ತುಂಗಭದ್ರಾ ನದಿಗೆ ಹಾರಿ ರಾಣೆಬೆನ್ನೂರು ಶಿಕ್ಷಕಿ ಆತ್ಮಹತ್ಯೆ

| Published : Jan 28 2025, 12:46 AM IST

ತುಂಗಭದ್ರಾ ನದಿಗೆ ಹಾರಿ ರಾಣೆಬೆನ್ನೂರು ಶಿಕ್ಷಕಿ ಆತ್ಮಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್ ಸೇರಿದಂತೆ ಹಲವಾರು ಕಡೆ ಖಾಸಗಿ ಸಂಸ್ಥೆಗಳಿಂದ ಪಡೆದಿದ್ದ ಲಕ್ಷಾಂತರ ರು. ಸಾಲ ಪಾವತಿಸಲಾಗದೇ ಮನನೊಂದ ಶಾಲಾ ಶಿಕ್ಷಕಿಯೊಬ್ಬರು ಭಾನುವಾರ ಮಧ್ಯಾಹ್ನ ಹೊನ್ನಾಳಿ ಸಮೀಪದ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟೆ ಸರ್ಕಾರಿ ಶಾಲೆ ಶಿಕ್ಷಕಿ ಪುಷ್ಪಲತಾ । ಖಾಸಗಿ ಹಣಕಾಸು ಸಂಸ್ಥೆಗಳಿಂದ ಲಕ್ಷಾಂತರ ರು. ಸಾಲ - - -

- ಭಾನುವಾರ ಗಣರಾಜ್ಯೋತ್ಸವ ಮುಗಿಸಿಕೊಂಡು ಬಂದು ನದಿಗೆ ಹಾರಿರುವ ಶಿಕ್ಷಕಿ

- ಮೃತದೇಹ ಪತ್ತೆಗೆ ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿಯಿಂದ ಹುಡುಕಾಟ

