ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ಮುಸ್ಲಿಂ ಯುವಕನಿಂದ ಕೊಲೆಯಾದ ರಂಜಿತಾ ಬನಸೋಡೆ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಗರದ ಕೆಎಂಸಿಆರ್‌ಐನಲ್ಲಿ ನಡೆಸಿ ಪೊಲೀಸ್ ಬಂದೋಬಸ್ತ್ ನಡುವೆ ಭಾನುವಾರ ಯಲ್ಲಾಪುರಕ್ಕೆ ಕಳುಹಿಸಿಕೊಡಲಾಯಿತು.

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ಮುಸ್ಲಿಂ ಯುವಕನಿಂದ ಕೊಲೆಯಾದ ರಂಜಿತಾ ಬನಸೋಡೆ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಗರದ ಕೆಎಂಸಿಆರ್‌ಐನಲ್ಲಿ ನಡೆಸಿ ಪೊಲೀಸ್ ಬಂದೋಬಸ್ತ್ ನಡುವೆ ಭಾನುವಾರ ಯಲ್ಲಾಪುರಕ್ಕೆ ಕಳುಹಿಸಿಕೊಡಲಾಯಿತು.

ಕೊಲೆಯಾದ ರಂಜಿತಾ ಅವರನ್ನು ಕಳೆದ ರಾತ್ರಿ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ತರುವ ವೇಳೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶವವನ್ನು ಕೆಎಂಸಿಆರ್‌ಐ ಶವಗಾರದಲ್ಲಿ ಇಡಲಾಗಿತ್ತು. ತಜ್ಞ ವೈದ್ಯರ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ 11ರಿಂದ 12.30ರ ವರೆಗೆ ಶವದ ಮರಣೋತ್ತರ ಪರೀಕ್ಷೆ ನಡೆಯಿತು. ಆನಂತರ ರಂಜಿತಾ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಪೊಲೀಸರ ನೇತೃತ್ವದಲ್ಲಿ ಯಲ್ಲಾಪುರದ ಕಾಳಮ್ಮನಗರ ಆಶ್ರಯ ಕಾಲನಿಗೆ ಕಳುಹಿಸಿಕೊಡಲಾಯಿತು.

ಶವಾಗಾರದ ಎದುರು ಪ್ರತಿಭಟನೆ

ಇದಕ್ಕೂ ಮೊದಲು ಹಿಂದೂ ಪರ ಹಾಗೂ ದಲಿತಪರ ಸಂಘಟನೆಗಳು ಒಗ್ಗೂಡಿ ಕೆಎಂಸಿಆರ್‌ಐನ ಶವಾಗಾರದ ಎದುರು ಪ್ರತಿಭಟನೆ ನಡೆಸಿದರು. ದಲಿತ ಮೇಲಿನ ದೌರ್ಜನ್ಯಕ್ಕೆ ಖಂಡಿಸಿದರು. ಮೃತ ಮಹಿಳೆ ಕುಟುಂಬಕ್ಕೆ ನ್ಯಾಯ ದೊರಕಿಸುವಂತೆ ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಪೊಲೀಸರು ಮಧ್ಯಸ್ಥಿಕೆ ವಹಿಸಿ ಶವವನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡುವಂತೆ ವಿನಂತಿಸಿದ ನಂತರ ಪ್ರತಿಭಟನೆ ಹಿಂಪಡೆದರು.

500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಆ್ಯಂಬುಲೆನ್ಸ್ ಸಾಗುವ ಕೆಎಂಸಿಆರ್‌ಐ ಮುಖ್ಯದ್ಯಾರ, ಬಿಆರ್‌ಟಿಎಸ್ ಕಾರಿಡಾರ್, ಹೊಸೂರು ವೃತ್ತ, ವಾಣಿ ವಿಲಾಸ್ ಸರ್ಕಲ್, ಎಂ.ಟಿ. ಮಿಲ್‌ ರೋಡ್, ಭಾರತ್ ಸರ್ಕಲ್, ಕಾರವಾರ ರಸ್ತೆ, ಇಂಡಿಪಂಪ್ ಮಾರ್ಗದುದ್ದಕ್ಕೂ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.

ಇಂಡಿಪಂಪ್ ಬಳಿ ಕೆಲಸಮಯ ರಸ್ತೆ ತಡೆದು ಪ್ರತಿಭಟನೆ ನಡೆಸಿದ ದಲಿತ ಸಂಘಟನೆ ಹಾಗೂ ಹಿಂದೂಪರ ಕಾರ್ಯಕರ್ತರು ಯುವತಿ ಕೊಲೆಗೆ ನ್ಯಾಯ ಒದಗಿಸುವಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ದಲಿತ ವಿಮೋಚನಾ ಸಮಿತಿಯ ಶ್ರೀಧರ ಕಂದಗಲ್, ಮುಖಂಡರಾದ ಮಹೇಂದ್ರ ಕೌತಾಳ, ಮಾರುತಿ ದೊಡ್ಡಮನಿ, ಸುರೇಶ ಖಾನಾಪುರ ಸೇರಿದಂತೆ ದಲಿತ ಮತ್ತು ಹಿಂದೂಪರ ಸಂಘಟನೆ ಮುಖಂಡರು ಭಾಗವಹಿಸಿದ್ದರು.