ರಾಮಾನುಜಾಚಾರ್ಯರ 1007ನೇ ತಿರುನಕ್ಷತ್ರ ಮಹೋತ್ಸವ ವಿದ್ಯುಕ್ತ ಆರಂಭ

| Published : May 04 2024, 12:33 AM IST

ಸಾರಾಂಶ

ರಾಮಾನುಜಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮಗಳಿಗೆ ಸರ್ಕಾರ ಅಥವಾ ದೇವಾಲಯದಿಂದ ಅನುದಾನ ಇಲ್ಲದಿದ್ದರೂ ಮಹೋತ್ಸವಗಳು ಅರ್ಥಪೂರ್ಣವಾಗಿ ನಡೆಯುತ್ತಾ ಬಂದಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ಮತ್ತು ಸಹೋದದರ ಪರಿಶ್ರಮದ ಪಲವಾಗಿ ಹತ್ತು ದಿನಗಳ ಮಹೋತ್ಸವದ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಾ ಬಂದಿವೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ರಾಮಾನುಜಾಚಾರ್ಯರ 1007ನೇ ತಿರುನಕ್ಷತ್ರ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ಪುಷ್ಪಾಲಂಕೃತ ಸಮರ ಭೂಪಾಲವಾಹನೋತ್ಸವ ವೈಭವದಿಂದ ನೆರವೇರುವ ಮೂಲಕ ವಿಧ್ಯುಕ್ತವಾಗಿ ಆರಂಭವಾಯಿತು.

ಆಚಾರ್ಯರ ತಿರುನಕ್ಷತ್ರಮಹೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಾಲಯದ ಪೂಜಾ ಕೈಂಕರ್ಯಗಳು ಬೆಳಗಿನ ಜಾವ 5.30ಕ್ಕೆ ಆರಂಭವಾಗಿ 8 ಗಂಟೆಗೆ ವಾಹನೋತ್ಸವ ಅದ್ಧೂರಿಯಾಗಿ ನೆರವೇರಿತು. ದಿವ್ಯ ಪ್ರಬಂಧ ಪಾರಾಯಣ ಮಂಗಳವಾದ್ಯದೊಡನೆ ಚತುರ್ವೀದಿಗಳಲ್ಲಿ ಉತ್ಸವ ನಡೆಯಿತು.

ಮೇ 10 ರಿಂದ 12 ವರೆಗೆ ಸರಣಿ ಸರ್ಕಾರಿ ರಜಾದಿನಗಳಿದ್ದು, ಮೇ 11 ರಂದು ಮಹಾರಥೋತ್ಸವ, 12 ರಂದು ರಾಮಾನುಜಾರ್ಯರ ತಿರುನಕ್ಷತ್ರಮಹೋತ್ಸವ ನಡೆಯಲಿದೆ. ಮೇಲುಕೋಟೆಗೆ ಭಕ್ತಾದಿಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಮಾಡುವ ಜೊತೆಗೆ ಮೂರು ದಿನಗಳಂದು ಆಸ್ಪತ್ರೆಯ ಮುಂಭಾಗದ ಮೈದಾನದಲ್ಲೇ ಭಕ್ತರವಾಹನಗಳಿಗೆ ಪಾರ್ಕಿಂಗ್ ಸೌಲಭ್ಯಕಲ್ಪಿಸಲು ಪೊಲೀಸರಿಗೆ ಪತ್ರ ಬರೆಯಲಾಗಿದೆ. ದೇವಾಲಯದ ಸುತ್ತ ಶುಚಿತ್ವ ಕಾಪಾಡಲು ಗ್ರಾಪಂಗೆ ಕೋರಲಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.

ರಾಮಾನುಜಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮಗಳಿಗೆ ಸರ್ಕಾರ ಅಥವಾ ದೇವಾಲಯದಿಂದ ಅನುದಾನ ಇಲ್ಲದಿದ್ದರೂ ಮಹೋತ್ಸವಗಳು ಅರ್ಥಪೂರ್ಣವಾಗಿ ನಡೆಯುತ್ತಾ ಬಂದಿದೆ. ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಬಿ.ವಿ ಆನಂದಾಳ್ವಾರ್ ಮತ್ತು ಸಹೋದದರ ಪರಿಶ್ರಮದ ಪಲವಾಗಿ ಹತ್ತು ದಿನಗಳ ಮಹೋತ್ಸವದ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಾ ಬಂದಿವೆ. ಇದರೊಟ್ಟಿಗೆ ವಿವಿಧ ನೇಮಿಸೇವೆಯ ಕೈಂಕರ್ಯಗಳು ಸ್ಥಾನೀಕರ ಬಿಕ್ಷಾಕೈಂಕರ್ಯಸೇವೆಗಳೂ ಸಹ ತಿರುನಕ್ಷತ್ರಮಹೋತ್ಸವ ಸಂಪ್ರದಾಯಬದ್ಧವಾಗಿ ನಡೆಯಲು ಸಹಕಾರಿಯಾಗಿವೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಹತ್ತು ದಿನಗಳ ತಿರುನಕ್ಷತ್ರಮಹೋತ್ಸವಲ್ಲಿ ಮೇ 7ರ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿ, ಮೇ 8 ರ ರಾತ್ರಿ ಗೋವಿಂದರಾಜಮುಡಿ ನಡೆಯಲಿದೆ. ಭಕ್ತರು ದೇವಾಲಯದಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯಗಳನ್ನು ಅನುಸರಿಸಿ ದೇವರದರ್ಶನ ಪಡೆಯಬೇಕು ಎಂದು ದೇವಾಲಯದ ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಪರಿಚಾರಕ ಎಂ.ಎನ್ ಪಾರ್ಥಸಾರಥಿ ಮನವಿ ಮಾಡಿದ್ದಾರೆ.