ಕಾರವಾರ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ''ರಂಗ ಪರ್ಯಟನೆ–ಕೊಂಕಣಿ ಕರಾವಳಿಯಲ್ಲಿ ಚಿತ್ರಕಲಾ ಪರ್ಯಟನೆ'' ಕಾರ್ಯಕ್ರಮಕ್ಕೆ ನಗರದ ಪತ್ರಿಕಾಭವನದಲ್ಲಿ ಶನಿವಾರ ವಿಧ್ಯುಕ್ತ ಚಾಲನೆ ದೊರೆಯಿತು.

ಕೊಂಕಣಿ ಸಮುದಾಯದ ಸಂಸ್ಕೃತಿ, ಪರಂಪರೆ ಹಾಗೂ ಜೀವನಶೈಲಿಯನ್ನು ಚಿತ್ರಕಲೆಯ ಮೂಲಕ ದಾಖಲಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಕಲಾಯಾತ್ರೆ ಆರಂಭಗೊಂಡಿದೆ.

ಸೇಂಟ್ ಮಿಲಾಗ್ರಿಸ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಕ್ಯಾನ್ವಾಸ್ ಮೇಲೆ ಬಣ್ಣ ಬಳಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಭಾಗವಹಿಸಿದ ಕಲಾವಿದರಿಗೆ ಬ್ಯಾಚ್ ಹಾಗೂ ಚಿತ್ರಕಲಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾರ್ಜ್ ಫರ್ನಾಂಡಿಸ್, ಪತ್ರಿಕೋದ್ಯಮ ಮತ್ತು ಚಿತ್ರಕಲೆ ಎರಡೂ ಸಮಾಜದ ನೈಜ ಕನ್ನಡಿಗಳಾಗಿವೆ. ಪತ್ರಿಕೆಗಳು ಪದಗಳ ಮೂಲಕ ಸಮಾಜದ ವಾಸ್ತವವನ್ನು ದಾಖಲಿಸಿದರೆ, ಚಿತ್ರಕಲೆ ಬಣ್ಣಗಳ ಮೂಲಕ ಅದೇ ಸತ್ಯವನ್ನು ಜನರ ಮನಸ್ಸಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಬಣ್ಣಗಳಿಗೆ ಭಾಷೆಯ ಮಿತಿ ಇಲ್ಲ. ಒಂದು ಚಿತ್ರ ಸಾವಿರ ಮಾತುಗಳಿಗಿಂತ ಹೆಚ್ಚಿನ ಪರಿಣಾಮ ಬೀರುತ್ತದೆ. ಕರಾವಳಿಯ ಕೊಂಕಣಿ ಸಮುದಾಯದ ಶ್ರೀಮಂತ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಬಣ್ಣಗಳ ಮೂಲಕ ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಈ ''ರಂಗ ಪರ್ಯಟನೆ'' ಆರಂಭಿಸಲಾಗಿದೆ ಎಂದು ಅವರು ಹೇಳಿದರು.


ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಾತನಾಡಿ, ಜು. 25ರಿಂದ ಆ. 8ರ ವರೆಗೆ ಒಟ್ಟು 15 ದಿನಗಳ ಕಾಲ ''ರಂಗ ಪರ್ಯಟನೆ'' ನಡೆಯಲಿದೆ. ಮೊದಲ ಮೂರು ದಿನ ಕಾರವಾರದಲ್ಲಿ ನಡೆಯಲಿರುವ ಈ ಕಲಾಯಾತ್ರೆ ಬಳಿಕ ಯಲ್ಲಾಪುರ, ಶಿರಸಿ, ಹೊನ್ನಾವರ, ಕುಂದಾಪುರ, ಹೆಬ್ರಿ ಹಾಗೂ ಕಾರ್ಕಳ ಮೂಲಕ ಸಾಗುತ್ತಾ ಮಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಈ ಅಭಿಯಾನದಲ್ಲಿ ಅಕಾಡೆಮಿಯ ಆರು ಮಂದಿ ಕಲಾ ತಜ್ಞರು ಭಾಗವಹಿಸಲಿದ್ದಾರೆ ಎಂದರು.

''ರಂಗ ಪರ್ಯಟನೆ''ಯಡಿ ಕಲಾವಿದರು ಕೊಂಕಣಿ ಜನರ ಜೀವನಶೈಲಿ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಐತಿಹಾಸಿಕ ಮನೆಗಳು, ಸಾಧಕರ ಭಾವಚಿತ್ರಗಳು, ದೇವಸ್ಥಾನಗಳು ಹಾಗೂ ಚರ್ಚ್‌ಗಳ ಸೌಂದರ್ಯವನ್ನು ಕ್ಯಾನ್ವಾಸ್ ಮೇಲೆ ಮೂಡಿಸಲಿದ್ದಾರೆ. ಈ ಕಲಾಕೃತಿಗಳನ್ನು ಮುಂದಿನ ದಿನಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆಯೂ ಅಕಾಡೆಮಿಗೆ ಇದೆ ಎಂದು ಜೋಕಿಂ ಸ್ಟ್ಯಾನಿ ಆಲ್ವಾರಿಸ್ ತಿಳಿಸಿದರು.

ಅಕಾಡೆಮಿ ಸದಸ್ಯರಾದ ಸುನೀಲ್ ಸಿದ್ಧಿ, ವಸಂತ ಬಾಂದೇಕರ್, ಜೇಮ್ಸ್ ಲೋಪೇಸ್, ವಿಲ್ಸನ್ ಸೋಜಾ, ಕಲಾವಿದರು ಹಾಗೂ ಕೊಂಕಣಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.