ಪೇಜಾವರ ಶ್ರೀಗಳಿಂದ ಅಯೋಧ್ಯೆಯಲ್ಲಿ ರಾಮತಾರಕ ಯಜ್ಞ ಸಪ್ತಾಹ ಸಂಪನ್ನ

| Published : Sep 27 2024, 01:17 AM IST / Updated: Sep 27 2024, 01:18 AM IST

ಪೇಜಾವರ ಶ್ರೀಗಳಿಂದ ಅಯೋಧ್ಯೆಯಲ್ಲಿ ರಾಮತಾರಕ ಯಜ್ಞ ಸಪ್ತಾಹ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆ ರಾಮ ಮಂದಿರದಲ್ಲಿ ವೈಭವದಿಂದ ಒಂದು ವಾರ ಕಾಲ ನಡೆಸಿದ ರಾಮತಾರಕ ಯಜ್ಞವು ಸಂಪನ್ನಗೊಂಡಿದೆ. ಗುರುವಾರ ಯಾಗಶಾಲೆಯಲ್ಲಿ ಯಜ್ಞಕ್ಕೆ ಶ್ರೀಗಳು ಫೂರ್ಣಾಹುತಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ಆಯೋಧ್ಯೆ ಶ್ರೀ ರಾಮಮಂದಿರದಲ್ಲಿ ವೈಭವದಿಂದ ಒಂದು ವಾರ ಕಾಲ ನಡೆಸಿದ ರಾಮತಾರಕ ಯಜ್ಞವು ಗುರುವಾರ ನವಮೀ ತಿಥಿ ಪುನರ್ವಸು ನಕ್ಷತ್ರದ ದಿನದಂದು ಸಂಪನ್ನಗೊಂಡಿದೆ.

ಗುರುವಾರ ಅಯೋಧ್ಯೆ ರಾಮಮಂದಿರದ ಯಾಗಶಾಲೆಯಲ್ಲಿ ಈ ರಾಮತಾರಕ ಯಜ್ಞಕ್ಕೆ ಶ್ರೀಗಳು ಪೂರ್ಣಾಹುತಿ ನೀಡಿದರು. ನಂತರ ಸಂದೇಶ ನೀಡಿದ ಶ್ರೀಗಳು ಪಿತೃಪಕ್ಷದ ಸಂದರ್ಭದಲ್ಲಿ ಲೋಕಕಲ್ಯಾಣದ ಸಂಕಲ್ಪವನ್ನಿಟ್ಟುಕೊಂಡು, ಮೋಕ್ಷಪ್ರದವಾದ 7 ಕ್ಷೇತ್ರಗಳಲ್ಲಿ ಮೊದಲನೇಯದಾದ ಅಯೋಧ್ಯೆಯ ರಾಮ‌ಜನ್ಮಭೂಮಿಯಲ್ಲಿ ವೈದಿಕರ ಮುಖೇನ ಈ ಯಜ್ಞವನ್ನು ಕೈಗೊಳ್ಳಲಾಗಿದೆ. ಲೋಕದಲ್ಲಿ ಕ್ಷಾಮ, ಅಶಾಂತಿಗಳು ದೂರವಾಗಿ, ಸಮೃದ್ದಿ ಹೆಚ್ಚಲಿ, ಆಳುವವರು ನ್ಯಾಯವಾರ್ಗದಲ್ಲಿ ಆಡಳಿತ ನಡೆಸಲಿ, ಪ್ರಜೆಗಳಿಗೆ ನೆಮ್ಮದಿಯಾಗಲಿ ಎಂದಿದ್ದಾರೆ.

ಪೂರ್ಣಾಹುತಿ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿ.ಹಿಂ.ಪ. ರಾಷ್ಟ್ರೀಯ ಮುಖಂಡ ಗೋಪಾಲ್ ಜಿ., ಮಂದಿರದ ಅರ್ಚಕ ಪ್ರಮುಖರು, ಶ್ರೀಗಳ ಆಪ್ತ ಕೃಷ್ಣಮೂರ್ತಿ ಭಟ್ ಮೊದಲಾದವರಿದ್ದರು .

ವಿದ್ವಾನ್ ಶಶಾಂಕ್ ಭಟ್ಟರು ಯಾಗ ನೆರವೇರಿಸಿದರು. ಶ್ರೀಶ ಭಟ್, ರವಿರಾಜ್, ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಮೊದಲಾದವರು ಸಹಕರಿಸಿದರು.‌

ಇದೇ ಸಂದರ್ಭದಲ್ಲಿ ಶ್ರೀ ರಾಮನು ತನ್ನ ಜೊತೆ ಎಲ್ಲರನ್ನು ಮೋಕ್ಷಕ್ಕೆ ಕರೆದುಕೊಂಡು ಅವತಾರ ಸಮಾಪ್ತಿ ಮಾಡಿದ ಸ್ಥಳ ಗುಪ್ತಾರ್‌ಘಾಟಿಯಲ್ಲಿ ಶ್ರೀಗಳವರು ಅವಭೃತ ಮಂಗಳಸ್ನಾನ ಆಚರಿಸಿ ಶ್ರೀ ರಾಮನಲ್ಲಿ ಯಜ್ಞದಕರ್ಮ ಸಮರ್ಪಣೆ ಮಾಡಿದರು.

ಅಯೋಧ್ಯೆಗೆ ಕೃಷ್ಣಾಪುರ ಶ್ರೀ ಭೇಟಿ: ಉಡುಪಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮಂಗಳವಾರ ರಾತ್ರಿ ಅಯೋಧ್ಯೆ ತಲುಪಿ, ಬುಧವಾರ ಬೆಳಗ್ಗೆ ಅಲ್ಲಿನ ಪೇಜಾವರ ಮಠದಲ್ಲಿ ಪ್ರಾತಃ ಪೂಜಾವಿಧಿಗಳನ್ನು ಮುಗಿಸಿದ ಬಳಿಕ ಪೇಜಾವರ ಶ್ರೀಗಳೊಂದಿಗೆ ಶ್ರೀ ರಾಮಮಂದಿರಕ್ಕೆ ತೆರಳಿ ಶ್ರೀರಾಮದೇವರ ದರ್ಶನ ಪಡೆದರು. ನಂತರ ಯಾಗ ಶಾಲೆಯಲ್ಲಿ ನಡೆಯುತ್ತಿರುವ ಶ್ರೀ ರಾಮ ತಾರಕ ಯಜ್ಞದ ಪೂರ್ಣಾಹುತಿಯಲ್ಲಿ ಭಾಗವಹಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯ ಬಳಿಕ ಶ್ರೀಗಳ ಮೊದಲ ಭೇಟಿ ಇದಾಗಿದೆ.