12 ಎಕರೆ ಸಿಕ್ಕರೂ ಹಣ ಕಟ್ಟಿರಲಿಲ್ಲ ರನ್ಯಾ ರಾವ್‌!

| Published : Mar 11 2025, 12:50 AM IST

ಸಾರಾಂಶ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರನ್ಯಾ ರಾವ್‌ಗೆ ಸಂಬಂಧಿಸಿದ ಸಂಸ್ಥೆಗೆ ಕೆಐಎಡಿಬಿಯಿಂದ ಯಾವುದೇ ಭೂಮಿ ಹಂಚಿಕೆ ಮಾಡಿಲ್ಲ ಎಂದು ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ. ಮಹೇಶ್‌ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ರನ್ಯಾ ರಾವ್‌ಗೆ ಸಂಬಂಧಿಸಿದ ಸಂಸ್ಥೆಗೆ ಕೆಐಎಡಿಬಿಯಿಂದ ಯಾವುದೇ ಭೂಮಿ ಹಂಚಿಕೆ ಮಾಡಿಲ್ಲ ಎಂದು ಕೆಐಎಡಿಬಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ. ಮಹೇಶ್‌ ಸ್ಪಷ್ಟಪಡಿಸಿದ್ದಾರೆ.

ರನ್ಯಾ ರಾವ್‌ ಒಡೆತನದ ಸ್ಟೀಲ್‌ ಟಿಎಂಟಿ ಬಾರ್‌ ಉತ್ಪಾದನಾ ಸಂಸ್ಥೆಗೆ ಕೆಐಎಡಿಬಿಯಿಂದ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಹಂಚಿಕೆ ಮಾಡಲಾಗಿದೆ ಎಂಬ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಂ. ಮಹೇಶ್‌, 2023ರ ಜನವರಿ 24ರಂದು ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ರನ್ಯಾ ರಾವ್‌ಗೆ ಸಂಬಂಧಿಸಿದ ಸ್ಟೀಲ್‌ ಟಿಎಂಟಿ ಬಾರ್‌ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಶಿರಾದಲ್ಲಿ 12 ಎಕರೆ ಭೂಮಿ ನೀಡುವಂತೆಯೂ ಕೋರಿದ್ದರು.

ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಕೆಐಎಡಿಬಿ ಪ್ರತಿ ಎಕರೆ ಭೂಮಿಗೆ 65 ಲಕ್ಷ ರು. ನಿಗದಿ ಮಾಡಿತ್ತು. ಆದರೆ, ರನ್ಯಾ ರಾವ್‌ ಸಂಸ್ಥೆಯಿಂದ ಯೋಜನೆಗೆ ಅನುಮೋದನೆ ಪಡೆದ ನಂತರ ಭೂಮಿ ಹಂಚಿಕೆಗೆ ಯಾವುದೇ ಪ್ರಸ್ತಾವನೆ ಅಥವಾ ಹಣ ಸಂದಾಯವಾಗಲಿಲ್ಲ. ಹೀಗಾಗಿ ರನ್ಯಾ ರಾವ್‌ ಸಂಸ್ಥೆಗೆ ಭೂಮಿ ಹಂಚಿಕೆಯನ್ನು ಕೆಐಎಡಿಬಿಯಿಂದ ಕೈಬಿಡಲಾಯಿತು ಎಂದು ಹೇಳಿದರು.

----

ರನ್ಯಾಗೆ ಜಮೀನು ಕೊಟ್ಟಿಲ್ಲ

ರನ್ಯಾ ರಾವ್‌ಗೆ ಸಂಬಂಧಿಸಿದ ಸ್ಟೀಲ್‌ ಟಿಎಂಟಿ ಉತ್ಪಾದನಾ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ 12 ಎಕರೆ ಭೂಮಿ ಮಂಜೂರು ಮಾಡಲು ನಿರ್ಧರಿಸಲಾಗಿತ್ತು. ಆದರೆ, ನಿಗದಿತ ಸಮಯದಲ್ಲಿ ಹಣ ಪಾವತಿಸದ ಕಾರಣ ಜಮೀನು ಹಂಚಿಕೆ ಮಾಡಿಲ್ಲ.

- ಎಂ.ಬಿ. ಪಾಟೀಲ್‌, ಕೈಗಾರಿಕಾ ಸಚಿವ