ಭಾಗ್ಯನಗರ ಪಪಂ ಅಭಿವೃದ್ಧಿ ಮಾಡುವುದಕ್ಕೆ ಸಾಕಷ್ಟು ಅವಕಾಶ ಇದ್ದು, ಅದನ್ನು ಆದ್ಯತೆಯ ಮೇಲೆ ಮಾಡಲಾಗುವುದು
ಕೊಪ್ಪಳ:ತುಕಾರಾಮಪ್ಪ ಗಡಾದ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಿರೀಕ್ಷೆಯಂತೆ 8ನೇ ವಾರ್ಡ್‌ನ ಸದಸ್ಯ ರಮೇಶ ಹ್ಯಾಟಿ ಭಾಗ್ಯನಗರ ಪಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಜನತಾ ಪಾರ್ಟಿಗೆ ಬಹುಮತ ಇದ್ದರೂ ಸಹ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತು ಸಂಸದ ರಾಜಶೇಖರ ಹಿಟ್ನಾಳ ಮತದೊಂದಿಗೆ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಿದೆ.ಬಿಜೆಪಿಯಿಂದ ವಾಸುದೇವ ನಾಗುಸಾ ಮೇಘರಾಜ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಬಿಜೆಪಿ ಪಕ್ಷದ 9 ಮತಗಳು ಮಾತ್ರ ಲಭಿಸಿದ್ದರಿಂದ ಪ್ರಭಾವಗೊಂಡರು.
ರಮೇಶ ಹ್ಯಾಟಿ ಅವರಿಗೆ ಕಾಂಗ್ರೆಸ್ ಸದಸ್ಯರ 8 ಮತ, ಇಬ್ಬರು ಪಕ್ಷೇತರರು ಹಾಗೂ ಸಂಸದರು ಹಾಗೂ ಶಾಸಕರ ಮತ ಸೇರಿ 12 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು.ಈ ಮೂಲಕ ಉಳಿದ ಹದಿನೈದು ತಿಂಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಿಜಯೋತ್ಸವ: ರಮೇಶ ಹ್ಯಾಟಿ ಆಯ್ಕೆಯಾಗುತ್ತಿದ್ದಂತೆ ವಿಜಯೋತ್ಸವದ ಸಂಭ್ರಮ ಮುಗಿಲುಮುಟ್ಟಿತ್ತು. ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ ಕೇಕೆ ಹಾಕಿದರು.ಭಾಗ್ಯನಗರದಲ್ಲಿ ಈ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಜಯದ ಯಾತ್ರೆ ಮುಂದುವರೆಸಿದಂತಾಯಿತು.
ಭಾರತೀಯ ಜನತಾ ಪಾರ್ಟಿ ಪಕ್ಷೇತರರ ಮತಗಳನ್ನು ನೆಚ್ಚಿಕೊಂಡು ಅಖಾಡಕ್ಕೆ ಇಳಿದಿತ್ತಾದರೂ ಪಕ್ಷೇತರ ಮತಗಳು ಅವರತ್ತ ಒಲಿಯಲಿಲ್ಲ. ಅಷ್ಟಕ್ಕೂ ಚುನಾವಣೆಗೂ ಮುನ್ನವೇ ಪಕ್ಷೇತರ ಸದಸ್ಯರಿಬ್ಬರು ಸಹ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಚುನಾವಣೆಗೂ ಮುನ್ನದ ಪ್ರವಾಸದಲ್ಲಿಯೂ ಕಾಂಗ್ರೆಸ್ ಸದಸ್ಯರ ಜತೆಗೆ ಗುರುತಿಸಿಕೊಂಡಿದ್ದರು.ಅಭಿವೃದ್ಧಿಗೆ ಆದ್ಯತೆ, ಭ್ರಷ್ಟಾಚಾರಕ್ಕೆ ಬ್ರೇಕ್: ಹ್ಯಾಟಿ
ಭಾಗ್ಯನಗರದ ಪಪಂ ಅಧ್ಯಕ್ಷರಾಗಿ ಈ ಹಿಂದೆ ನಮ್ಮ ತಾಯಿ ಹುಲಿಗೆಮ್ಮ ಕೇವಲ ಐದು ತಿಂಗಳು ಕಾಲ ಮಾತ್ರ ಸೇವೆ ಸಲ್ಲಿಸಿದ್ದರು. ಈಗ ಮತ್ತೊಂದು ಅವಕಾಶ ನೀಡಿದ್ದು, ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿ, ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ನೂತನ ಅಧ್ಯಕ್ಷ ರಮೇಶ ಹ್ಯಾಟಿ ಹೇಳಿದ್ದಾರೆ.ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಭಾಗ್ಯನಗರ ಪಪಂ ಅಭಿವೃದ್ಧಿ ಮಾಡುವುದಕ್ಕೆ ಸಾಕಷ್ಟು ಅವಕಾಶ ಇದ್ದು, ಅದನ್ನು ಆದ್ಯತೆಯ ಮೇಲೆ ಮಾಡಲಾಗುವುದು ಎಂದಿದ್ದಾರೆ.
ಫಾರ್ಮ್ ನಂ. 3 ಪಡೆಯುವುದು ಸೇರಿದಂತೆ ಪಪಂ ಕೆಲಸ ಕಾರ್ಯ ಜನರ ಸೇವೆ ಎಂದು ಮಾಡುವಂತೆ ಮಾಡುತ್ತೇನೆ. ಇದರಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.