ಹಳಿಯಾಳದಲ್ಲಿ ಮೊಳಗಿದ ರಾಮೋತ್ಸವ, ಸಂಭ್ರಮಿಸಿದ ಜನತೆ

| Published : Jan 23 2024, 01:45 AM IST

ಸಾರಾಂಶ

ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀರಾಮ ಮಂದಿರದ ಭವ್ಯ ಲೋಕಾರ್ಪಣೆಯ ಐತಿಹಾಸಿಕ ಪವಿತ್ರ ಗಳಿಗೆಯನ್ನು ಹಳಿಯಾಳ ತಾಲೂಕು ಸಂಭ್ರಮಿಸಿತು.

ಹಳಿಯಾಳ:

ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಶ್ರೀರಾಮ ಮಂದಿರದ ಭವ್ಯ ಲೋಕಾರ್ಪಣೆಯ ಐತಿಹಾಸಿಕ ಪವಿತ್ರ ಗಳಿಗೆಯನ್ನು ಹಳಿಯಾಳ ತಾಲೂಕು ಸಂಭ್ರಮಿಸಿತು.

ಮುಗಿಲು ಮುಟ್ಟುವ ಜೈ ಶ್ರೀರಾಮ ಘೋಷಣೆಗಳಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗವು ರಾಮೋತ್ಸವದಲ್ಲಿ ಮೊಳಗಿತು.ಎಲ್ಲೆಡೆ ಶ್ರೀರಾಮನ ಭವ್ಯಚಿತ್ರ:ಪ್ರತಿ ಬಡಾವಣೆ, ವೃತ, ಮನೆಯೆದುರು ಶ್ರೀರಾಮನ ಭವ್ಯಚಿತ್ರಗಳು ರಾರಾಜಿಸಿದವು. ಜವಳಿ ವ್ಯಾಪಾರಸ್ಥರು, ವರ್ತಕರು ತಮ್ಮ ಅಂಗಡಿ ಎದುರು ಹಾಗೂ ಗಲ್ಲಾ ಪೆಟ್ಟಿಗೆಯ ಮುಂದೇ ಶ್ರೀರಾಮನ ಭವ್ಯಚಿತ್ರ ಇಟ್ಟು ಪೂಜಿಸಿದ್ದರೇ, ಕೆಲವು ವ್ಯಾಪಾರಸ್ಥರು ತಮ್ಮ ಅಂಗಡಿ ಮುಚ್ಚಿ ಕುಟುಂಬದೊಂದಿಗೆ ರಾಮೋತ್ಸವವನ್ನು ಸಂಭ್ರಮಿಸಿದರು. ಪ್ರತಿ ಓಣಿಗಳಲ್ಲಿಯೂ ಕೇಸರಿ ಪತಾಕೆಗಳು, ಧ್ವಜಗಳು ರಾರಾಜಿಸಿದವು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ದೇವಸ್ಥಾನಗಳನ್ನು ಹೂವು, ತಳಿರು-ತೋರಣ ಮತ್ತು ವಿದ್ಯುತ್‌ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು.

ಪಟ್ಟಣದತ್ತ ಬರದ ಜನತೆ:

