ಮನೆ ನುಗ್ಗಿ ಮದುವೆಗೆ ಒಪ್ಪದ ವಿದ್ಯಾರ್ಥಿನಿ ಅಪಹರಿಸಿದ ರಂಗ ಎಸ್ಸೆಸ್ಸೆಲ್ಸಿ!

| N/A | Published : Oct 12 2025, 02:00 AM IST / Updated: Oct 12 2025, 06:35 AM IST

kidnap
ಮನೆ ನುಗ್ಗಿ ಮದುವೆಗೆ ಒಪ್ಪದ ವಿದ್ಯಾರ್ಥಿನಿ ಅಪಹರಿಸಿದ ರಂಗ ಎಸ್ಸೆಸ್ಸೆಲ್ಸಿ!
Share this Article
  • FB
  • TW
  • Linkdin
  • Email

ಸಾರಾಂಶ

ಮದುವೆಗೆ ನಿರಾಕರಿಸಿದ್ದ ಕಾರಣಕ್ಕೆ ಕೋಪಗೊಂಡು 19 ವರ್ಷದ ಸಿಎ (ಚಾರ್ಟರ್ಡ್‌ ಅಕೌಂಟೆಂಟ್‌) ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಆಕೆಯ ಪರಿಚಿತ ಯುವಕ ಸೇರಿದಂತೆ ಐವರು ಕಿಡಿಗೇಡಿಗಳನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಮದುವೆಗೆ ನಿರಾಕರಿಸಿದ್ದ ಕಾರಣಕ್ಕೆ ಕೋಪಗೊಂಡು 19 ವರ್ಷದ ಸಿಎ (ಚಾರ್ಟರ್ಡ್‌ ಅಕೌಂಟೆಂಟ್‌) ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ಆಕೆಯ ಪರಿಚಿತ ಯುವಕ ಸೇರಿದಂತೆ ಐವರು ಕಿಡಿಗೇಡಿಗಳನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರದ ರಂಗನಾಥ್ ಅಲಿಯಾಸ್ ರಂಗ, ಬನಶಂಕರಿ 2ನೇ ಹಂತದ ರಾಜೇಶ, ಚೆನ್ನಮ್ಮನಕೆರೆ ಅಚ್ಚುಕಟ್ಟಿನ ಚಂದನ್ ಅಲಿಯಾಸ್‌ ಗುಂಡ, ಮಂಜುನಾಥ್ ಹಾಗೂ ಕನಕಪುರ ರಸ್ತೆಯ ಪ್ರಗತಿಪುರದ ಎಸ್‌.ಶ್ರೇಯಸ್ ಬಂಧಿತರು. ಮೂರು ದಿನಗಳ ಹಿಂದೆ ಸಿಂಹಾದ್ರಿ ಲೇಔಟ್‌ನಲ್ಲಿರುವ ವಿದ್ಯಾರ್ಥಿನಿ ಮನೆಗೆ ನುಗ್ಗಿ ಬಲವಂತವಾಗಿ ಅಪಹರಿಸಿಕೊಂಡು ರಂಗ ಗ್ಯಾಂಗ್ ಪರಾರಿಯಾಗಿತ್ತು. ಈ ಕೃತ್ಯದ ಬಗ್ಗೆ ಪೊಲೀಸರಿಗೆ ವಿದ್ಯಾರ್ಥಿನಿ ಪೋಷಕರು ದೂರು ನೀಡಿದರು. ಅಂತೆಯೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್‌ ಎಂ.ಎಸ್‌.ರಾಜು ನೇತೃತ್ವದ ತಂಡವು, ಕೃತ್ಯ ನಡೆದ 12 ತಾಸಿನಲ್ಲೇ ಆರೋಪಿಯನ್ನು ಬಂಧಿಸಿ ಸಂತ್ರಸ್ತೆಯನ್ನು ರಕ್ಷಿಸಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಿಮಿನಲ್‌ ರಂಗನ ಹುಚ್ಚಾಟ

ಕ್ರಿಮಿನಲ್‌ ಹಿನ್ನೆಲೆಯುಳ್ಳ ರಂಗ, ಸಿಎ ಓದುತ್ತಿರುವ ಯುವತಿ ಹಿಂದೆ ಬಿದ್ದಿದ್ದ. ಹಲವು ದಿನಗಳಿಂದ ಆಕೆಯನ್ನು ಮದುವೆ ಆಗುವಂತೆ ರಂಗ ಕಾಡುತ್ತಿದ್ದ. ಆದರೆ ಇದಕ್ಕೆ ವಿದ್ಯಾರ್ಥಿನಿ ಕ್ಯಾರೇ ಎಂದಿರಲಿಲ್ಲ. ಕೊನೆಗೆ ವಿದ್ಯಾರ್ಥಿನಿ ಮನೆಗೆ ಹೋಗಿ ಸಹ ಆಕೆಯ ಪೋಷಕರ ಬಳಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದ. ಆಕೆಯ ಪೋಷಕರಿಂದ ಕೂಡ ಕಡು ಆಕ್ಷೇಪ ಎದುರಾಯಿತು. ಈ ಬೆಳವಣಿಗೆಯಿಂದ ಕೆರಳಿದ ರಂಗ, ಅ.8 ರಂದು ವಿದ್ಯಾರ್ಥಿನಿ ಮನೆಗೆ ತನ್ನ ನಾಲ್ವರು ಸಹಚರರ ಜತೆ ನುಗ್ಗಿದ್ದಾನೆ. ಆಗ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರಿಗೆ ಜೀವ ಬೆದರಿಕೆ ಹಾಕಿ ಆಟೋದಲ್ಲಿ ಆಕೆಯನ್ನು ಅಪಹರಿಸಿದ್ದ. ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ವಿದ್ಯಾರ್ಥಿನಿ ಹೆತ್ತವರು ದೂರು ನೀಡಿದರು. ಈ ವಿಷಯ ತಿಳಿದ ಕೂಡಲೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಓದಿರುವ ರಂಗ

ರಂಗ ಎಸ್‌ಎಸ್ಎಲ್‌ಸಿ ಓದಿದ್ದು, ಆತನ ವಿರುದ್ಧ ಕೊಲೆ, ಸುಲಿಗೆ ಪ್ರಕರಣಗಳಿವೆ. ಹೊಸಕೆರೆ ಬಳಿ ಬೈಕ್ ಶೋರೂಂನಲ್ಲಿ ಮೆಕ್ಯಾನಿಕ್ ಆಗಿದ್ದಾನೆ. ಚಂದನ್‌ ವಿರುದ್ಧ ಹಲ್ಲೆ, ದರೋಡೆ ಪ್ರಕರಣಗಳಿವೆ. ಈತ ಸಿಟಿ ಮಾರ್ಕೆಟ್‌ನಲ್ಲಿ ಪ್ಯಾಕಿಂಗ್ ಕೆಲಸ ಮಾಡುತ್ತಾನೆ. ಇನ್ನುಳಿದ ಮೂವರು ಸಹ ಸಣ್ಣಪುಟ್ಟ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

Read more Articles on