ಬಸವರಾಜ ಸರೂರ ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಜಿಲ್ಲೆಯ ವಾಣಿಜ್ಯ ನಗರಿ, ಬೀಜೋತ್ಪಾದನೆಗೆ ಹೆಸರಾಗಿರುವ ರಾಣಿಬೆನ್ನೂರು ಇದೀಗ ಕ್ರಿಕೆಟ್ ಅಕ್ರಮ ಬೆಟ್ಟಿಂಗ್ ತಾಣವಾಗಿ ಬದಲಾಗುತ್ತಿದೆ. ಕಳೆದ ಮಾ. 28ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಕ್ರಿಕೆಟ್ ಪಂದ್ಯಗಳು ಪ್ರಾರಂಭವಾಗಿದ್ದು, ಅದರ ಜೊತೆಯಲ್ಲಿಯೇ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಅಕ್ರಮ ಬೆಟ್ಟಿಂಗ್ ಹಾವಳಿ ಜೋರಾಗಿ ನಡೆಯುತ್ತಿದೆ. ದಂಧೆಕೋರರಿಗೆ ಐಪಿಎಲ್ ಪಂದ್ಯಾವಳಿಯು ಪ್ರತಿ ವರ್ಷ ಬೆಟ್ಟಿಂಗ್ ಹಬ್ಬದಂತೆ ಪರಿಣಮಿಸುತ್ತಿದೆ. ಅಕ್ರಮ ಬೆಟ್ಟಿಂಗ್ ದಂಧೆಕೋರರು ಕೋಟಿ ಕೋಟಿ ರು. ಲೂಟಿ ಹೊಡೆಯಲು ಬಗೆ ಬಗೆಯ ಅವತಾರಗಳಲ್ಲಿ ಜನರನ್ನು ಸೆಳೆಯುತ್ತಿದ್ದಾರೆ. ಅದರಲ್ಲೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೆಟ್ಟಿಂಗ್ ಆಟಕ್ಕೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆ ಮಾತ್ರ ಇಲ್ಲಿಯವರೆಗೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅದರಲ್ಲಿಯೂ ನಗರದಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ಹರಡಿದೆ. ಯುವಕರು, ಆಟೋ, ಕಾರು, ಕ್ಯಾಬ್ ಚಾಲಕರು ಸೇರಿದಂತೆ ವಿದ್ಯಾರ್ಥಿ ಸಮೂಹ ಈ ಅಕ್ರಮ ಬೆಟ್ಟಿಂಗ್ ದಂಧೆಗೆ ಆಟಕ್ಕೆ ಬಲಿಯಾಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಸಂಜೆ ಪಂದ್ಯ ಆರಂಭಕ್ಕೂ ಮುನ್ನ ಟಾಸ್ ವಿಚಾರದಿಂದ ಆರಂಭವಾಗುವ ಬೆಟ್ಟಿಂಗ್ ಲೈನ್‌ಗಳು ಪಂದ್ಯ ಅಂತ್ಯದವರೆಗೂ ಬೆಟ್ಟಿಂಗ್ ನಡೆಯುತ್ತದೆ. ಯುವಕರು ಕೆಲವು ಬೆಟ್ಟಿಂಗ್ ಕುಳಗಳು ಹಾಗೂ ಮಧ್ಯವರ್ತಿಗಳ ಮೂಲಕ ಬೆಟ್ಟಿಂಗ್ ಕಟ್ಟುತ್ತಾರೆ. ಇದರಲ್ಲಿ ಸಾಕಷ್ಟು ಜನರು ಹಣ ಕಳೆದು ಕೊಳ್ಳುವುದೇ ಹೆಚ್ಚು ಹೊರತು ಗೆಲ್ಲುವುದು ಕಡಿಮೆ. ಇದರಿಂದ ಬುಕ್ಕಿಗಳು ಹೆಚ್ಚು ಲಾಭ ಗಳಿಸುತ್ತಾರೆ. ಎರಡು ವಿಧದ ಬೆಟ್ಟಿಂಗ್: ಬೆಟ್ಟಿಂಗ್‌ನಲ್ಲಿ ಎರಡು ಹಂತವಿದೆ. ಒಂದು ಆ್ಯಪ್‌ಗಳ ಮೂಲಕ ಆಡುವುದು. ಇನ್ನೊಂದು ನಗರದ ವಿವಿಧ ಭಾಗಗಳಲ್ಲಿರುವ ಬುಕ್ಕಿಗಳ ಲೈನ್‌ಗಳ ಮೂಲಕ ಬೆಟ್ಟಿಂಗ್ ಆಡುವುದು. ಆಕಸ್ಮಿಕವಾಗಿ ಪೊಲೀಸರು ಬೆಟ್ಟಿಂಗ್ ಬುಕ್ಕಿಗಳನ್ನು ಹಾಗೂ ಆಡುವ ಜನರನ್ನು ಹಿಡಿದಾಗ ಅವರಿಗೆ ನಮ್ಮ ಹೆಸರು ಹೇಳಿ, ಇಲ್ಲಾ ಠಾಣೆಗೆ ಕರೆದುಕೊಂಡು ಹೋದರೆ ನಾವು ಬರುವರೆಗೂ ಏನು ಹೇಳಬೇಡಿ, ನಾವು ಬಂದು ನಿಮ್ಮನ್ನು ಬಿಡಿಸಿಕೊಂಡು ಬರುತ್ತೇವೆ ಎಂದು ಬುಕ್ಕಿಗಳಿಗೆ ಬೆಟ್ಟಿಂಗ್ ಆಡಿಸುವರು ಹೇಳುತ್ತಾರೆ. ಇದರಿಂದ ಪೊಲೀಸರ ಜೊತೆ ಹೊಂದಾಣಿಕೆ ಇದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದಿದೆ.ಕಣ್ಣಿದ್ದು ಕುರುಡರಾಗಿರುವ ಪೊಲೀಸರು: ಪೊಲೀಸರಿಗೆ ಗೊತ್ತಿಲ್ಲದಂತೆ ತಾಲೂಕಿನಲ್ಲಿ ಏನು ನಡೆಯುವುದಿಲ್ಲ. ಇಲ್ಲಿಯ ಈ ಬುಕ್ಕಿಗಳು ಕೆಲವು ಪೊಲೀಸರ ಅಧಿಕಾರಿಗಳ ಜೊತೆ ಮಾತನಾಡಿಯೇ ಬೆಟ್ಟಿಂಗ್ ಲೈನ್‌ಗಳನ್ನು ನಡೆಸುತ್ತಾರೆ. ಹೀಗಾಗಿ ಬೆಟ್ಟಿಂಗ್ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದರೂ ಪೊಲೀಸರು ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹಣ ನೀಡದಿದ್ದರೆ ಹಲ್ಲೆ:ಹಣದ ಆಸೆಗೆ ಹೆಚ್ಚಾಗಿ ಯುವಕರು ಹಾಗೂ ಜನರು ತಮ್ಮ ಬಳಿ ಹಣವಿಲ್ಲದಿದ್ದರೂ ಗೆಲುವ ವಿಶ್ವಾಸದಿಂದ ಬೆಟ್ಟಿಂಗ್ ಆಡುತ್ತಾರೆ. ಪಂದ್ಯ ಮುಗಿದ ದಿನ ಮಧ್ಯಾಹ್ನ 12 ಗಂಟೆಯೊಳಗೆ ಹಣ ನೀಡಬೇಕು. ಹಣ ಕೊಡದೆ ಹೋದರೆ ಮನೆ ಬಳಿ ಹೋಗಿ ನಿಮ್ಮ ಹುಡುಗ ಹಣ ಕೊಡುವುದಿದೆ. ಕೈಗಡ ತೆಗೆದುಕೊಂಡಿದ್ದಾನೆ ಅಂತ ಮನೆ ಮುಂದೆ ಗಲಾಟೆ ಮಾಡುವುದು. ಇದರಿಂದ ತಂದೆ ತಾಯಿಗಳು ಹಣ ಕೊಡುವುದು. ಕೆಲವೊಂದು ಸಾರಿ ಮನೆಯವರೂ ನಮಗೂ ಅದಕ್ಕೆ ಸಂಬಂಧವಿಲ್ಲ ಎಂದು ಹೇಳಿದಾಗ ಸಾಲ ಮಾಡಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆಗಳು ನಡೆದಿವೆ. ಈ ಹಿಂದೆ ಹಲವು ಬಾರಿ ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಾಲದ ಸುಳಿಗೆ ಸಿಲುಕಿ ಸಾಕಷ್ಟು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಟ್ಟಿಂಗ್ ವಿಷಯಕ್ಕೆ ಜಗಳ ಆಡಿ ಜೈಲು ಸೇರಿದ ಪ್ರಕರಣಗಳೂ ವರದಿಯಾಗಿವೆ. ಬೆಟ್ಟಿಂಗ್ ಇನ್ನೂ ಹಲವರ ಪ್ರಾಣ ತೆಗೆಯುವ ಮುನ್ನವೇ ಖಾಕಿಪಡೆ ಮತ್ತಷ್ಟು ಜಾಗ್ರತೆ ವಹಿಸಬೇಕಿದೆ. ಈ ಬಗ್ಗೆ ಪಾಲಕರೂ ಎಚ್ಚರಿಕೆ ವಹಿಸಬೇಕು, ಮಕ್ಕಳ ಚಲನವಲನದ ಬಗ್ಗೆ ಗಮನಹರಿಸಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಖಾಕಿ ಪಡೆ ಬದ್ಧತೆ ತೋರಿ ಬೆಟ್ಟಿಂಗ್ ಕಿಂಗ್‌ಪಿನ್‌ಗಳ ಹೆಡೆಮುರಿಕಟ್ಟಲಿ ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ಈ ವರ್ಷ ಐಪಿಎಲ್ ಪ್ರಾರಂಭವಾದ ನಂತರ ತಾಲೂಕಿನಲ್ಲಿ ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆ ರೀತಿಯ ಪ್ರಕರಣಗಳು ಬೆಳಕಿಗೆ ಬಂದರೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಡಿವೈಎಸ್ಪಿ ಲೋಕೇಶ ಜೆ. ಹೇಳಿದರು.