ಸಾರಾಂಶ
ವರ್ತಕರ ಸಂಘದ ಸರ್ವ ಸದಸ್ಯರ ಒಕ್ಕೊರಲಿನ ತೀರ್ಮಾನ
ಕನ್ನಡಪ್ರಭ ವಾರ್ತೆ ಬ್ಯಾಡಗಿಬ್ಯಾಡಗಿ ಶ್ರೀ ಸಿದ್ದೇಶ್ವರ ದೇವರ ಮೇಲಾಣೆ ನಾವೆಂದೂ ರಾಣಿಬೆನ್ನೂರ ತಾಲೂಕು ಹೂಲಿಹಳ್ಳಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆ (ಮೆಗಾ ಮಾರುಕಟ್ಟೆ) ಪ್ರಾಂಗಣದಲ್ಲಿ ಲೈಸನ್ಸ್ ಹಾಗೂ ನಿವೇಶನ ಪಡೆಯಲು ಮುಂದಾಗುವುದಿಲ್ಲ ಎಂದು ವರ್ತಕರ ಸಂಘದ ಸರ್ವಸದಸ್ಯರು ಒಕ್ಕೊರಲಿನಿಂದ ತೀರ್ಮಾನಿಸಿದರು.
ಮೆಗಾ ಮಾರುಕಟ್ಟೆಯಲ್ಲಿ ಲೈಸೆನ್ಸ್ ಪಡೆಯಲು ಬ್ಯಾಡಗಿ ಮಾರುಕಟ್ಟೆಯಲ್ಲಿನ ಕೆಲ ವರ್ತಕರು ಅರ್ಜಿ ಪಡೆದಿದ್ದಾರೆ ಎಂಬ ವದಂತಿ ಹಿನ್ನೆಲೆ ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ನೇತೃತ್ವದಲ್ಲಿ ಬುಧವಾರ ವರ್ತಕರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ, ಬ್ಯಾಡಗಿ ಮಾರುಕಟ್ಟೆಗೆ ಕನಿಷ್ಠ 100 ವರ್ಷದ ಇತಿಹಾಸವಿದೆ. ಸ್ವಾತಂತ್ರ‍್ಯಕ್ಕೂ ಮುನ್ನ ಸದರಿ ಮಾರುಕಟ್ಟೆ ಅಸ್ತಿತ್ವಕ್ಕೆ ಬಂದಿದ್ದು, ಬ್ಯಾಡಗಿ ಮೆಣಸಿನಕಾಯಿ ಒಂದು ಬ್ರಾಂಡ್ ಆಗಿದ್ದಲ್ಲದೇ ವಿಶ್ವಪ್ರಸಿದ್ಧಗೊಳ್ಳಲು ಲಕ್ಷಾನುಗಟ್ಟಲೇ ಜನರ ಶ್ರಮ ಹಾಗೂ ರೈತರ ಸಹಕಾರವಿದೆ. ಕಳೆದ 3 ದಶಕಗಳ ಹಿಂದೆ ಕೇವಲ ಹತ್ತಿಪ್ಪತ್ತು ಸಾವಿರ ಚೀಲದಷ್ಟು ಆವಕವಾಗುತ್ತಿದ್ದ ಮೆಣಸಿನಕಾಯಿ ಇಂದು 4 ಲಕ್ಷ ದಾಟಿದೆ. 2 ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆಯುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಬಹುದೊಡ್ಡ ವ್ಯಾಪಾರಿ ಕೇಂದ್ರವಾಗಿದೆ ಎಂದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವಹಿವಾಟು ಬಿಟ್ಟು ಬೇರೆನೂ ನಡೆಯುವುದಿಲ್ಲ, ಕೇವಲ 6 ತಿಂಗಳು ಮಾತ್ರ ವಹಿವಾಟು ನಡೆಯುತ್ತಿದ್ದು ಇದನ್ನೇ ನೆಚ್ಚಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಸಾವಿರಾರು ಕೋಟಿ ರೂ.