ರಮೇಶ ಜಿಗಜಿಣಗಿ ವಿರುದ್ಧ ಬಂಜಾರ ಸಮುದಾಯ ಕೆಂಡ

| Published : Apr 21 2024, 02:21 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಬಂಜಾರ ಸಮಾಜದ ಕುರಿತು ಅತ್ಯಂತ ಕೀಳಾಗಿ ಮಾತಾಡಿದ್ದಾರೆ ಎಂದು ಆರೋಪಿಸಿ ಬಂಜಾರ ಸಮಾಜದ ಮುಖಂಡರು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗರಂ ಆಗಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸಿರುವ ಸಮುದಾಯದ ಮುಖಂಡರು, ಚುನಾವಣೆಯಲ್ಲಿ ಜಿಣಜಿಣಗಿಗೆ ತಕ್ಕ ಪಾಠ ಕಲಿಸುವಂತೆ ಮಾಜಿ ಜಿಪಂ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಬಂಜಾರ ಮಹಾಸಭಾ ಅಧ್ಯಕ್ಷ ಅರ್ಜುನ ರಾಠೋಡ ಕರೆ ನೀಡಿದರು

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಬಂಜಾರ ಸಮಾಜದ ಕುರಿತು ಅತ್ಯಂತ ಕೀಳಾಗಿ ಮಾತಾಡಿದ್ದಾರೆ ಎಂದು ಆರೋಪಿಸಿ ಬಂಜಾರ ಸಮಾಜದ ಮುಖಂಡರು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗರಂ ಆಗಿದ್ದಾರೆ. ಅವರ ಹೇಳಿಕೆಯನ್ನು ಖಂಡಿಸಿರುವ ಸಮುದಾಯದ ಮುಖಂಡರು, ಚುನಾವಣೆಯಲ್ಲಿ ಜಿಣಜಿಣಗಿಗೆ ತಕ್ಕ ಪಾಠ ಕಲಿಸುವಂತೆ ಮಾಜಿ ಜಿಪಂ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಬಂಜಾರ ಮಹಾಸಭಾ ಅಧ್ಯಕ್ಷ ಅರ್ಜುನ ರಾಠೋಡ ಕರೆ ನೀಡಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಒಟ್ಟು 518 ತಾಂಡಾಗಳಿದ್ದು, 2.40 ಲಕ್ಷ ಮತಗಳಿವೆ. ಸಮಾಜವನ್ನು ಅವಮಾನಿಸಿರುವ ಜಿಗಜಿಣಗಿ ಅವರಿಗೆ ಬಂಜಾರ ಸಮಾಜದ ಯಾರೂ ಮತ ಹಾಕಬಾರದೆಂದು ನಿರ್ಣಯಿಸಿದ್ದೇವೆ. 3 ಬಾರಿ ಸಂಸದರಾಗಿರುವ ಜಿಲ್ಲೆಗೆ ಅವರ ಕೊಡುಗೆ ಸೊನ್ನೆ. ಜಿಲ್ಲೆಯ ಯಾವುದೇ ತಾಂಡಾಕ್ಕೆ ಕೇಂದ್ರ ಸರ್ಕಾರದ ಅನುದಾನ ನೀಡಿಲ್ಲ, ಪ್ರತಿ ಬಾರಿ ಜಿಗಜಿಣಗಿಯವರು ದಲಿತ ಸಮುದಾಯದ ಮತಗಳನ್ನು ಪಡೆದು ಅವರ ಸರ್ವಾಂಗೀಣ ಅಭಿವೃದ್ಧಿಗೆ ಅನುದಾನ ನೀಡದೆ ವಂಚಿಸಿದ್ದಾರೆ. ಈ ಬಾರಿ ಎಲ್ಲಾ ದಲಿತ ಸಮುದಾಯದವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರನ್ನು ಬೆಂಬಲಿಸಲಿದ್ದಾರೆ ಎಂದು ಘೋಷಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ನೀರಾವರಿ ಕ್ಷೇತ್ರದಲ್ಲಿ ಸಚಿವರಾದ ಎಂ.ಬಿ.ಪಾಟೀಲರು ಕೈಗೊಂಡ ಕಾಮಗಾರಿಗಳೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆ ಆಗಲಿದೆ. ಕಾಂಗ್ರೆಸ್ ಪಕ್ಷದಿಂದ ಬಂಜಾರ ಸಮುದಾಯಕ್ಕೆ ವಿಶೇಷ ಸ್ಥಾನಮಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಲಿದ್ದೇವೆ. ಭಾನುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ರಾಜಕೀಯ ವಿಷಯದ ಸ್ಪೋಟಕ ಮಾಹಿತಿ ಬಹಿರಂಗವಾಗಲಿದೆ. ಕಾದು ನೋಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಿದ್ದೇನೆ ಎಂದು ಹೇಳಿದರು.ತಾಲೂಕ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸರಿತಾ ನಾಯಕ ಮಾತನಾಡಿ, ಚುನಾವಣೆಯ ಸಮಯದಲ್ಲಿ ನಮ್ಮ ಸರ್ಕಾರ ಕೊಟ್ಟ ಭರವಸೆ ಈಡೇರಿಸಿದ್ದಾರೆ, ಐದು ಗ್ಯಾರಂಟಿಗಳಿಂದ ಸಮಾಜದ ಮಹಿಳೆಯರಿಗೆ, ಯುವಕರಿಗೆ ಹಾಗೂ ಬಡ ಜನರಿಗೆ ಅನುಕೂಲವಾಗಿದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಕಾಮಸಿಂಗ ಪವಾರ, ಶುಬೇಂದ್ರ ನಾಯಕ್, ಲಲಿತಾ ದೊಡಮನಿ, ಸಂಜೀವ ರಾಠೋಡ, ಸಾಂತಾ ರಾಠೋಡ, ಸುರೇಶ ರಾಠೋಡ, ಲಕ್ಷ್ಮೀ ನಾಯಕ, ಅರ್ಜುನ ಪವಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

---ಕೋಟ್‌

ಈ ಬಾರಿ ಚುನಾವಣೆಯಲ್ಲಿ ನಮ್ಮ ಸಮಾಜದ ಬಗ್ಗೆ ಅಪಮಾನ, ಸೊಕ್ಕಿನ ಮಾತನಾಡಿದ ಜಿಗಜಿಣಗಿ ಅವರಿಗೆ ತಕ್ಕ ಪಾಠ ಕಲಿಸಲಿದ್ದೇವೆ. ವಿಜಯಪುರ ಮೀಸಲು ಕ್ಷೇತ್ರದ ಬಂಜಾರರ ಪ್ರತಿ ಮನೆ ಮನೆಗೆ ತೆರಳಿ ನಮ್ಮ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿರುವ ಜಿಗಜಿಣಗಿ ಅವರಿಗೆ ಮತ ಹಾಕದಂತೆ ಮನವಿ ಮಾಡುತ್ತೇವೆ.

-ಬಿ.ಬಿ.ಲಮಾಣಿ, ಸಮಾಜದ ಮುಖಂಡ.