ಕಟ್ಟಡ ಏರಿ ಹೈಡ್ರಾಮ ಮಾಡಿದ ಅತ್ಯಾಚಾರದ ಆರೋಪಿ

| Published : Feb 10 2025, 01:45 AM IST

ಸಾರಾಂಶ

ಮಹಿಳೆ ಮೇಲಿನ ಅತ್ಯಾಚಾರದ ಆರೋಪ ಹೊತ್ತಿರುವ ಈ ಯುವಕ, ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಕರೆದೊಯ್ಯುತ್ತಿದ್ದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹೈಡ್ರಾಮ ನಡೆಸಿದ್ದಾನೆ.

ಧಾರವಾಡ:

ಇದೊಂದು ವಿಚಿತ್ರ ಆರೋಪಿಯೊಬ್ಬನಿಗೆ ಸಂಬಂಧಿಸಿದ ಸುದ್ದಿ. ಮಹಿಳೆ ಮೇಲಿನ ಅತ್ಯಾಚಾರದ ಆರೋಪ ಹೊತ್ತಿರುವ ಈ ಯುವಕ, ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಕರೆದೊಯ್ಯುತ್ತಿದ್ದಾಗ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಹೈಡ್ರಾಮ ನಡೆಸಿದ್ದಾನೆ.

2021ರಲ್ಲಿ ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರದ ಪ್ರಕರಣವೊಂದು ನಡೆದಿತ್ತು. ಜತೆಗೆ ಘಟನೆಯನ್ನು ಮೊಬೈಲ್‌ ಮೂಲಕ ವಿಡಿಯೋ ಸಹ ಮಾಡಿದ್ದರು. ಮೂವರು ಆರೋಪಿಗಳ ಪೈಕಿ ಅಣ್ಣಿಗೇರಿ ಮೂಲದ ವಿಜಯ ಉಣಕಲ್‌ ಸಹ ಪ್ರಮುಖ ಆರೋಪಿ. ಈತನ ಮೇಲೆ ಹಲವು ಕಳ್ಳತನದ ಪ್ರಕರಣಗಳು ಸಹ ದಾಖಲಾಗಿವೆ. ಈ ಪ್ರಕರಣದಲ್ಲಿ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ವಿಜಯ, ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದನು. ನಿಯಮಾವಳಿಯಂತೆ ಮುಂದಿನ ದಿನಗಳಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಈತ ಪದೇ ಪದೇ ಗೈರಾಗುತ್ತಿದ್ದನು. ಇದೇ ಕಾರಣಕ್ಕೆ ನ್ಯಾಯಾಲಯವು ಈತನ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದ ಅಣ್ಣಿಗೇರಿ ಪೊಲೀಸರು ಭಾನುವಾರ ನ್ಯಾಯಾಲಯದ ರಜೆ ಕಾರಣದಿಂದ ಧಾರವಾಡದಲ್ಲಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಜೈಲಿಗೆ ಬಿಡಲು ಹೊರಟಾಗ ಮಲಪ್ರಭಾ ನಗರದ ಬಳಿ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡ ಏರಿದ್ದಾನೆ. ಯಾವುದೇ ಕಾರಣಕ್ಕೂ ಕೆಳಗೆ ಇಳಿದು ಬರುವುದಿಲ್ಲ ಎಂದು ಪಟ್ಟುಹಿಡಿದಿದ್ದಾನೆ. ತನಗೆ ನ್ಯಾಯ ಬೇಕು ಎಂದು ಕೂಗಿ ಜನರನ್ನು ಕೂಡಿಸಿದ್ದಾನೆ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.

ನ್ಯಾಯಾಧೀಶರ ಬೇಡಿಕೆ ಇಟ್ಟ:

ಸ್ಥಳಕ್ಕೆ ನ್ಯಾಯಾಧೀಶರು ಬರಬೇಕು. ಅವರು ಬಂದರೆ ಮಾತ್ರ ಕೆಳಗೆ ಬರುತ್ತೇನೆ, ಇಲ್ಲದೇ ಹೋದರೆ ಬೀಳುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದನ್ನೆಲ್ಲ ಗಮನಿಸಿದ ಮಾಧ್ಯಮ ಪ್ರತಿನಿಧಿಗಳು ಆತನ ಮನವೊಲಿಸಲು ಯತ್ನಿಸಿದ್ದಾರೆ, ಪ್ರಯೋಜನವಾಗಿಲ್ಲ. ಆಗ, ಘಟನೆ ನೋಡಲು ಉಪನ್ಯಾಸಕ ಡಾ. ವಿಶ್ವನಾಥ ಚಿಂತಾಮಣಿ ಬಂದಿದ್ದರು. ಅವರು ಕಪ್ಪು ಬಣ್ಣದ ಕೋಟ್‌ ಧರಿಸಿದ್ದರು. ಮಾಧ್ಯಮದವರು ಅವರನ್ನೇ ನ್ಯಾಯಾಧೀಶರೆಂದು ನಂಬಿಸಿದ್ದಾರೆ. ಅವರ ಸಲಹೆಯಂತೆ ಚಿಂತಾಮಣಿ ಕಟ್ಟಡದ ಮೇಲ್ಭಾಗಕ್ಕೆ ಹೋಗಿ, ನಾನೇ ಜಡ್ಜ್. ನಿನಗೆ ಏನೂ ಆಗೋದಿಲ್ಲ, ಬಾ ಹೇಳಿ ಆತನ ಮನವೊಲಿಸಿ ಕೆಳಗೆ ಬರುವಂತೆ ಮಾಡಿದ್ದಾರೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಗಟ್ಟಿಯಾಗಿ ಹಿಡಿದು ಕಾರಾಗೃಹಕ್ಕೆ ಕರೆದೊಯ್ದರು. ಸಮಯಪ್ರಜ್ಞೆ ತೋರಿದ ಮಾಧ್ಯಮ ಪ್ರತಿನಿಧಿಗಳಿಗೆ ಪೊಲೀಸರು ಧನ್ಯವಾದ ಅರ್ಪಿಸಿದರು.