ದಾಂಡೇಲಿಯಲ್ಲಿ ಸಂಭ್ರಮದ ರಾಮಲೀಲೋತ್ಸವ

| Published : Oct 14 2024, 01:17 AM IST

ಸಾರಾಂಶ

ಕಾರ್ಯಕ್ರಮದಲ್ಲಿ ೫೦ ಅಡಿ ಎತ್ತರದ ರಾವಣನ ಮೂರ್ತಿ ೪೬ ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥರ ಮೂರ್ತಿಗಳನ್ನು ಸಹಸ್ರಾರು ಜನರ ಸಮಾಗಮದೊಂದಿಗೆ ಸುಡಲಾಯಿತು.

ದಾಂಡೇಲಿ: ಪ್ರತಿವರ್ಷದಂತೆ ಈ ವರ್ಷವೂ ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆ ಡಿಲಕ್ಸ್ ಮೈದಾನದಲ್ಲಿ ನಡೆದ ರಾಮಲೀಲೋತ್ಸವವು ಶನಿವಾರ ಸಂಭ್ರಮ ಹಾಗೂ ಆಕರ್ಷಕವಾಗಿ ಸಂಪನ್ನಗೊಂಡಿತು.ಸಂಜೆ ೭.೩೦ರಿಂದ ೯ ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ೫೦ ಅಡಿ ಎತ್ತರದ ರಾವಣನ ಮೂರ್ತಿ ೪೬ ಅಡಿ ಎತ್ತರದ ಕುಂಭಕರ್ಣ ಮತ್ತು ಮೇಘನಾಥರ ಮೂರ್ತಿಗಳನ್ನು ಸಹಸ್ರಾರು ಜನರ ಸಮಾಗಮದೊಂದಿಗೆ ಸುಡಲಾಯಿತು. ಈ ಮೂರ್ತಿಗಳಿಗೆ ಆಗ್ನಿಸ್ಪರ್ಶ ಮಾಡುವ ಮೊದಲು ಕಾರ್ಖಾನೆಯವರಿಂದ ಸುಮಾರು ಒಂದು ತಾಸು ಎರಡು ತಂಡಗಳಿಂದ ಅತ್ಯಾಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು ೫೦ ಸಾವಿರ ಜನ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ, ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಹಿರಿಯ ಉಪಾಧ್ಯಕ್ಷ ಅನೂಜ್ ತಯಾಳ್, ದಾಂಡೇಲಿ ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಪೌರಾಯುಕ್ತ ರಾಜಾರಾಮ ಪವಾರ, ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸಿಪಿಐ ಭೀಮಣ್ಣ ಸೂರಿ, ಪಿಆರ್‌ಒಗಳಾದ ರಾಜೇಶ ತಿವಾರಿ, ರಾಘವೇಂದ್ರ ಜೆ.ಆರ್., ಕಾರ್ಖಾನೆಯ ಹಿರಿಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.

ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಸ್ವಾಗತಿಸಿದರು. ರಾಘವೇಂದ್ರ ಜೆ.ಆರ್. ವಂದಿಸಿದರು. ಪಾರೀಕ ಮತ್ತು ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಗೋಕರ್ಣದಲ್ಲಿ ರಾಮಕಥಾ ಮಾಲಿಕೆ ಸಂಪನ್ನ

ಗೋಕರ್ಣ: ಇಲ್ಲಿನ ಭದ್ರಕಾಳಿ ಕಾಲೇಜಿನ ಬೃಹತ್ ಮೈದಾನದಲ್ಲಿ ಎಂಟು ದಿನಗಳ ಕಾಲ ನಡೆದ ಗುಜರಾತಿನ ಖ್ಯಾತ ಪ್ರವಚನಕಾರ ಮುರಾರಿ ಬಾಪುರವರಿಂದ ನಡೆಯುತ್ತಿದ್ದ ರಾಮಕಥಾ ಮಾಲಿಕೆ ಭಾನುವಾರ ಸಂಪನ್ನಗೊಂಡಿತು.ಅ. ೫ರಿಂದ ಪ್ರತಿದಿನ ಮುಂಜಾನೆ ೧೦ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ನಡೆದ ತುಳಸಿ ರಾಮಾಯಣ ಕಥಾಮಾಲಿಕೆಯಲ್ಲಿ ವಿವಿಧ ದೃಷ್ಟಾಂತದ ಮೂಲಕ ಮನೋಜ್ಞವಾಗಿ ಮುರಾರಿ ಬಾಪು ವಿವರಿಸಿದರು.ಪ್ರತಿದಿನ ಸಂಜೆ ಕುಡ್ಲೆ ಕಡಲತೀರದ ವಿಹಂಗಮ ನೋಟದ ನಿರಾಮಯ ರೆಸಾರ್ಟನ ತೆರದ ವೇದಿಕೆಯಲ್ಲಿ ಶಿಷ್ಯ ವೃಂದದಿಂದ ಭಕ್ತಿ ನೃತ್ಯ ಬಹು ಆಕರ್ಷಕವಾಗಿ ಮೂಡಿ ಬಂತು.

ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಒಡಿಶಾ, ಗುಜರಾತ್‌ ಸೇರಿದಂತೆ ದೇಶದ ಹಲವು ರಾಜ್ಯಗಳ ಜನರು ಪಾಲ್ಗೊಂಡಿದ್ದರು. ಈ ಮಾಲಿಕೆಗೆ ಮೂರುಸಾವಿರಕ್ಕೂ ಅಧಿಕ ಜನರು ಕುಳಿತುಕೊಳ್ಳಲು ಮಾಡಿದ ವ್ಯವಸ್ಥೆಯಲ್ಲಿ ಬಹುತೇಕ ಭರ್ತಿಯಾಗಿತ್ತು.ಜನಸಾಗರ:ಪ್ರತಿದಿನ ಬೆಳಗ್ಗೆ ದಕ್ಷಿಣ ಹಾಗೂ ಉತ್ತರ ಭಾರತ ಶೈಲಿಯ ತಿಂಡಿ, ಮಧ್ಯಾಹ್ನ, ಸಂಜೆ ಊಟವನ್ನು ಸಾರ್ವಜನಿಕರಿಗೆ ನೀಡಲಾಗಿತ್ತು. ಉತ್ತರ ಭಾರತದ ಬಹುವಿಶೇಷ, ವಿಶಿಷ್ಟ ಭೋಜನದಲ್ಲಿ ಏಳೆಂಟು ಬಗೆಯ ಸಿಹಿ ತಿನಿಸು, ಚಪಾತಿ, ರೋಟಿ ಹೀಗೆ ಬಗೆಯ ಆಹಾರ ನೀಡಲಾಗಿತ್ತು.

ಈ ಭಾಗದ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಈ ಊಟದ ರುಚಿ ಸವಿದರು. ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಈ ವಿಶೇಷ ಪ್ರಸಾದ ರೂಪದ ಉಚಿತ ಭೋಜನ ನೀಡಿದ್ದು ಮತ್ತೊಂದು ವಿಶೇಷವಾಗಿತ್ತು. ಇತ್ತೀಚಿನ ದಿನದಲ್ಲಿ ಪುಣ್ಯಕ್ಷೇತ್ರದಲ್ಲಿ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮವಾಗಿರುವುದು ಇದೇ ಮೊದಲನೆಯದಾಗಿದೆ.ಹೆಲಿಕ್ಯಾಪ್ಟರ್‌ನಲ್ಲಿ ತೆರಳಿದ ಬಾಪು: ಬಾಪು ಅವರಿಗಾಗಿ ಇಲ್ಲಿನ ಗೋಗರ್ಭದ ಕ್ರೀಡಾಂಗಣದಲ್ಲಿ ವಿಶೇಷ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಹುಬ್ಬಳಿಯಿಂದ ಇಲ್ಲಿಗೆ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ್ದರು. ಅದರಂತೆ ಭಾನುವಾರ ಮಧ್ಯಾಹ್ನ ಸಹ ಹೆಲಿಕ್ಯಾಪ್ಟರ್ ಮೂಲಕ ವಾಪಸ್‌ ತೆರಳಿದರು. ಇಲ್ಲಿ ಹೆಲಿಕ್ಯಾಪ್ಟರ್ ಬರುವದನ್ನು ನೊಡಲೆಂದೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.