ಕೃಷ್ಣನ ಜಾಗರ ಪೂಜೆಯನ್ನು ಕಣ್ತುಂಬಿಕೊಂಡ ರಾಮ್‌ದೇವ್

| Published : Oct 25 2024, 12:59 AM IST

ಸಾರಾಂಶ

ಶ್ರೀ ಕೃಷ್ಣ ಮಠದಲ್ಲಿ ಒಂದು ತಿಂಗಳ ಯೋಗ ನಿದ್ರೆಯಿಂದ ಭಗವಂತನನ್ನು ಎಬ್ಬಿಸುವ, ಮುಂಜಾನೆ ಬ್ರಾಹ್ಮೀಮುಹೂರ್ತದಲ್ಲಿ ನಡೆಯುವ ಪಶ್ಚಿಮ ಜಾಗರ ಪೂಜೆಯಲ್ಲಿ ಗುರುವಾರ ಬಾಬಾ ರಾಮ್‌ದೇವ್‌ ಪಾಲ್ಗೊಂಡು, ಅತೀ ವಿಶಿಷ್ಟವಾದ ಈ ಪೂಜೆಯನ್ನು ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ಕೃಷ್ಣ ಮಠದಲ್ಲಿ ಒಂದು ತಿಂಗಳ ಯೋಗ ನಿದ್ರೆಯಿಂದ ಭಗವಂತನನ್ನು ಎಬ್ಬಿಸುವ, ಮುಂಜಾನೆ ಬ್ರಾಹ್ಮೀಮುಹೂರ್ತದಲ್ಲಿ ನಡೆಯುವ ಪಶ್ಚಿಮ ಜಾಗರ ಪೂಜೆಯಲ್ಲಿ ಗುರುವಾರ ಬಾಬಾ ರಾಮ್‌ದೇವ್‌ ಪಾಲ್ಗೊಂಡು, ಅತೀ ವಿಶಿಷ್ಟವಾದ ಈ ಪೂಜೆಯನ್ನು ಕಣ್ತುಂಬಿಕೊಂಡರು.ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠದ ಗರ್ಭಗುಡಿಯ ಸುತ್ತಲೂ ದೀಪಗಳನ್ನು ಬೆಳಗಿಸಲಾಯಿತು. ಬಾಬಾ ರಾಮ್‌ದೇವ್‌ ಅವರು ದೀಪವನ್ನು ಬೆಳಗಿಸಿ ಈ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀ ಕೃಷ್ಣನಿಗೆ ಜಾಗರ ಪೂಜೆಯನ್ನು ನೆರವೇರಿಸಿದರು. ಗರ್ಭಗುಡಿಯ ಸುತ್ತಲೂ ದೀಪದ ಬೆಳಕಿನಲ್ಲಿ ವಾದ್ಯ ಸೇವೆಗಳೊಂದಿಗೆ ಪಶ್ಚಿಮ ಜಾಗರ ಪೂಜೆಯು ವೈಭವದಿಂದ ನಡೆಯಿತು.ನಂತರ ರಾಜಾಂಗಣದಲ್ಲಿ ನಡೆದ ವಿಶೇಷ ಯೋಗ ಜ್ಞಾನ ಪ್ರಾಣ ಶಿಬಿರದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಬಾಬಾ ರಾಮ್‌ದೇವ್‌ ಪಾಲ್ಗೊಂಡು ಅಸಂಖ್ಯಾತ ಭಕ್ತರ ಉಪಸ್ಥಿತಿಯಲ್ಲಿ ಯೋಗಾಸನಗಳನ್ನು ಮಾಡಿದರು.ಇದಕ್ಕೆ ಮೊದಲು ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಪೂರ್ಣಕುಂಭ ಸ್ವಾಗತ ಮಾಡಿ, ಬಾಬಾ ರಾಮ್‌ದೇವ್‌ ಅವರಿಗೆ ಶ್ರೀ ಕೃಷ್ಣ ಮುಖ್ಯಪ್ರಾಣ ಹಾಗೂ ಗರುಡ ದೇವರ ದರ್ಶನ ಮಾಡಿಸಿ ಶ್ರೀ ಕೃಷ್ಣನ ಪ್ರಸಾದ ನೀಡಿದರು. ನಂತರ ಗೀತಾನಂದಿರಕ್ಕೆ ಭೇಟಿ ನೀಡಿ ಪುತ್ತಿಗೆ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞವನ್ನು ಕಂಡು ಆನಂದವನ್ನು ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಪತಂಜಲಿ ಪೀಠದ ಉಪಕುಲಪತಿ ಬಾಲಕೃಷ್ಣ ಆಚಾರ್ಯ, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು.