ಅರ್ಥಪೂರ್ಣ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳ ಆಶಯಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಫೆ.27ರಿಂದ ನಡೆಯಲಿರುವ ರಂಭಾಪುರಿ ಪೀಠದ ಜಾತ್ರಾ ಮಹೋತ್ಸವದಲ್ಲಿ ಧರ್ಮ ಮತ್ತು ಸಂಸ್ಕೃತಿಗೆ ಒತ್ತು ನೀಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಅರ್ಥಪೂರ್ಣಗೊಳಿಸಲಾಗುವುದು ಎಂದು ರಂಭಾಪುರಿ ಶಾಖಾ ಮಠ ಯಡಿಯೂರು ಕ್ಷೇತ್ರದ ಷ.ಬ್ರ.ರೇಣುಕ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ವೀರಭದ್ರಸ್ವಾಮಿ ಮಹಾ ರಥೋತ್ಸವ ಹಿನ್ನೆಲೆಯಲ್ಲಿ ರಂಭಾಪುರಿ ಪೀಠದಲ್ಲಿ ಸೋಮವಾರ ನಡೆದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈ ಬಾರಿ ಜಾತ್ರೆಯನ್ನು ಸ್ಥಳೀಯ ನಾಗರಿಕರು, ಸರ್ವ ಧರ್ಮದ ಬಾಂಧವರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಸಬೇಕು ಎಂಬ ನಿಟ್ಟಿನಲ್ಲಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಸ್ಥಳೀಯ ಗಣ್ಯರ ಸಭೆ ನಡೆಸುತ್ತಿದ್ದಾರೆ ಎಂದರು.ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಯಾವುದನ್ನು ಅನುಷ್ಠಾನಕ್ಕೆ ತರಬಹುದು ಎಂಬುದನ್ನು ಯೋಚಿಸಿ, ಜಗದ್ಗುರುಗಳ ಗಮನಕ್ಕೆ ತಂದು ಕಾರ್ಯರೂಪಕ್ಕೆ ತರಲಾಗುವುದು. ಧರ್ಮ ಸಭೆಗೆ ರಾಜಕಾರಣಿಗಳನ್ನು ಆಹ್ವಾನಿಸಿ, ಇತರೆ ಕಾರ್ಯಕ್ರಮ ನಡೆಸುವ ಕುರಿತು ಚಿಂತಿಸಲಾಗುವುದು.ಜಾತ್ರಾ ಮಹೋತ್ಸವದ ಪ್ರಚಾರವನ್ನು ಆಟೋ ಮೂಲಕ ನಡೆಸಲಾಗುವುದು. ಮನೆ ಮನೆಗೆ ಕರಪತ್ರ, ಬಿತ್ತಿಪತ್ರ ಹಂಚಿ ಪ್ರಚಾರ ನಡೆಸಲು ಸ್ಥಳೀಯರು ಸಿದ್ಧತೆ ಮಾಡಬೇಕು. ಸಭೆಯಲ್ಲಿ ಸಲಹೆ ನೀಡಿರುವಂತೆ ಹೊರೆ ಕಾಣಿಕೆ ಸ್ವೀಕಾರ, ಪಟ್ಟಣದಿಂದ ರಂಭಾಪುರಿ ಪೀಠಕ್ಕೆ ಜಗದ್ಗುರುಗಳ ಮೆರವಣಿಗೆಗೆ ಸಿದ್ಧತೆ ಕೈಗೊಳ್ಳಲಾಗುವುದು. ಇದು ಕೇವಲ ರಂಭಾಪುರಿ ಪೀಠದ ಕಾರ್ಯಕ್ರಮವಾಗದೆ ಬಾಳೆಹೊನ್ನೂರು ಪಟ್ಟಣದ ಕಾರ್ಯಕ್ರಮವಾಗಬೇಕು ಎಂದು ಹೇಳಿದರು.ಸಿದ್ಧರಬೆಟ್ಟ ಕ್ಷೇತ್ರದ ಷ.ಬ್ರ.ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆ, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ಸೂಕ್ತ ತೀರ್ಮಾನ ಕೈಗೊಂಡು ಅನುಷ್ಠಾನಗೊಳಿಸಲಾಗುವುದು. ಮಕ್ಕಳಿಗೆ ಶಿಕ್ಷಣ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ತಿಳಿ ಹೇಳುವ ಉತ್ತಮ ದಿಕ್ಸೂಚಿ ಭಾಷಣಕಾರರಿಂದ ಭಾಷಣಕ್ಕೆ ವ್ಯವಸ್ಥೆ ಜಗದ್ಗುರುಗಳ ಶೋಭಾಯಾತ್ರೆ ಬಗ್ಗೆಯೂ ಅಗತ್ಯ ತಯಾರಿ ಮಾಡಲಾಗುವುದು. ಕೃಷಿ ಮೇಳ, ಆರೋಗ್ಯ ತಪಾಸಣೆ, ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಉತ್ತಮ ಊಟೋಪಚಾರ ವ್ಯವಸ್ಥೆ ಮಾಡಬೇಕು ಎಂಬ ಯೋಜನೆಯಿದೆ. ಆಯಾ ಪ್ರಾಂತ್ಯಗಳ ಸಸ್ಯಾಹಾರ ಪದ್ಧತಿ ಅಡುಗೆಗಳನ್ನು ಪ್ರತ್ಯೇಕವಾಗಿ ಮಾಡಿಸುವ ಯೋಜನೆ ಇದೆ. ಆದರೆ ಇದಕ್ಕೆ ಅಗತ್ಯ ಸ್ವಯಂ ಸೇವಕರು, ಜಾಗದ ವ್ಯವಸ್ಥೆಯಾಗಬೇಕಿದೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವಗೌಡ ಮಾತನಾಡಿ, ರಂಭಾಪುರಿ ಜಾತ್ರೆ ನಮ್ಮೂರ ಜಾತ್ರೆ ಯಾಗಬೇಕು ಎಂಬುದು ಗಣಪತಿ ಉತ್ಸವ, ದುರ್ಗಾ ಮಹೋತ್ಸವ ಮಾದರಿಯಲ್ಲಿ ಇದನ್ನು ಪ್ರತಿಯೊಬ್ಬರೂ ಒಗ್ಗೂಡಿ ನಡೆಸಬೇಕು ಎಂದು ತಿಳಿಸಿದ್ದಾರೆ. ಎಲ್ಲ ಸಮುದಾಯ ಬಾಂಧವರು ಸ್ವಯಂ ಪ್ರೇರಿತವಾಗಿ ಭಾಗವಹಿಸುವ ಮೂಲಕ ಕೋಮು ಸೌಹಾರ್ದತೆಯ ಜಾತ್ರೆಯಾಗಬೇಕು ಎಂದು ಹೇಳಿದರು.ವಿಹಿಂಪ ಹಾಸನ ವಿಭಾಗದ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ರಂಭಾಪುರಿ ಜಾತ್ರೆಯನ್ನು ಪ್ರತಿ ವರ್ಷಕ್ಕಿಂತ ಇನ್ನಷ್ಟು ಯಶಸ್ವಿಗೊಳಿಸುವ ಉದ್ದೇಶದಿಂದ ನಗರ ಶೃಂಗಾರ, ಗೃಹ ಸಂಪರ್ಕ, ಆಟೋ ಪ್ರಚಾರ ಹೆಚ್ಚಾಗಿ ಮಾಡಬೇಕಿದೆ. ಇದಕ್ಕಾಗಿ ಪ್ರತ್ಯೇಕ ತಂಡ, ಸಮಿತಿ ನಡೆಸಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಹುಲಿಗೆ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯರು, ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಅಧ್ಯಕ್ಷ ಬಸವರಾಜ್ ಉಪ್ಪಳ್ಳಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಹನೀಫ್, ಕಾಫಿ ಬೆಳೆಗಾರ ಟಿ.ಎಂ.ನಾಗೇಶ್, ಎಂ.ಆರ್.ಬಾಲಕೃಷ್ಣ, ಪ್ರಮುಖರಾದ ಬಿ.ಕೆ.ಮಧುಸೂದನ್, ಬಿ.ಜಗದೀಶ್ಚಂದ್ರ, ಎಚ್.ಆರ್. ಆನಂದ್, ವೀರೇಶ ಕುಲಕರ್ಣಿ, ಹಿರಿಯಣ್ಣ, ಓ.ಡಿ.ಸ್ಟೀಫನ್, ಕಾರ್ತಿಕ್ ಕಾರ್‌ಗದ್ದೆ, ಎಚ್.ಜೆ.ವಿಕ್ರಮ್, ಎಂ.ವಿ.ತಿಮ್ಮಯ್ಯ, ಯಜ್ಞಪುರುಷಭಟ್, ಮಂಜುನಾಥ್ ತುಪ್ಪೂರು, ವಿದ್ಯಾ ಎ.ಶೆಟ್ಟಿ, ಜ್ಯೋತಿ ಜಗದೀಶ್, ಸತೀಶ್ ಜೈನ್, ಶ್ರೀಕೃಷ್ಣಭಟ್, ವರ್ಷಾ ವೆಂಕಟೇಶ್, ಶಬ್ರೀನ್, ಸರಿತಾ ಮತ್ತಿತರರು ಹಾಜರಿದ್ದರು.೦೯ಬಿಹೆಚ್‌ಆರ್ ೧

ಬಾಳೆಹೊನ್ನೂರು ರಂಭಾಪುರಿ ಪೀಠದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವಗೌಡ ಮಾತನಾಡಿದರು. ಯಡಿಯೂರು ರೇಣುಕ ಶಿವಾಚಾರ್ಯರು, ಸಿದ್ಧರಬೆಟ್ಟ ವೀರಭದ್ರ ಶಿವಾಚಾರ್ಯರು, ಹುಲಿಗೆ ಸೋಮೇಶ್ವರ ಶಿವಾಚಾರ್ಯರು, ಆರ್.ಡಿ.ಮಹೇಂದ್ರ, ಬಸವರಾಜ್, ಚಂದ್ರಮ್ಮ, ಮಹಮ್ಮದ್ ಹನೀಫ್ ಇದ್ದರು.