- ರಟ್ಟೆಹಳ್ಳಿ ತಾಲೂಕು ಕಿರಿಗೆರೆ ಶಾಲೆಯಲ್ಲಿ ಶಿಕ್ಷಕರಾಗಿರುವ ಪತಿ ಹಾಲೇಶ

- ಪುತ್ರ, ಪುತ್ರಿ ಹೊಂದಿರುವ ಶಿಕ್ಷಕ ದಂಪತಿ । ಸದ್ಯಕ್ಕೆ ಮಹಿಳೆ ನಾಪತ್ತೆ ದೂರು ದಾಖಲಿಸಿದ ಪೊಲೀಸರು - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಿವಮೊಗ್ಗ ಮೂಲದ ಖಾಸಗಿ ಫೈನಾನ್ಸ್ ಸೇರಿದಂತೆ ಹಲವಾರು ಕಡೆ ಖಾಸಗಿ ಸಂಸ್ಥೆಗಳಿಂದ ಪಡೆದಿದ್ದ ಲಕ್ಷಾಂತರ ರು. ಸಾಲ ಪಾವತಿಸಲಾಗದೇ ಮನನೊಂದ ಶಾಲಾ ಶಿಕ್ಷಕಿಯೊಬ್ಬರು ಭಾನುವಾರ ಮಧ್ಯಾಹ್ನ ಹೊನ್ನಾಳಿ ಸಮೀಪದ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಣೆಬೆನ್ನೂರು ತಾಲೂಕು ತುಮ್ಮಿನಕಟ್ಟೆ ಸರ್ಕಾರಿ ಶಾಲೆ ಶಿಕ್ಷಕಿ ಪುಪ್ಪಲತಾ (46) ಮೃತ ದುರ್ದೈವಿ. ಇವರ ಪತಿ ಹಾಲೇಶ್ ಶಿಕ್ಷಕರಾಗಿದ್ದು, ರಟ್ಟೆಹಳ್ಳಿ ತಾಲೂಕು ಕಿರಿಗೆರೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ಧಾರೆ. ಈ ದಂಪತಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. ಮಗ ಮೆಡಿಕಲ್ ‍ವ್ಯಾಸಂಗ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಫೈನಾನ್ಸ್‌ ಕಂಪನಿಗಳ ನಿರಂತರ ಕಿರುಕುಳದಿಂದ ಶಿಕ್ಷಕಿ ಪುಪ್ಪಲತಾ ಬಹಳ‍ವಾಗಿ ನೊಂದಿದ್ದರು. ಜ.26ರಂದು ಭಾನುವಾರ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು, ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನದ 1 ಗಂಟೆ ಸುಮಾರಿಗೆ ತುಂಗಭದ್ರಾ ನದಿ ಬಳಿಗೆ ಹೋಗಿದ್ದರು. ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪವೇ ಇರುವ ನದಿ ದಂಡೆ ಮೇಲೆ ಕೆಲ ಕಾಲ ಕುಳಿತಿದ್ದಾರೆ. ಬಳಿಕ ಅಲ್ಲಿಂದ ನಡೆದುಹೋಗಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿಕ್ಷಕಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನದಿ ದಂಡೆಗೆ ಬಂದಿರುವುದು, ದಂಡೆ ಮೇಲೆ ಕುಳಿತಿರುವುದು, ಚಪ್ಪಲಿ- ವ್ಯಾನಿಟಿ ಬ್ಯಾಗ್‌, ದಂಡೆಯಲ್ಲೇ ಬಿಟ್ಟು ನಡೆದುಹೋಗಿ, ನದಿಗೆ ಧುಮುಕಿರುವ ದೃಶ್ಯಗಳೆಲ್ಲ ರಾಘವೇಂದ್ರ ಮಠದ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮುಚ್ಚಳಿಕೆ ಬರೆಸಿಕೊಂಡಿದ್ದ ಪೊಲೀಸರು:

ಹೊನ್ನಾಳಿಯ ದುರ್ಗಿಗುಡಿಯಲ್ಲಿ ವಾಸವಿರುವ ಈ ಶಿಕ್ಷಕ ದಂಪತಿ, ಮನೆ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿವಿಧ ಖಾಸಗಿ ಫೈನಾನ್ಸ್ ಕಂಪನಿಗಳಿಂದ ಲಕ್ಷಾಂತರ ಹಣ ಸಾಲ ಪಡೆದಿದ್ದರು. ಈ ಹಿಂದೆ ಸಾಲ ವಸೂಲಾತಿ ವಿಷಯದಲ್ಲಿ ಹಣ ನೀಡಿದ ಫೈನಾನ್ಸ್ ಕಂಪನಿಯವರು ದಂಪತಿ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗ ಪೊಲೀಸರು ಗಂಡ, ಹೆಂಡತಿ ಇಬ್ಬರನ್ನೂ ಠಾಣೆಗೆ ಕರೆಯಿಸಿ, ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದರು. ಇದಾದ ಬಳಿಕವೂ ಹಣ ಪಾವತಿಸುವಂತೆ ಖಾಸಗಿ ಫೈನಾನ್ಸ್‌ ಸಂಸ್ಥೆಗಳು ಶಿಕ್ಷಕ ದಂಪತಿಗೆ ಒತ್ತಡ ಹೇರುತ್ತಿದ್ದವು ಎನ್ನಲಾಗಿದೆ.

