ಬಾಲಕಿ ಮೇಲೆ ಅತ್ಯಾಚಾರ, ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

| Published : May 15 2025, 01:36 AM IST

ಸಾರಾಂಶ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹56 ಸಾವಿರ ದಂಡ ವಿಧಿಸಿದೆ.

ರೋಣ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಆರೋಪಿಗೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹56 ಸಾವಿರ ದಂಡ ವಿಧಿಸಿದೆ.

ಇಲ್ಲಿನ ಕೂದಲು ಮಾರುವ ವ್ಯಾಪಾರಿ ಲಕ್ಷ್ಮಣ ಗಂಗಪ್ಪ ಕೊರವರ (23) ಶಿಕ್ಷೆಗೊಳಗಾದ ಅಪರಾಧಿ.

ಆಶ್ರಯ ಕಾಲೋನಿ ನಿವಾಸಿಯಾಗಿರುವ ಅಪರಾಧಿ 2022ರ ಆ. 30ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬಹಿರ್ದೆಸೆಗೆ ಹೋಗುವ ಸಂದರ್ಭದಲ್ಲಿ 17 ವರ್ಷದ ಬಾಲಕಿಯನ್ನು ಅಪಹರಣ ಮಾಡಿ, ಹಳ್ಳಿಗಳಿಗೆ ಕೂದಲು ವ್ಯಾಪಾರ ಮಾಡಲು ಕರೆದುಕೊಂಡು ಹೋಗಿದ್ದ. ನಂತರ 10-15 ದಿವಸಗಳ ಬಿಟ್ಟು ರೋಣ ಶಹರದ ಆಶ್ರಯ ಕಾಲೋನಿಯಲ್ಲಿ ತನ್ನ ಅಣ್ಣನ ಹೆಂಡತಿಯ ಮನೆಯಲ್ಲಿದ್ದು, ಆ ಮನೆಯಲ್ಲಿ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ. ಆಗ ಅವಳ ಮೇಲೆ ಪದೆ ಪದೆ ಅತ್ಯಾಚಾರ ಮಾಡಿದ್ದ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ರೋಣ ಸಿಪಿಐ ಶಿವಾನಂದ ವಾಲಿಕಾರ ಪ್ರಕರಣದ ತನಿಖೆಯನ್ನು ಕೈಕೊಂಡು 2022ರ ಅ. 18ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್‌ (ವಿಶೇಷ ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ವರ ಶೆಟ್ಟಿ ಅವರು ಅವರಾಧಿಗೆ ಶಿಕ್ಷೆ, ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ ₹ 6 ಲಕ್ಷ ರುಪಾಯಿಗಳ ಪರಿಹಾರ ಹಾಗೂ ದಂಡದ ಹಣವನ್ನು ನೀಡಲು ಆದೇಶಿಸಿದ್ದು, ಒಂದು ವೇಳೆ ತಪ್ಪಿದಲ್ಲಿ ಮತ್ತೆ ಹೆಚ್ಚುವರಿ 3 ವರ್ಷ ಕಾರಾಗೃಹ ಶಿಕ್ಷೆ ಅನುಭವಿಸಲು ಆದೇಶಿಸಿದೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.