ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಐತಿಹಾಸಿಕ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ, ಬಾಲ ರಾಮನ ಪ್ರತಿಷ್ಠಾಪನೆಯ ಸಂಭ್ರಮವನ್ನು ಇಲ್ಲಿನ ಜನತೆ ಭಕ್ತಿ ಭಾವ ತನ್ಮಯತೆಯಿಂದ ಕಣ್ತುಂಬಿಕೊಳ್ಳುವ ಜತೆಗೆ ರಾಮ ಸೇವೆಯ ಸಂಭ್ರಮದಲ್ಲಿ ಧನ್ಯತೆ ಪಡೆಯಿತು.ಅಶ್ವತ್ಥಪುರ ಸೀತಾರಾಮ ಚಂದ್ರ ದೇವಸ್ಥಾನಕ್ಕೆ ರಾಮ ನಾಮ ಸಂಕೀರ್ತನ ಪಾದಯಾತ್ರೆಯಿಂದ ಆರಂಭಗೊಂಡಿದ್ದ ರಾಮೋತ್ಸವದ ಉತ್ಸಾಹ ವಾರಗಳ ಕಾಲ ರಾಮ ಕಥಾ ಸಪ್ತಾಹ, ನಿತ್ಯವೂ ಸಾಮೂಹಿಕ ರಾಮ ಮಂತ್ರ ಪಠನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರುಗಿತ್ತು.ಸೋಮವಾರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಪರಾಹ್ನ ವಿಶೇಷ ಪೂಜೆ, ಹನುಮಂತ ದೇವಸ್ಥಾನಕ್ಕೆ ಭಜಕರು ಹಣ್ಣು ಹಂಪಲು, ಒಣಹಣ್ಣುಗಳನ್ನು ಹರಿವಾಣದಲ್ಲಿರಿಸಿ ತಲೆಯಲ್ಲಿ ಹೊತ್ತು ಸಾಗಿದರು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಜಕರಿಗೆ ಪಾನಕ ವಿತರಣೆ, ಸಹಿತ ಪಾನೀಯಗಳನ್ನು ಒದಗಿಸಿ ಅನೇಕ ಮಂದಿ ಸೇವೆ ಸಲ್ಲಿಸಿದರು. ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ ಎಲ್.ಇ.ಡಿ ಬೃಹತ್ ಪರದೆಯಲ್ಲಿ ಕಾರ್ಯಕ್ರಮಗಳ ನೇರ ಪ್ರಸಾರವನ್ನೂ ಭಾರಿ ಸಂಖ್ಯೆಯಲ್ಲಿ ಭಜಕರು ಜಯಘೋಷಗಳೊಂದಿಗೆ ಕಣ್ತುಂಬಿಕೊಂಡರು. ಮಹಾ ಅನ್ನಪ್ರಸಾದ ವಿತರಣೆಯಲ್ಲಿ ಏಳು ಸಾವಿರಕ್ಕೂ ಅಧಿಕ ಭಜಕರು ಸರತಿ ಸಾಲಲ್ಲಿ ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.ಸಂಜೆ ಆದರ್ಶ ಗೋಖಲೆಯವರಿಂದ ಉಪನ್ಯಾಸ, ಕರಸೇವಕರಿಗೆ ಗೌರವ ಕಾರ್ಯಕ್ರಮ, ದೀಪಾಲಂಕಾರ, ಕರಸೇವಕರಿಂದ ಹೂವಿನ ಪೂಜೆ, ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.ಹನುಮಂತ ದೇವಸ್ಥಾನದಲ್ಲಿ 9 ವಿಶೇಷ ರಂಗಪೂಜೆ, ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸು ಹಾರೈಸಿ ರಂಗಪೂಜೆ ನಡೆಯಿತು. ಕರಸೇವಕರಿಂದ ಹೂವಿನ ಪೂಜೆ, ಪ್ರಸಾದ ವಿತರಣೆ ನಡೆಯಿತು. ಅಶ್ವತ್ಥಪುರ ಸೀತಾರಾಮ ಚಂದ್ರ ದೇವಸ್ಥಾನ, ಪುತ್ತಿಗೆ ದೇವರ ಮನೆ ಎಲ್ಲಮ್ಮ ದೇವಸ್ಥಾನ, ಕೆಸರ್ ಗದ್ದೆ ಶ್ರೀ ರಾಮ ಮಂದಿರ, ಗೌರೀಕೆರೆ ಶ್ರೀ ರಾಮ ದೇವಸ್ಥಾನ, ಗುರುಮಠ ಶ್ರೀ ಕಾಳಿಕಾಂಬಾ ದೇವಸ್ಥಾನ , ದೊಡ್ಮನೆ ಶ್ರೀ ಚಂದ್ರ ಶೇಖರ ದೇವಸ್ಥಾನ, ಮಿತ್ತಬೈಲು ಶ್ರೀ ರಾಮ ಮಂದಿರ, ವೇಣೂರು ಶ್ರೀ ರಾಮ ಮಂದಿರ ಹೀಗೆ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳಿಂದ ರಾಮೋತ್ಸವ ಸಂಭ್ರಮ ಜರಗಿತು. ಪೇಟೆಯಲ್ಲಿ ಹೆಚ್ಚಿನ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು ಮಾರವಾಡಿ ವರ್ತಕರು ತಮ್ಮ ಸಂಸ್ಥೆಗಳನ್ನು ಮುಚ್ಚಿ ಗಮನ ಸೆಳೆದರು. ಭಜಕರು ಮನೆಗಳಲ್ಲಿ ರಾಮ ಪೂಜೆ ಸಲ್ಲಿಸಿದ್ದು ಸಂಜೆ ದೀಪಾವಳಿ ನೆನಪಿಸುವಂತೆ ಮನೆಗಳ ಮುಂದೆ ದೀಪಗಳನ್ನು ಬೆಳಗಿದರು.