ಪುಷ್ಪಲತಾ ಮನೆಗೆ ಬಾರದ ಹಿನ್ನೆಲೆ ಭಾನುವಾರ ರಾತ್ರಿವರೆಗೂ ಕುಟುಂಬದವರು, ಸಂಬಂಧಿಗಳು, ಪರಿಚಯಸ್ಥರು ಹಲವಾರು ಕಡೆ ಹುಡುಕಾಟ ನಡೆಸಿ, ವಿಚಾರಿಸಿದ್ದರು. ಮಾರನೇ ದಿನ ಸೋಮವಾರ ನದಿ ದಂಡೆಯ ಮೇಲೆ ಶಿಕ್ಷಕಿಯ ಚಪ್ಪಲಿ, ಬ್ಯಾಗ್ ಕಂಡುಬಂದಿತು. ಅನಂತರ ಮಠದ ಸಿ.ಸಿ. ಕ್ಯಾಮೆರಾ ಪರಿಶೀಲಿಸಲಾಯಿತು. ಆಗ ಶಿಕ್ಷಕಿ ಪುಷ್ಪಲತಾ ನದಿ ಬಳಿಗೆ ಬಂದು, ನೀರಿಗೆ ಧುಮುಕಿರುವುದು, ತೇಲಿ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿರುವುದು ಕಂಡುಬಂದಿವೆ.

ಸುದ್ದಿ ತಿಳಿದು ಹೊನ್ನಾಳಿ ಅಗ್ಮಿಶಾಮಕ ದಳ ಸಿಬ್ಬಂದಿ ನದಿಯಲ್ಲಿ ಶಿಕ್ಷಕಿ ಮೃತದೇಹ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸೋಮವಾರ ಸಂಜೆಯವರೆಗೂ ಮೃತದೇಹ ಪತ್ತೆಯಾಗಿರಲಿಲ್ಲ. ಪೊಲೀಸರು ಕೂಡ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಪತಿ ಹಾಲೇಶ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಹೊನ್ನಾಳಿ ಪೊಲೀಸರು ಸದ್ಯಕ್ಕೆ ಗೃಹಿಣಿ ನಾಪತ್ತೆ ಕೇಸ್ ದಾಖಲಿಸಿಕೊಂಡಿದ್ದಾರೆ.

- - -

(ಬಾಕ್ಸ್‌) * ಆತ್ಮಹತ್ಯೆ ಯಾವ ಕಾರಣಕ್ಕೆಂಬುದು ತಿಳಿದಿಲ್ಲ: ಎಸ್‌ಪಿ

ದಾವಣಗೆರೆ: ಹೊನ್ನಾಳಿ ಶಿಕ್ಷಕಿ ಪುಷ್ಪಲತಾ ತುಂಗಬದ್ರಾ ನದಿಗೆ ಹಾರಿರುವುದು ತಿಳಿದುಬಂದಿದೆ. ಆದರೆ, ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ, ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಘಟನೆಗೆ ಸಂಬಂಧಿಸಿ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಸ್ಪಷ್ಟಪಡಿಸಿದ್ದಾರೆ. ಪುಷ್ಪಲತಾ ಶಿವಮೊಗ್ಗದ ಟಾಟಾ ಕ್ಯಾಪಿಟಲ್‌ ಫೈನಾನ್ಸ್‌ನಲ್ಲಿ ₹35-₹40 ಲಕ್ಷ ಸಾಲ ಪಡೆದಿರುವುದು ತಿಳಿದುಬಂದಿದೆ. ಆಕೆ ತುಂಗಭದ್ರಾ ನದಿಗೆ ಹಾರಲು ಕಾರಣವೇನೆಂಬ ಕುರಿತಂತೆ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ. ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ, ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಮೃತದೇಹದ ಹುಡುಕಾಟ ಮುಂದುವರೆದಿದೆ. ಊಹಾಪೋಹ ಬೇಡ, ಮಾಹಿತಿ ಸಿಕ್ಕ ತಕ್ಷಣವೇ ವಿವರ ನೀಡಲಾಗುವುದು ಎಂದು ತಿಳಿಸಿದ್ದಾರೆ. - - - -27ಎಚ್.ಎಲ್.ಐ1: ಪುಪ್ಪಲತಾ.

-27ಎಚ್.ಎಲ್.ಐ1ಎ: ತುಂಗಭದ್ರಾ ನದಿ ದಂಡೆ ಬಳಿ ಜಮಾಯಿಸಿರುವ ಸಾರ್ವಜನಿಕರು.