ಗಳಷ್ಟು ವ್ಯಯಿಸಿ ಕೋಲ್ಡ್ ಸ್ಟೋರೇಜ್, ಪೌಡರ್ ಫ್ಯಾಕ್ಟರಿ ಇತರ ಉದ್ದಿಮೆಗಳು ಪ್ರಾರಂಭಿಸಲಾಗಿದೆ. ಅಷ್ಟಕ್ಕೂ ನಮಗೆ ಪ್ರತಿವರ್ಷ ಕೇವಲ 1 ತಿಂಗಳಷ್ಟೇ ಸ್ಥಳಾವಕಾಶದ ಅಭಾವವಾಗುತ್ತಿದ್ದು, ಮಾರುಕಟ್ಟೆ ಪ್ರಾಂಗಣದಲ್ಲಿನ ಅನುಪಯುಕ್ತ ನಿವೇಶನ ಹಾಗೂ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಿ ದಲಾಲರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.ವರ್ತಕರ ಸಂಘದ ನಿರ್ದೇಶಕ ಹಾಗೂ ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ಸದರಿ ಮಾರುಕಟ್ಟೆಗೆ ದ್ರೋಹ ಮಾಡುವುದು ಹೆತ್ತ ತಾಯಿಗೆ ದ್ರೋಹವೆಸಗಿದಂತೆ. ನಾವೇನೆ ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿದ್ದೇವೆ. ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅನ್ನದ ಮಾರ್ಗಕ್ಕೆ ದಾರಿ ಮಾಡಿಕೊಟ್ಟಿದೆ. ಬ್ಯಾಡಗಿ ಮಾರುಕಟ್ಟೆಯೊಂದು ಜೇನುಗೂಡಿದ್ದಂತೆ ಅದಕ್ಕೆ ಕಲ್ಲು ಹೊಡೆಯುವ ಕೆಲಸವು ಯಾರಿಂದಲೂ ಆಗಬಾರದು. ನಾವ್ಯಾರು ಮೆಗಾ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವುದಿಲ್ಲ ಎಂಬ ನಿರ್ಧಾರಕ್ಕೆ ಬರಬೇಕಾಗಿದೆ ಎಂದರು.
ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿದರು.ಕೋಟ್ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಮಾರುಕಟ್ಟೆ ಅಭಿವೃದ್ಧಿ ಬಯಸಿದ್ದಲ್ಲಿ ಕದರಮಂಡಲಗಿ ರಸ್ತೆಯಲ್ಲಿರುವ ಸುಮಾರು 100 ಎಕರೆ ಸರ್ಕಾರದ ಭೂಮಿಯನ್ನು ಮಂಜೂರು ಮಾಡಿಸಿಕೊಡುವ ಮೂಲಕ ವರ್ತಕರು ಹಾಗೂ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು.
ಸುರೇಶ ಮೇಲಗಿರಿ ವರ್ತಕಬಾಕ್ಸ್ನಿಯಮಾವಳಿ ಗಾಳಿಗೆ
ಕೃಷಿ ಉತ್ಪನ್ನ ಮಾರುಕಟ್ಟೆ ಹಂಚಿಕೆ ನಿಯಮಾವಳಿಯಂತೆ ರಾಣಿಬೆನ್ನೂರ ಎಪಿಎಂಸಿ ವ್ಯಾಪ್ತಿಯಲ್ಲಿ ಲೈಸನ್ಸ್ ಪಡೆಯದೇ ಇರುವ ವ್ಯಕ್ತಿಗಳಿಗೂ ರಾಣಿಬೆನ್ನೂರ ಎಪಿಎಂಸಿ ಕಾರ್ಯದರ್ಶಿ ಅರ್ಜಿ ಫಾರಂಗಳನ್ನು ನೀಡುವ ಮೂಲಕ ಹಂಚಿಕೆ ನಿಯಮಾವಳಿ ಗಾಳಿಗೆ ತೂರಿದ್ದಾರೆ ಎಂದು ಮೆಣಸಿನಕಾಯಿ ವರ್ತಕರು ಆರೋಪಿಸಿದ್ದಾರೆ.