ಗ್ರಾಮಾಂತರ ಭಾಗದಲ್ಲೆಡೆ ಡಂಗುರ ಸಾರಿ ಕಡ್ಡಾಯವಾಗಿ ಸೋಮವಾರ ಧಾರ್ಮಿಕ ಪೂಜೆ-ಪುನಸ್ಕಾರ ನಡೆಸಬೇಕೆಂದು ಮನವಿ ಮಾಡಿದ್ದರಿಂದ ಜನರು ಸೋಮವಾರ ಪಟ್ಟಣದತ್ತ ಹೆಜ್ಜೆ ಹಾಕದಿರುವುದರಿಂದ ಜನಸಂಚಾರ, ಆರ್ಥಿಕ ವಹಿವಾಟು ಮಂದವಾಗಿತ್ತು. ಕೆಲವು ಗ್ರಾಮಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಸಿ ಸಂಭ್ರಮಿಸಿದ ವರದಿಗಳು ಸಹ ಬಂದಿವೆ.ಹೆಸ್ಕಾಂದಲ್ಲೂ ಸಂಭ್ರಮ:ಹಳಿಯಾಳದ ಹೆಸ್ಕಾಂ ಸಿಬ್ಬಂದಿ ಕೇಸರಿ ಕುರ್ತಾ ಮತ್ತು ಬಿಳಿ ಪೈಜಾಮ್‌ ಧರಿಸಿ ರಾಮೋತ್ಸವವನ್ನು ಸಂಭ್ರಮಿಸಿದರು. ಕಚೇರಿಯ ಆವರಣದಲ್ಲಿ ಅಯೋಧ್ಯಾ ಶ್ರೀ ರಾಮೋತ್ಸವದ ನೇರ ಪ್ರಸಾರದ ವೀಕ್ಷಣೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಕಚೇರಿಯಲ್ಲಿ ಇಲ್ಲಾಖೆಯ ಸಿಬ್ಬಂದಿಗಳಿಗಾಗಿ ಅನ್ನಪ್ರಸಾದ ವಿತರಣೆಯು ನಡೆಯಿತು.ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಪೂಜೆ:ಪಟ್ಟಣದ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಬಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪ್ರಭು ಶ್ರೀರಾಮನ ಪೂಜೆ ಸಲ್ಲಿಸಿದರು. ಕೆ.ಕೆ. ಹಳ್ಳಿಯ ಶ್ರೀ ನಿತ್ಯಾನಂದ ಮಠದ ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಟ್ರಸ್ಟ್ ಸತ್ಯಜಿತ ಗಿರಿ ಸೇರಿದಂತೆ ಇತರೇ ಧರ್ಮದರ್ಶಿಗಳು ಉಪಸ್ಥಿತರಿದ್ದರು. ಪಟ್ಟಣದ ಕಿಲ್ಲಾ ಬಳಿಯಿರುವ ಬಸವನ ಗಲ್ಲಿ, ದೇಸಾಯಿಗಲ್ಲಿ ಮತ್ತು ಶೆಟ್ಟಿಗಲ್ಲಿಯ ನಿವಾಸಿಗಳು ರಾಮರ ಭಾವಚಿತ್ರ ಹಾಗೂ ಗೋಮಾತೆ ಶೋಭಾ ಯಾತ್ರೆ ನಡೆಸಿ ಸಂಭ್ರಮಿಸಿದರು.ರಾಮತಾರಕ ಯಜ್ಞ:ಪಟ್ಟಣದ ಶ್ರೀ ಗಣೇಶ ದೇವಸ್ಥಾನದಲ್ಲಿ ನಡೆದ ರಾಮತಾರಕ ಯಜ್ಞದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಪಾಲ್ಗೊಂಡು ನಾಡಿನ ಹಿತಕ್ಕಾಗಿ ಪ್ರಾರ್ಥಿಸಿದರು. ವಿಎಚ್‌ಪಿ ಅಧ್ಯಕ್ಷ ಶ್ರೀಪತಿ ಭಟ್ ಸೇರಿದಂತೆ ಬಿಜೆಪಿಯ ಪ್ರಮುಖರು ಭಾಗವಹಿಸಿದ್ದರು. ಶ್ರೀ ರಾಮಮಂದಿರ ಲೋಕಾರ್ಪಣೆ ಹಾಗೂ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಜನರಿಗೆ ವೀಕ್ಷಿಸಲು ಗಣೇಶ ಕಲ್ಯಾಣ ಮಂಟಪ ಹಾಗೂ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ದಲ್ಲಿ ಎಲ್‌ಇಡಿ ಪರದೆಯಲ್ಲಿ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.