ರಾಮಾಯಣ ಸರ್ವಶ್ರೇಷ್ಠ ಮಹಾಕಾವ್ಯ: ಪ್ರೊ. ಶರಣಬಸಪ್ಪ ಬಿಳೆಯಲೆ

| Published : Jul 03 2024, 12:19 AM IST

ಸಾರಾಂಶ

ರಾಮಾಯಣ ಜಗತ್ತಿನ ಸರ್ವಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ.

ರಾಮಾಯಣ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ಕನ್ನಡಪ್ರಭ ವಾರ್ತೆ ಗಂಗಾವತಿ

ರಾಮಾಯಣ ಜಗತ್ತಿನ ಸರ್ವಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಬಳ್ಳಾರಿ- ಕೊಪ್ಪಳದ ಅಧ್ಯಕ್ಷ ಪ್ರೊ. ಶರಣಬಸಪ್ಪ ಬಿಳೆಯಲೆ ಹೇಳಿದರು.ನಗರದ ಸದ್ಭಾವನಾ ಸಂಸ್ಥೆ, ಗಂಗಾವತಿ, ಭಾರತ ಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ರಾಮಾಯಣ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾನಾಡಿದರು.

ಮಹರ್ಷಿ ವಾಲ್ಮೀಕಿ ರಚಿಸಿದ ಪ್ರಸ್ತುತ ರಾಮಾಯಣವು ನೈಜ ಘಟನೆಗಳನ್ನು ಆಧರಿಸಿದ್ದು, ರಾಮಾಯಣದ ಕುರಿತಾದ ಹಲವಾರು ಸಾಕ್ಷಾಧಾರಗಳು ಭಾರತದ ಪ್ರತಿಯೊಂದು ಸ್ಥಳದಲ್ಲಿ ದೊರೆಯುತ್ತಿವೆ. ರಾಮಾಯಣ ಎಂದರೆ ರಾಮನ ಪಯಣ, ರಾಮನ ಮಾರ್ಗ, ರಾಮನ ಪಥ ಎಂದರ್ಥ. ರಾಮನ ಮಾರ್ಗ ಯಾವ ರೀತಿಯಾಗಿತ್ತು ಎನ್ನುವುದನ್ನು ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಯವರು ಏಳು ಕಾಂಡಗಳಲ್ಲಿ ವಿವರಿಸುತ್ತಾರೆ. ರಾಮಾಯಣದ ಏಳು ಕಾಂಡಗಳು 24,000 ಶ್ಲೋಕಗಳು, ಐದುನೂರು ಉಪ ಅಧ್ಯಾಯಗಳನ್ನು ಒಳಗೊಂಡಿದೆ. ಬಾಲ ಕಾಂಡದಿಂದ ಪ್ರಾರಂಭವಾಗಿ ಉತ್ತರ ಕಾಂಡದವರೆಗೆ ಶ್ರೀರಾಮಚಂದ್ರರ ಹತ್ತು ಹಲವಾರು ಸಂಗತಿಗಳನ್ನು ವಿವರಿಸಲಾಗಿದೆ ಎಂದರು.

ಕಿಷ್ಕಿಂದ ಹಾಗೂ ಸುಂದರಕಾಂಡದಲ್ಲಿ ಈ ಪ್ರದೇಶಕ್ಕೆ ಸಂಬಂಧಪಟ್ಟಂತಹ ಕಾಂಡವಾಗಿರುವುದರಿಂದ ಹನುಮಂತ, ವಾಲಿ, ಸುಗ್ರೀವರ ನಡುವಿನ ಸಂಬಂಧಗಳನ್ನು ವಿವರಿಸಿದ್ದಾರೆ. ಶ್ರೀರಾಮಚಂದ್ರ ಹಾಗೂ ಹನುಮಂತನ ನಡುವಿನ ಸಂಬಂಧವನ್ನು ಭಾವನಾತ್ಮಕವಾಗಿ ಸುಂದರವಾಗಿ ವಿವರಿಸಲಾಗಿದೆ.

ಒಟ್ಟಾರೆ ರಾಮಾಯಣದಲ್ಲಿ ಬರುವ ಪ್ರತಿಯೊಂದು ಕಾಂಡದಲ್ಲಿ ಶ್ರೀರಾಮರ ವ್ಯಕ್ತಿತ್ವ, ಹೃದಯವಂತಿಕೆ ಹಾಗೂ ಭಾವನೆಗಳನ್ನ ನಿಯಂತ್ರಿಸುವ ವಿಧಾನವನ್ನು ಶ್ರೀರಾಮಚಂದ್ರರನ್ನು ಉದಾರಣೆಯಾಗಿಸಿಕೊಂಡು ಸವಿಸ್ತಾರವಾಗಿ ವಿವರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀರಾಮ ಹಾಗೂ ಸುಗ್ರೀವರ ಹಾಗೂ ಹನುಮಂತರ ಭೇಟಿಯ ಸ್ಥಳವಾಗಿರುವ ಕಿಷ್ಕಿಂದೆಯ ಪ್ರದೇಶವನ್ನು ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಹೆಚ್ಚಿನ ಜನರಿಗೆ ರಾಮಾಯಣದ ಮಹತ್ವವನ್ನು ಸಾರುವ ಅಂತಹ ಪಾರ್ಕ್ ಹಾಗೂ ಸ್ಮಾರಕಗಳನ್ನು ಅಂಜನಾದ್ರಿಯ ಪ್ರದೇಶದಲ್ಲಿ ಸ್ಥಾಪಿಸಬೇಕು ಎಂದರು.

ಶಾಂತಾ ಸುಬ್ರಹ್ಮಣ್ಯ ರಾಯ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಅಂಗಡಿ, ಹಿರಿಯ ಉದ್ಯಮಿ ಶ್ರೀ ನಿವಾಸಶ್ರೇಷ್ಠಿ ಕೆಲೋಜಿ, ಸದ್ಭಾವನಾ ಸಂಸ್ಥೆಯ ಸುಬ್ರಹ್ಮಣ್ಯ ರಾಯ್ಕರ್, ರವೀಂದ್ರ ಹೂಲಗೇರಿ, ಶಿವಾನಂದ ತಿಮ್ಮಾಪುರ, ಅಜ್ಜಯ್ಯ, ಆನಂದ ಕೆಲೋಜಿ ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ಗುಂಡೂರು ಪವನ್ ಕುಮಾರ್ ಮಾತನಾಡಿದರು. ಗಾಯಿತ್ರಿ ವರ್ಣೆಕರ್ ನಿರೂಪಿಸಿದರು. ರಾಮಾಯಣ ಪರೀಕ್ಷೆಯಲ್ಲಿ ಪ್ರಥಮಸ್ಥಾನ ಮೀರಾ ಪಾನಘಂಟಿ, ವೀಣಾ, ದ್ವಿತೀಯ ಜ್ಯೋತಿ ವರ್ಣೆಕರ್, ತೃತೀಯ ಸುಲೋಚನಾ ಕುಲಕರ್ಣಿ ಹಾಗೂ ಆರು ಜನರಿಗೆ ಸಮಾಧಾನಕರ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. 3ನೇ ಬಾರಿಗೆ ಪರೀಕ್ಷೆ ಬರೆದ 87 ವರ್ಷದ ಅಜ್ಜಿ ಹನುಮಾಕ್ಷಮ್ಮ ಅವರನ್ನು ಸನ್ಮಾನಿಸಲಾಯಿತು.