲಾಷ್, ಮುರಳೀಧರ್ ರೈ, ಅಜಿತ್ ಪಾಲೇರಿ, ಸರ್ವೋತ್ತಮ ಗೌಡ, ಪ್ರಶಾಂತ್, ಅಬ್ಬಾಸ್ ಆಲಿ, ಉಮಾನಾಥ್ ಶೆಟ್ಟಿ, ಯು ಟಿ ಇರ್ಷಾದ್, ರೂಪೇಶ್ ರೈ, ಮಹಮ್ಮದ್ ಫಾರೂಕ್ ಮತ್ತಿತರರು ಭಾಗವಹಿಸಿದ್ದರು.